ವಿಪ್ ಉಲ್ಲಂಘಿಸಿದವರಿಗೆ ನೋಟಿಸ್

ಧಾರವಾಡ:ಜಿ.ಪಂ. ಅಧ್ಯಕ್ಷರಾಗಿದ್ದ ಚೈತ್ರಾ ಶಿರೂರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಕಾಂಗ್ರೆಸ್ ಪರ ಮತ ಚಲಾಯಿಸಿದ್ದ ಬಿಜೆಪಿಯ ನಾಲ್ವರು ಸದಸ್ಯರಿಗೆ ರಾಜ್ಯ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಗರಗ ಕ್ಷೇತ್ರದ ರತ್ನಾ ಪಾಟೀಲ, ಗುಡಗೇರಿ ಕ್ಷೇತ್ರದ ಜ್ಯೋತಿ ಬೆಂತೂರ, ಗಳಗಿ ಕ್ಷೇತ್ರದ ಅಣ್ಣಪ್ಪ ದೇಸಾಯಿ, ತಬಕದಹೊನ್ನಿಹಳ್ಳಿಯ ಮಂಜವ್ವ ಹರಿಜನ ಅವರಿಗೆ ಆಯೋಗ ನೋಟಿಸ್ ನೀಡಿದ್ದು, ಮಾ. 19ರಂದು ಆಯೋಗದ ನ್ಯಾಯಾಂಗಣದಲ್ಲಿ ವಿಚಾರಣೆಗೆ ಖುದ್ದು ಹಾಜರಾಗಲು ಸೂಚಿಸಿದೆ.

ಹಿಂದಿನ ಅಧ್ಯಕ್ಷರಾಗಿದ್ದ ಚೈತ್ರಾ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಅರ್ಜಿ ಸಲ್ಲಿಸಿದ್ದರು. ಫೆ. 5ರಂದು ನಡೆದಿದ್ದ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಬಿಜೆಪಿಯ ನಾಲ್ವರು ಸದಸ್ಯರು ಕಾಂಗ್ರೆಸ್ ಪರ ನಿಂತಿದ್ದರು. ಬಿಜೆಪಿಯಿಂದ ವಿಪ್ ಜಾರಿ ಮಾಡಿದ್ದರೂ ಉಲ್ಲಂಘಿಸಿ ಮತ ಚಲಾಯಿಸುವ ಮೂಲಕ ಇಕ್ಕಟ್ಟಿಗೆ ಸಿಲುಕಿದ್ದರು.

ಕಾಂಗ್ರೆಸ್​ನ 11, ಓರ್ವ ಪಕ್ಷೇತರ ಹಾಗೂ ಬಿಜೆಪಿಯ ನಾಲ್ವರು ಸದಸ್ಯರು ಅವಿಶ್ವಾಸ ನಿರ್ಣಯ ಪರ ಮತ ಚಲಾಯಿಸಿದ್ದರಿಂದ ಚೈತ್ರಾ ಶಿರೂರ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಗೊಂಡಿದ್ದರು. ವಿಪ್ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ಮುಖಂಡರು, ಜಿಲ್ಲಾಧ್ಯಕ್ಷ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷರು ಜಿ.ಪಂ. ಸಿಇಒ ಮೂಲಕ ರಾಜ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರು.

ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987ರ ಪ್ರಕರಣ 4ರ ಅಡಿಯಲ್ಲಿ ಸಲ್ಲಿಸಿರುವ ಅಹವಾಲನ್ನು ಚುನಾವಣಾ ಆಯೋಗ ಪರಿಗಣಿಸಿದೆ. ಅಹವಾಲಿನ ಬಗ್ಗೆ ವಿಚಾರಣೆಗಾಗಿ ನಾಲ್ವರು ಸದಸ್ಯರಿಗೆ ಮಾ. 19ರಂದು ಮಧ್ಯಾಹ್ನ 3 ಗಂಟೆಗೆ ಖುದ್ದಾಗಿ ಹಾಜರಾಗುವಂತೆ ನೋಟಿಸ್​ನಲ್ಲಿ ಸೂಚಿಸಿದೆ.