ವಿಧಿಯ ಹೊರೆ ಅನಿವಾರ್ಯ

ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? |

ಬೆದರಿಕೆಯದರಿಂದ ನೀಗಿಪನು ಸಖನು ||

ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ |

ವಿಧಿಯಗಸ, ನೀಂ ಕತ್ತೆ – ಮಂಕುತಿಮ್ಮ ||

ಈ ಮುಕ್ತಕದಲ್ಲಿ ಸುಂದರ ನಿದರ್ಶನದ ಮೂಲಕ ಮಾನವಜೀವಿತವನ್ನು ವಿವರಿಸಲಾಗಿದೆ. ಕಥೆಗಳಲ್ಲಿ ಸಾಮಾನ್ಯವಾಗಿ ಕತ್ತೆಯನ್ನು ಸ್ವಸಾಮರ್ಥ್ಯದ ಅರಿವಿಲ್ಲದ ಬುದ್ಧಿಗೇಡಿಯನ್ನಾಗಿ ಚಿತ್ರಿಸಲಾಗುತ್ತದೆ. ಕಥೆಯ ಪ್ರಕಾರ ಬಟ್ಟೆಯನ್ನು ಮಡಿ ಮಾಡುವ ಅಗಸ ಕತ್ತೆಗೆ ಒಡೆಯ. ಆತನ ಆಣತಿಯಂತೆಯೇ ಕತ್ತೆಯು ನಡೆದುಕೊಳ್ಳುತ್ತದೆ. ಪ್ರತಿಭಟಿಸಲೋ, ತಪ್ಪಿಸಿಕೊಂಡು ಸ್ವತಂತ್ರವಾಗಿ ಬದುಕಲೋ ಅದಕ್ಕೆ ಸಾಧ್ಯವಿಲ್ಲ. ಆ ರೀತಿ ಒಡೆಯನು ಕತ್ತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾನೆ. ತನ್ನ ಮೇಲೆ ಎಷ್ಟು ಭಾರ ಹೊರಿಸಿದರೂ ಕತ್ತೆಯು ವಿರೋಧಿಸದೆ ಅದನ್ನು ಹೊತ್ತು ನಡೆಯುತ್ತದೆ. ಹೊರೆಯಿಳಿಸಿಕೊಂಡ ಮರುಕ್ಷಣಕ್ಕೆ ಇನ್ನೊಂದು ಹೊರೆಯನ್ನು ಹೇರಲಾಗುತ್ತದೆ. ಅತ್ಯಂತ ಸಾಧುಪ್ರಾಣಿಯಾಗಿ, ಭಯ ಮತ್ತು ಹಿಂಜರಿಕೆಯ ಸಾಕುಪ್ರಾಣಿಯಾಗಿ ಕತ್ತೆ ಜೀವಿಸುತ್ತದೆ.

ನಾವೂ ವಿಧಿಯೆಂಬ ಅಗಸನ ಆಜ್ಞೆಯಂತೆಯೇ ನಡೆಯುತ್ತಿರುವ ಕತ್ತೆಗಳು. ಎತ್ತ ಸಾಗುತ್ತಿದ್ದೇವೆ ಎಂಬ ಅರಿವು ನಮಗಿಲ್ಲ. ವಿಧಿಯು ಅವ್ಯಕ್ತವಾಗಿದ್ದುಕೊಂಡೇ ಅನೇಕ ಹೊರೆಗಳನ್ನು ಹೊರಿಸುತ್ತದೆ. ಸಂಸಾರ, ಉದ್ಯೋಗ, ಸಮಾಜಗಳೆಂಬ ನೆಲೆಯಲ್ಲಿ ಅದೆಷ್ಟೋ ಜವಾಬ್ದಾರಿಗಳನ್ನು ನಿಭಾಯಿಸುವ ನಾವು ಕೆಲವೊಮ್ಮೆ ಮುಗ್ಗರಿಸುತ್ತೇವೆ. ಏನೇ ಆದರೂ, ಎಷ್ಟು ದುಃಖಿಸಿದರೂ ವಿಧಿಯು ಯಾವ ವಿನಾಯಿತಿ ತೋರುವುದಿಲ್ಲ. ವಿಧಿಯ ನಿರ್ಧಾರಗಳನ್ನು ವಿರೋಧಿಸಿಲೋ, ಬದಲಾಯಿಸಲೋ ಸಾಧ್ಯವೂ ಇಲ್ಲ. ವಿಧಿಲಿಖಿತದಂತೆ ಅನಿರೀಕ್ಷಿತವಾಗಿ ಸಂಕಟ-ಸಮಸ್ಯೆಗಳಿಗೆ ಒಳಗಾದಾಗ ಕಂಗೆಡುತ್ತೇವೆ. ನಿರಾಶೆ, ಭಯಗಳಿಂದ ದಾರಿ ಕಾಣದಂತಾಗುತ್ತದೆ. ಇಂತಹ ದುಃಸ್ಥಿತಿಯಲ್ಲಿಯೇ ನಮ್ಮ ನಿಜವಾದ ಬಂಧುಗಳ ಪರಿಚಯವಾಗುತ್ತದೆ. ವಿಧಿಯ ಹೊರೆಯನ್ನು ಹೊರಲಾರದೆ, ಬದುಕು ಮುಗಿದೇಹೋಯಿತು ಎಂದು ಭೀತರಾದಾಗ ಆಸರೆಗಾಗಿ ಆರ್ತರಾಗುವುದು ಸಹಜ. ಆಗ ಸಹಾಯ ನೀಡಿ ಯಾರು ಆಧರಿಸುತ್ತಾರೋ ಅವರೇ ನಮ್ಮ ನಿಜವಾದ ಸ್ನೇಹಿತರು. ಸುಖದ ದಿನಗಳಲ್ಲಿ ಒಡನಾಡುವ ಆತ್ಮೀಯರು ಹಲವರಿರಬಹುದು. ಅದರೆ ಬೇಸರದ ವೇಳೆ ಸಂತೈಸುವವರು ವಿರಳ. ಹಾಗೇನಾದರೂ ಒದಗಿದರೆ ಅವರೇ ನಮ್ಮ ನಿಜವಾದ ಬಂಧುಗಳು.

ಹೀಗೆ ನೆರವಾಗುವವರಿದ್ದರೂ ನಮ್ಮ ನೋವುಗಳನ್ನು ನೇರವಾಗಿ ಅನುಭವಿಸಲು ಸಾಧ್ಯವಿಲ್ಲ. ಅಪಘಾತಕ್ಕೆ ಒಳಗಾದಾಗ ಯಾರೋ ಆತ್ಮೀಯರು ಆಸ್ಪತ್ರೆಗೆ ಸೇರಿಸಬಹುದು. ಆದರೆ ಗಾಯಾಳುವಿನ ನೋವನ್ನು ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ವಿಧಿಯು ಪೂರ್ವಾರ್ಜಿತ ಕರ್ಮದೋಷ, ಋಣಶೇಷ, ಆತ್ಮದೌನ್ನತ್ಯ ಮೊದಲಾದವುಗಳನ್ನು ಕರಾರುವಕ್ಕಾಗಿ ಲೆಕ್ಕ ಹಾಕಿಯೇ ಬದುಕಿನ ದಾರಿಯನ್ನು ರೂಪಿಸುತ್ತದೆ. ನಮ್ಮ ನಿರ್ಣಯಗಳು ವಿಧಿಯ ಎದುರು ನಿಲ್ಲಲಾರವು. ಆದ್ದರಿಂದ ಬದುಕಿನ ಎಲ್ಲ ಸನ್ನಿವೇಶಗಳನ್ನೂ ಬರಮಾಡಿಕೊಂಡು ಅನುಭವಿಸುವುದಷ್ಟೇ ನಮಗಿರುವ ಆಯ್ಕೆ.

ಬದುಕಿನ ಈ ಸಂದಿಗ್ಧತೆಯನ್ನು ಮೀರಲು ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಮಚಿತ್ತ ಬೆಳೆಸಿಕೊಳ್ಳಬೇಕು. ಎಷ್ಟು ಕಷ್ಟದ ಹೊರೆಯೇ ಆದರೂ ಧೃತಿಗೆಡದೆ ಅನುಭವಿಸಿಬಿಡಬೇಕು. ಹಾಗೆಯೇ ಹೊರಲಾರದ ಹೊಣೆಗಾರಿಕೆಗಳು ಹೆಗಲೇರಿದರೆ ಹೆದರುವುದಲ್ಲ. ಅರ್ಹರಾಗಿರುವುದರಿಂದಲೇ ಕಷ್ಟಗಳು ಆಕ್ರಮಿಸಿಕೊಳ್ಳುತ್ತವೆ. ಆಗ ತುಟಿಕಚ್ಚಿ ನಿಭಾಯಿಸುವುದೇ ಸರಿ. ಕೆಲವೊಮ್ಮೆ ಅಸಹನೀಯ ಕ್ಷಣಗಳು ಎದುರಾದಾಗ ನಿಯಾಮಕ ಶಕ್ತಿಗೆ ಶರಣಾದರೆ ದುರಿತಗಳ ತೀವ್ರತೆ ಕಡಿಮೆಯಾಗುತ್ತದೆ. ಭಗವದ್ ರೂಪವೇ ಆಪದ್ಬಾಂಧವನಾಗಿ ನಮ್ಮನ್ನು ಉದ್ಧರಿಸುತ್ತದೆ.

Leave a Reply

Your email address will not be published. Required fields are marked *