ಧಾರವಾಡ: ಮಿದುಳು ನಿಷ್ಕ್ರಿಯವಾಗಿದ್ದ ಮಹಿಳೆಯೊಬ್ಬರ ಅಂಗಾಂಗಗಳನ್ನು ಕುಟುಂಬದವರ ಒಪ್ಪಿಗೆ ಮೇರೆಗೆ ದಾನವಾಗಿ ಪಡೆದು ಶನಿವಾರ ಇಲ್ಲಿಯ ಎಸ್ಡಿಎಂ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಕೊಂಡೊಯ್ದು ಏರ್ಲಿಫ್ಟ್ ಮಾಡುವ ಮೂಲಕ ಬೆಂಗಳೂರಿಗೆ ರವಾನಿಸಿದ್ದು, ಈ ಭಾಗದಲ್ಲಿ ಇದೊಂದು ಅಪರೂಪದ ಸಾಧನೆ ಎನಿಸಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ 54 ವರ್ಷದ ಸುನಂದಾ ಸತೀಶ ನಾಯ್ಕ ಎಂಬುವರು ಜೂ. 23ರಂದು ಮನೆಯಲ್ಲಿ ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಚಿಕಿತ್ಸೆಗಾಗಿ ನಗರದ ಎಸ್ಡಿಎಂ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಎರಡು ದಿನಗಳ ಚಿಕಿತ್ಸೆಯ ನಂತರವೂ ಚೇತರಿಕೆಯಾಗದೆ ಮಿದುಳು ನಿಷ್ಕ್ರಿಯವಾಗಿತ್ತು. ಜೂ. 25ರ ಸಂಜೆ ಕುಟುಂಬದವರೊಂದಿಗೆ ರ್ಚಚಿಸಿದ ವೈದ್ಯರು, ಮಿದುಳು ನಿಷ್ಕ್ರಿಯವಾಗಿರುವುದನ್ನು ದೃಢಪಡಿಸಿದರು. ಕುಟುಂಬದವರ ಒಪ್ಪಿಗೆಯ ನಂತರ ಕಾನೂನಾತ್ಮಕವಾಗಿ ಅಂಗಾಂಗಳಾದ ಯಕೃತ್, 2 ಕಿಡ್ನಿ, 2 ಕಣ್ಣುಗಳನ್ನು ಬೇರ್ಪಡಿಸಿದರು. ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ‘ಜೀವ ಸಾರ್ಥಕತೆ’ಯಲ್ಲಿ ನೋಂದಾಯಿಸಿದವರ ಅಂಗಾಂಗ ಕಸಿಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಅದೇ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕಸಿ ಮಾಡಲು ಕಳುಹಿಸಲು ನಿರ್ಧರಿಸಲಾಯಿತು.
ಎಸ್ಡಿಎಂ ಆಸ್ಪತ್ರೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದವರೆಗೆ ಅಂಗಾಂಗವನ್ನು ಆಂಬುಲೆನ್ಸ್ನಲ್ಲಿ ಸಾಗಿಸಬೇಕಿತ್ತು. ಎಸ್ಡಿಎಂ ಆಸ್ಪತ್ರೆಯವರು ಶನಿವಾರ ಬೆಳಗ್ಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸ್ ಇಲಾಖೆಯನ್ನು ಕೋರಿದ್ದರು. ಬೆಳಗ್ಗೆ 10.40ಕ್ಕೆ ಎಸ್ಡಿಎಂ ಆಸ್ಪತ್ರೆಯಿಂದ ಹೊರಟ ಅಂಗಾಂಗವನ್ನು ಹೊತ್ತ ಆಂಬುಲೆನ್ಸ್, ವಿಮಾನ ನಿಲ್ದಾಣದವರೆಗಿನ 16 ಕಿ.ಮೀ. ದೂರವನ್ನು ಕೇವಲ ಅಂದಾಜು 12 ನಿಮಿಷಗಳಲ್ಲಿ ಕ್ರಮಿಸಿತು.
ಯಶಸ್ವಿ ಕಸಿ ನಿರ್ವಹಿಸಿದ ವೈದ್ಯರ ತಂಡ, ಸಹಕರಿಸಿದ ಜೀವ ಸಾರ್ಥಕತೆ ಮತ್ತು ಮೋಹನ್ ಫೌಂಡೆಶನ್ಗೆ ಎಸ್ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ ಅಭಿನಂದನೆ ಸಲ್ಲಿಸಿದ್ದಾರೆ. ಅಂಗಾಂಗ ದಾನ ಮಾಡಿದ ಕುಟುಂಬದ ಸದಸ್ಯರು, ತುರ್ತು ಸಮಯದಲ್ಲಿ ಜೀರೋ ಟ್ರಾಫಿಕ್ಗೆ
ಸಹಕರಿಸಿದ ಬಿಆರ್ಟಿಎಸ್ ಪ್ರಾದೇಶಿಕ ವ್ಯವಸ್ಥಾಪಕ ಗಣೇಶ ರಾಠೋಡ ಹಾಗೂ ಸಿಬ್ಬಂದಿ ಮತ್ತು ಉಪ ಪೊಲೀಸ್ ಆಯುಕ್ತ ರಾಮರಾಜನ್ ಮತ್ತು ತಂಡದವರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಸಾವಿನಲ್ಲೂ ಸಾರ್ಥಕತೆ
ಎರಡು ಕಣ್ಣು, ಎರಡು ಕಿಡ್ನಿಗಳನ್ನು ಎಸ್ಡಿಎಂ ಆಸ್ಪತ್ರೆಯಲ್ಲಿ ನೋಂದಾಯಿಸಿಕೊಂಡಿದ್ದ ವ್ಯಕ್ತಿಗಳಿಗೆ ಕಸಿ ಮಾಡಲಾಯಿತು. ನೆಫ್ರೋಲಜಿ, ಯುರೋಲಜಿ, ಪ್ಲಾಸ್ಟಿಕ್ ಸರ್ಜರಿ, ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಅರವಳಿಕೆ ವಿಭಾಗದ ವೈದ್ಯರ ತಂಡದವರು ಅಂಗಾಂಗ ಕಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಯಕೃತ್ತನ್ನು ಬೆಂಗಳೂರಿನ ಆಸ್ಟರ್ ಆರ್.ವಿ. ಆಸ್ಪತ್ರೆಗೆ ಏರ್ ಆಂಬುಲೆನ್ಸ್ ಮೂಲಕ ಕಳುಹಿಸಲಾಯಿತು.