ವಿಮಾನ ನಿಲ್ದಾಣದ ಬಳಿ ಮೊದಲ ಇ ಶೌಚಗೃಹ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಮೊದಲ ಇ ಶೌಚಗೃಹ ಸ್ಮಾರ್ಟ್​ಸಿಟಿ ಯೋಜನೆಯಡಿ ಇಲ್ಲಿನ ಗೋಕುಲ ರಸ್ತೆ ವಿಮಾನ ನಿಲ್ದಾಣ ಬಳಿಯ ಕೆಇಸಿ ಸಂತೆ ಬಯಲಿನಲ್ಲಿ ಪ್ರಾರಂಭಗೊಂಡಿದೆ.  ಸುಮಾರು 4.50 ಲಕ್ಷ ರೂ.ಗೆ ಒಂದರಂತೆ ಒಟ್ಟು ಎರಡು ಇ ಶೌಚಗೃಹಗಳನ್ನು ನಿರ್ವಿುಸಲಾಗಿದೆ. ಕಟ್ಟಡದ ಮೇಲೆ ಸುಮಾರು 2 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿದೆ.  ಶೌಚಗೃಹಗಳ ನಿರ್ವಹಣೆ ಕಷ್ಟಸಾಧ್ಯ. ಹೀಗಾಗಿ ಇ ಶೌಚಗೃಹದಲ್ಲಿ ಸ್ವಚ್ಛತೆ ತಾನಾಗಿಯೇ ನಿರ್ವಹಣೆಗೊಳ್ಳುತ್ತದೆ.  ಶೌಚಗೃಹಕ್ಕೆ ಹೋಗಬಯಸುವವರು 2 ರೂ. ನಾಣ್ಯ ಹಾಕಿದರಷ್ಟೆ ಬಾಗಿಲು ತೆರೆದುಕೊಳ್ಳುತ್ತದೆ. ಬಾಗಿಲು ತೆರೆಯುವ ಮುಂಚೆ ಪ್ರತಿ ಬಾರಿ ನೀರಿನಿಂದ ಸ್ವಚ್ಛಗೊಳ್ಳುತ್ತದೆ. ಒಳಗೆ ಕಾಲಿಟ್ಟ ನಂತರ ತಾನಾಗಿಯೇ ಬಾಗಿಲು ಮುಚ್ಚಿಕೊಳ್ಳುತ್ತದೆ. ನಂತರ ಮತ್ತೊಮ್ಮೆ ಸ್ವಚ್ಛಗೊಳ್ಳುತ್ತದೆ. ಇದಕ್ಕೆ ನೀರಿನ ಬಳಕೆಯೂ ಕಡಿಮೆ.

 ಕೇರಳ ತಿರುವನಂತಪುರದ ಏರಮ್ ಸೈಂಟಿಫಿಕ್ ಸೊಲ್ಯುಷನ್ಸ್ ಸಂಸ್ಥೆ ಇ ಶೌಚಗೃಹ ನಿರ್ವಹಣೆ ಕೈಗೆತ್ತಿಕೊಂಡಿದೆ. ಇನ್ನೂ 17 ಇ ಶೌಚಗೃಹ ನಿರ್ವಿುಸುವ ಉದ್ದೇಶವಿದೆ. 
-ಎಸ್.ಎಚ್. ನರೇಗಲ್, ವಿಶೇಷ ಅಧಿಕಾರಿ, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ

ನಿರ್ವಹಣೆ ಅತಿ ಮುಖ್ಯ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ಬೆಂಗಳೂರಿನ ಯಶವಂಪುರ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಇ ಶೌಚಗೃಹ ನಿರ್ವಿುಸಿದೆ. ಆದರೆ, ಸಮರ್ಪಕ ನಿರ್ವಹಣೆ ಇಲ್ಲದೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೇರಳದ ಹಲವಾರು ಪ್ರಮುಖ ನಗರಗಳಲ್ಲಿ ಇ ಶೌಚಗೃಹ ವ್ಯವಸ್ಥೆ ಯಶಸ್ವಿಯಾಗಿ ಮುನ್ನಡೆದಿದೆ.