Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ವಿಧಾನಸೌಧದ ವಜ್ರಮಹೋತ್ಸವದ ನೆನಪಿಗೆ…

Sunday, 29.10.2017, 3:03 AM       No Comments

‘ಪುಟ್ಟಪ್ಪನವರೇ, ನೀವು ಅಕ್ಷರಗಳಲ್ಲಿ ಮಹಾಕಾವ್ಯ ಬರೆದಿದ್ದೀರಿ. ನಾನು ಕಲ್ಲಿನಲ್ಲಿ ಆ ಕೆಲಸ ಮಾಡಿದ್ದೇನೆ!’

-ಕುವೆಂಪು ಅವರಿಗೆ ವಿಧಾನಸೌಧದ ಹೊಸಕಟ್ಟಡವನ್ನು ತೋರಿಸಿ ಅದೊಂದು ಹೆಮ್ಮೆಯಿಂದ, ಅಭಿಮಾನದಿಂದ ಹೀಗಂದವರು ಕೆಂಗಲ್ ಹನುಮಂತಯ್ಯ.

ಈ ಕಟ್ಟಡ ನಮ್ಮ ನಾಡಿನ ಸ್ವಾಭಿಮಾನ, ಸದಭಿರುಚಿ ಮತ್ತು ಸೌಂದರ್ಯಾಭಿವ್ಯಕ್ತಿಯ ಪ್ರತಿಮಾರೂಪದಂತೆ ಕಾಣಬೇಕು. ಎತ್ತರಕ್ಕೆ ತಲೆಯೆತ್ತಿ, ಎದೆಯುಬ್ಬಿಸಿ, ಎಡಬಲದ ಬಾಹುಗಳನ್ನು ಉದ್ದುದ್ದಕ್ಕೆ ಚಾಚಿಕೊಂಡು ನಿಂತ ನಿಲುವು ಸರ್ವರನ್ನೂ ಒಳಗೊಳ್ಳುತ್ತೇನೆ ನ್ನುವುದರ ಸಂಕೇತವಾಗಿರಬೇಕು. ಬೆಂಗಳೂರಿಗೆ ಬಂದ ಪ್ರವಾಸಿ ಈ ವಾಸ್ತುವೈಭವವನ್ನು ಕಂಡು ಕ್ಷಣವಾದರೂ ವಿಸ್ಮಯಮೂಕನಾಗಿ ನಿಲ್ಲಬೇಕು!- ಅಂಥದೊಂದು ಕನಸನ್ನು ಕಣ್ಣಲ್ಲಿಟ್ಟುಕೊಂಡೇ ಈ ಮಹಾನ್ ಸೌಧವನ್ನು ಕಡೆದು ನಿಲ್ಲಿಸಿದ್ದರು ಕೆಂಗಲ್.

ಕೆಂಗಲ್ ಅವರಲ್ಲಿ ಇಂಥದೊಂದು ಕನಸು ಮೊಳೆತದ್ದು ಯಾವಾಗ ಗೊತ್ತೆ?

ಆಗ ನೆಹರು ಪ್ರಧಾನಿ. ಭಾರತಕ್ಕಿನ್ನೂ ಸ್ವಾತಂತ್ರ್ಯ ಬಂದ ಹೊಸದು. ಬ್ರಿಟನ್ನಿನ ಕೆಲವು ಗಣ್ಯರು ದೆಹಲಿಗೆ ಬಂದಿದ್ದರು. ಪ್ರಧಾನಿಯವರ ಅತಿಥಿಗಳು ಅವರು. ‘ನಿಮ್ಮ ದೆಹಲಿಯನ್ನೊಂದಿಷ್ಟು ನೋಡಬೇಕಲ್ಲ, ಪ್ರೖೆಮ್ ಮಿನಿಸ್ಟರ್!’ ಅಂದರು. ನೆಹರು ಆ ವಿದೇಶಿ ಗಣ್ಯರಿಗೆ ದೆಹಲಿ ತೋರಿಸಲು ಕೆಂಗಲ್ ಹನುಮಂತಯ್ಯ ಅವರನ್ನು ಕಳುಹಿಸಿದರು. ಕೆಂಗಲ್ ಅವರು ದೆಹಲಿಯಲ್ಲಿ ಯಾವ ಕಟ್ಟಡವನ್ನು ತೋರಿಸಿದರೂ, ‘ಇದು ಬ್ರಿಟಿಷ್ ವಾಸ್ತುಶಿಲ್ಪ, ಇದು ಯುರೋಪಿಯನ್ ವಾಸ್ತುಶಿಲ್ಪ. ನಿಮ್ಮ ಭಾರತೀಯ ವಾಸ್ತುಶಿಲ್ಪದ ಕಟ್ಟಡ ಯಾವುದೂ ಇಲ್ಲವೆ?’ ಅಂತ ಆ ಗಣ್ಯರು ಕೇಳಿದರು. ಆಗ ಕೆಂಗಲ್ ಎದೆಯಲ್ಲಿ ಮೊಳೆತುದೊಂದು ಮಹದಾಕಾಂಕ್ಷೆ- ಅವಕಾಶವಾದರೆ ಬೆಂಗಳೂರಿನಲ್ಲಿ ‘ಇದು ನೋಡಯ್ಯಾ ನಮ್ಮ ಹೆಮ್ಮೆಯ, ಅಭಿಮಾನದ ಭಾರತೀಯ ವಾಸ್ತುವಿನ್ಯಾಸದ ಕಟ್ಟಡ’ ಅಂತ ತೋರಿಸಬಹುದಾದುದೊಂದು ಕಟ್ಟಡ ನಿರ್ವಿುಸಬೇಕು!

ಭಾರತ ಸ್ವಾತಂತ್ರ್ಯ ಪಡೆದ ನಂತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾದವರು ಕೆ. ಚೆಂಗಲರಾಯ ರೆಡ್ಡಿ. ಆಗ ಸಚಿವಾಲಯದ ಕಚೇರಿಗಳಿದ್ದುದು ಈಗಿನ ವಿಧಾನಸೌಧದ ಎದುರಿಗಿರುವ ಅಠಾರಾ ಕಚೇರಿ ಕಟ್ಟಡದಲ್ಲಿ (ಈಗ ಅಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವಿದೆ). ಗ್ರೀಕ್-ರೋಮನ್ ವಾಸ್ತುಶೈಲಿಯ, ಕೆಂಪುವರ್ಣದ ಆ ಕಟ್ಟಡವನ್ನು ಮೈಸೂರಿನ ದೊರೆ ಚಾಮರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ರಾವ್ ಬಹದ್ದೂರ್ ಆರ್ಕಾಟ್ ನಾರಾಯಣಸ್ವಾಮಿ ಮೇಲುಸ್ತುವಾರಿಯಲ್ಲಿ, ನಾಲ್ಕೂವರೆ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಟ್ಟಲಾಗಿತ್ತು (1868). ಸ್ವಾತಂತ್ರ್ಯಾನಂತರದ ಸಚಿವಾಲಯದ ಕಚೇರಿಗಳಿಗೆ ಆ ಕಟ್ಟಡ ಇಕ್ಕಟ್ಟಾಗಿದ್ದುದರಿಂದ ಆಗಿನ ಮುಖ್ಯಮಂತ್ರಿಗಳಾದ ಕೆ.ಸಿ. ರೆಡ್ಡಿ ಅವರೇ ಒಂದು ಹೊಸ ಕಟ್ಟಡವನ್ನು ಕಟ್ಟಲು ಉದ್ದೇಶಿಸಿ, (ಆಗಿನ ಕಾಲಕ್ಕೆ) 30ರಿಂದ 40 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದ ಒಂದು ಪ್ಲಾನ್ ಮಾಡಿಸಿದ್ದರು. ಈಗಿರುವ ಜಾಗದಲ್ಲೇ ಆ ಕಟ್ಟಡದ ಶಂಕುಸ್ಥಾಪನೆಯನ್ನು 1951ರ ಜುಲೈ 13ರಂದು ಆಗಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ನೆರವೇರಿಸಿದರು. ಆಗ ಕೆಂಗಲ್ ಹನುಮಂತಯ್ಯನವರು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಉಪನಾಯಕರಾಗಿದ್ದರು. ಆಗ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರು ಹೊಸ ಸಚಿವಾಲಯ ಕಟ್ಟಡದ ವಿನ್ಯಾಸವನ್ನು ಹನುಮಂತಯ್ಯನವರಿಗೆ ತೋರಿಸಿದರು. ಹನುಮಂತಯ್ಯ ಆ ವಿನ್ಯಾಸ ಚೆನ್ನಾಗಿಲ್ಲವೆಂದು ನೇರವಾಗಿ ಹೇಳಿದರು. ಅದಕ್ಕೆ ಮುಖ್ಯಮಂತ್ರಿಗಳು ತಮಾಷೆಯಾಗಿ, ‘ಮುಂದೆ ಮುಖ್ಯಮಂತ್ರಿಗಳಾಗುವವರು ನೀವೇ ಆದ್ದರಿಂದ ನಿಮ್ಮ ಕಲ್ಪನೆಗಳನ್ನು ಈ ಯೋಜನೆಯಲ್ಲಿ ಸಾಕಾರಗೊಳಿಸಬಹುದು’ ಅಂದಿದ್ದರು.

ಮುಂದೆ ಹನುಮಂತಯ್ಯನವರೇ ಮುಖ್ಯಮಂತ್ರಿಯಾದಾಗ, ಸರ್ಕಾರದ ಮುಖ್ಯ ಇಂಜಿನಿಯರ್, ಸರ್ಕಾರದ ವಾಸ್ತುಶಿಲ್ಪಿ ಮತ್ತಿತರ ಹಿರಿಯ ಅಧಿಕಾರಿಗಳ ಸಭೆ ಕರೆದು ‘ಸಚಿವಾಲಯ ಕಟ್ಟಡಕ್ಕೆ ಈಗ ಮಾಡಿರುವ ವಿನ್ಯಾಸ ನನಗೆ ಸರಿಕಾಣಿಸುತ್ತಿಲ್ಲ. ನಮ್ಮ ಪರಂಪರೆ, ಸಂಸ್ಕೃತಿಗಳನ್ನು ಪ್ರತಿನಿಧಿಸುವಂಥ ಮತ್ತೊಂದು ನಕ್ಷೆ ಬರೆಯಿರಿ. ಅದರಲ್ಲಿ ನಮ್ಮ ಮೈಸೂರು ರಾಜ್ಯದ ಕಲಾಸಂಪತ್ತು ಬಿಂಬಿತವಾಗಬೇಕು. ಅಮೆರಿಕ ಮಾದರಿಯ ಸರಳ ಬೋಳು ಮಾದರಿಗಳನ್ನು ಬರೆಯಬೇಡಿ. ಎಲ್ಲ ಆಧುನಿಕ ಸೌಲಭ್ಯ ಮತ್ತು ಅನುಕೂಲಗಳೂ ಇರುವ ಕಟ್ಟಡದಲ್ಲಿ ನಮ್ಮ ಪ್ರಾಚೀನ ಭಾರತೀಯ ವಾಸ್ತುಶಿಲ್ಪದ ಸೊಬಗು ಕಾಣಿಸಬೇಕು’ ಅಂದರು. ಇಷ್ಟು ಹೇಳಿದರೇ ವಿನಾ, ಈ ಕಟ್ಟಡಕ್ಕೆ ಎಷ್ಟು ವೆಚ್ಚ ಮಾಡಬಹುದೆಂಬ ಅಂದಾಜನ್ನು ಹೇಳಲಿಲ್ಲ. ಏಕೆಂದರೆ ಆ ಕಟ್ಟಡದ ಗಾತ್ರ, ವಿಸ್ತಾರ, ವೈಭವಗಳಿಗೆ ತಕ್ಕಂತೆ ವೆಚ್ಚ ಮಾಡಬೇಕೇ ಹೊರತು ವೆಚ್ಚದ ಮಿತಿ ಹಾಕಿಕೊಂಡು ಕಟ್ಟಡದ ವಿನ್ಯಾಸವನ್ನು ರೂಪಿಸಬಾರದೆಂಬುದು ಹನುಮಂತಯ್ಯನವರ ಆಲೋಚನೆಯಾಗಿತ್ತು. ಅದು ಮಾತ್ರವಲ್ಲದೆ ಆ ಕಟ್ಟಡ ಇಡೀ ಭಾರತ ದಲ್ಲೇ ಏಕಮೇವ ಎನ್ನುವಂತೆ ನಿರ್ವಣವಾಗಬೇಕೆಂಬುದು ಅವರ ದೃಢಸಂಕಲ್ಪವಾಗಿತ್ತು.

ಮೂರು ಅಂತಸ್ತಿನ ಬೃಹತ್ ಕಟ್ಟಡದ ನಕ್ಷೆಯನ್ನು ಆ ಅಧಿಕಾರಿಗಳ ಸಮಿತಿ ತಯಾರಿಸಿತು. ಆ ಹೊತ್ತಿಗಾಗಲೇ ಹನುಮಂತಯ್ಯನವರು ಜಗತ್ತಿನ ಬೇರೆಬೇರೆ ದೇಶಗಳಿಗೆ ಹೋದ ಸಂದರ್ಭದಲ್ಲಿ ಅಲ್ಲಿಯ ಬೃಹತ್ ಕಟ್ಟಡಗಳ ವಾಸ್ತುವಿನ್ಯಾಸವನ್ನು ಅಧ್ಯಯನ ಮಾಡಿಬಂದಿದ್ದರು. ತಾವು ನಿರ್ವಿುಸಲಿರುವ ಈ ಸಚಿವಾಲಯದ ಕಟ್ಟಡದ ಪೂರ್ಣಕಲ್ಪನೆ ಅವರಿಗಿಲ್ಲದಿದ್ದರೂ, ಈ ಕಟ್ಟಡವು ಬೃಹತ್ತು, ಮಹತ್ತು ಮತ್ತು ಸೌಂದರ್ಯದಲ್ಲಿ ಅದ್ವಿತೀಯವೆನ್ನಿಸಬೇಕಾದರೆ ಅದರಲ್ಲಿ ಏನೇನಿರಬೇಕು, ಅದು ಹೇಗಿರಬೇಕು ಎಂಬ ಬಗ್ಗೆ ವಿಧವಿಧವಾದ ಆಲೋಚನೆಗಳಿದ್ದವು. ಅಧಿಕಾರಿಗಳ ಸಮಿತಿ ಅಂಥದೊಂದು ಕಟ್ಟಡ ವಿನ್ಯಾಸವನ್ನು ರೂಪಿಸಿದ ಮೇಲೆ ಆ ಕಟ್ಟಡದ ಅಂದಾಜುವೆಚ್ಚವನ್ನು ನಿರ್ಧರಿಸಲು ಆ ಸಮಿತಿಗೆ ಹೇಳಿದರು. ಕಟ್ಟಡವನ್ನು ಪ್ರಾಮಾಣಿಕವಾಗಿ, ಸಮರ್ಥವಾಗಿ ಮತ್ತು ಅತ್ಯಂತ ತ್ವರಿತವಾಗಿ ನಿರ್ವಿುಸುವುದನ್ನು ಉಸ್ತುವಾರಿ ಮಾಡಲು ಒಂದು ಉಸ್ತುವಾರಿ ಸಮಿತಿಯನ್ನು ನೇಮಿಸಿದರು (23.04.1952). ಆ ಕಟ್ಟಡಕ್ಕೆ ‘ವಿಧಾನಸೌಧ’ ಎಂಬ ನಾಮಕರಣವನ್ನು ಆಗಲೇ ಹನುಮಂತಯ್ಯನವರು ಮಾಡಿಬಿಟ್ಟರು.

ಕಟ್ಟಡಕ್ಕೆ 40ರಿಂದ 50 ಲಕ್ಷ ರೂಪಾಯಿಗಳಷ್ಟು ವೆಚ್ಚವಾಗಬಹುದೆಂದು ಆ ಸಮಿತಿ ಯವರೂ, ಹನುಮಂತಯ್ಯನವರೂ ಅಂದಾಜನ್ನೇನೋ ಮಾಡಿದ್ದರು. ಆದರೆ ಕಾಲಕಾಲಕ್ಕೆ ತಲೆಯಲ್ಲಿ ಹೊಳೆಯುವ ಕಲ್ಪನೆಗಳನ್ನೂ, ಆಲೋಚನೆಗಳನ್ನೂ ಕಟ್ಟಡಕ್ಕೆ ಅಳವಡಿಸುತ್ತ ಹೋಗುವುದರಿಂದ ಆ ಅಂದಾಜನ್ನು ಮೀರಿ ಹಣವನ್ನು ಖರ್ಚುಮಾಡಬೇಕೆಂಬುದಾಗಿ ಹನುಮಂತಯ್ಯನವರು ಆಗಲೇ ನಿರ್ಧರಿಸಿಕೊಂಡಿದ್ದರು. ಆ ಸಮಿತಿಯ ನಡಾವಳಿಗಳಲ್ಲಿ ಮುಖ್ಯಮಂತ್ರಿ ಹನುಮಂತಯ್ಯನವರು ಹೀಗೊಂದು ವಾಕ್ಯವನ್ನು ಬರೆದಿದ್ದರು-

‘ಅರಮನೆಯಿಂದ ಶಾಸನಸಭೆಗೆ ಸಾರ್ವಭೌಮತ್ವ ಸ್ಥಿತ್ಯಂತರವಾಗಿದೆ. ಆದ್ದರಿಂದ ಈ ಕಟ್ಟಡವು ಅಧಿಕಾರದ ಸ್ಥಿತ್ಯಂತರವನ್ನೂ, ಜನತೆಯ ಅಧಿಕಾರ ಮತ್ತು ಘನತೆಯನ್ನೂ ಪ್ರತಿಫಲಿಸಬೇಕು. ಅದೇ ಈ ಕಟ್ಟಡದ ಪ್ರಮುಖ ವೈಶಿಷ್ಟ್ಯವಾಗಬೇಕು’.

ಕೆಂಗಲ್ ಹನುಮಂತಯ್ಯನವರು ಕಲೆ, ಸಾಹಿತ್ಯ, ಸಂವಿಧಾನ, ರಾಜನೀತಿ ಮುಂತಾದ ವಿಷಯಗಳಲ್ಲಿ ಮಹಾಮೇಧಾವಿಯಾಗಿದ್ದುದು ಮಾತ್ರವಲ್ಲದೆ ಈ ದೇಶದ ಅತಿಶ್ರೇಷ್ಠ ಅಡಳಿತಗಾರರೂ ಆಗಿದ್ದರು ಮತ್ತು ಪ್ರಜಾತಾಂತ್ರಿಕ ಭಾರತದ ಭವಿಷ್ಯದ ಬಗ್ಗೆ ಬಹುದೊಡ್ಡ ಕನಸುಗಾರರೂ ಆಗಿದ್ದರು. ‘ಕಟ್ಟಡದ ಗಾತ್ರ, ವಾಸ್ತುಶಿಲ್ಪ ಸೌಂದರ್ಯಗಳಲ್ಲಿ ಒಂದು ಮಹದರ್ಥ ಹೊಮ್ಮಬೇಕು. ನೋಡುಗರಿಗೆ ಆ ಅರ್ಥವನ್ನು ಆ ಕಟ್ಟಡವೇ ಅರುಹಬೇಕು. ಕಟ್ಟಡಗಳಿಗೂ ತಮ್ಮದೇ ಆದ ವ್ಯಕ್ತಿತ್ವ ಇರುತ್ತದೆ. ದೆಹಲಿಯ ಹಳೆಯ ಕೇಂದ್ರ ಶಾಸನಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಗಳು ನನಗೆ ನೆನಪಿವೆ. ಮೋತಿಲಾಲ್ ನೆಹರು, ಮಾಳವೀಯರಂಥ ನಾಯಕರು, ದೆಹಲಿಯಲ್ಲಿ ಸಂಸತ್ ಭವನಕ್ಕಿಂತ ಸಚಿವಾಲಯದ ಕಟ್ಟಡವೇ ಹೆಚ್ಚು ಪ್ರಾಧಾನ್ಯದ ಸ್ಥಳದಲ್ಲಿ ಇದೆ. ಇದು ಸರಿಯಲ್ಲ. ಸಚಿವಾಲಯಕ್ಕಿಂತ ಸಂಸತ್ ಭವನ ಹೆಚ್ಚು ಪ್ರಮುಖವಾಗಿರಬೇಕು ಎಂದು ಅವರು ಹೇಳುತ್ತಿದ್ದರು’- ಹಾಗೆಂದು ಹನುಮಂತಯ್ಯನವರೇ ಒಂದು ಸಂದರ್ಭದಲ್ಲಿ ಹೇಳಿದ್ದರು.

ಕೆಂಗಲ್ಲರ ಆಡಳಿತದಲ್ಲಿ ನಿಧಾನಕ್ಕೆ ಎಡೆಯೇ ಇಲ್ಲ. ಅರ್ಥಮಂತ್ರಿಗಳೂ ಆಗಿದ್ದ ಮುಖ್ಯಮಂತ್ರಿಗಳು 1952ರ ಅವರ ಮೊಟ್ಟಮೊದಲ ಭಾಷಣದಲ್ಲೇ ವಿಧಾನಸೌಧ ನಿರ್ವಣದ ವಿಚಾರವನ್ನು ಪ್ರಸ್ತಾಪಿಸಿ ನಾಲ್ಕು ಲಕ್ಷ ರೂಪಾಯಿಗಳ ಆರಂಭಿಕ ಖರ್ಚನ್ನೂ ಒದಗಿಸಿ, ಕೆಲಸವನ್ನು ಆರಂಭಿಸಿಯೇಬಿಟ್ಟರು. ಕಟ್ಟಡ ನಿರ್ವಣದ ಗುತ್ತಿಗೆಯನ್ನು ಬೇರಾವ ವ್ಯಕ್ತಿಗೋ, ಕಂಪನಿಗೋ ವಹಿಸದೆ ತಮ್ಮ ಅಧೀನದ ಮರಾಮತ್ (ಲೋಕೋಪಯೋಗಿ) ಇಲಾಖೆಯಿಂದಲೇ ನಿರ್ಮಾಣ ಕೆಲಸವನ್ನು ಆರಂಭಿಸಿಬಿಟ್ಟರು.

ಇಲ್ಲೊಂದು ಪ್ರಸಂಗವನ್ನು ನೆನಪಿಸಿಕೊಳ್ಳಬೇಕು. ಅದು ಕೆಂಗಲ್ ಅವರೇ ಹೇಳಿರುವ ಪ್ರಸಂಗ. ಒಮ್ಮೆ ಗಾಂಧೀಜಿಯವರು ಬ್ರಿಟಿಷ್ ವೈಸರಾಯ್ ಅವರನ್ನು ಭೇಟಿಯಾಗುವುದಿತ್ತು. ಗಾಂಧೀಜಿಯವರೊಂದಿಗೆ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಕೃಪಲಾನಿ ಮತ್ತು ಹನುಮಂತಯ್ಯನವರು ವೈಸರಾಯ್ ಭವನ (ಈಗಿನ ರಾಷ್ಟ್ರಪತಿ ಭವನ)ಕ್ಕೆ ಹೋದರು. ಅಲ್ಲಿ ವೈಸರಾಯ್ ಕುಳಿತಿದ್ದ ಜಾಗ ಇವರಿದ್ದುದಕ್ಕಿಂತ ನಾಲ್ಕು ಮೆಟ್ಟಿಲು ಮೇಲಿತ್ತು. ಗಾಂಧೀಜಿ ವೈಸರಾಯ್ರನ್ನು ಸಮೀಪಿಸಲು ಮೆಟ್ಟಿಲು ಹತ್ತಲು ಹೋದಾಗ ವೈಸರಾಯ್, ‘ನೋ, ನೋ ಗಾಂಧಿ, ಮೆಟ್ಟಿಲು ಹತ್ತಬೇಡಿ. ನೀವು ಅಲ್ಲೇ ನಿಂತು ಮಾತಾಡಿ’ ಅಂತ ಆಜ್ಞಾಪಿಸಿದ. ಅದನ್ನು ಕೇಳಿ ಹನುಮಂತಯ್ಯನವರ ರಕ್ತ ಕುದಿಯಿತು. ಯಾರ ಪದತಲದಲ್ಲಿ ಕೂಡಲು ರಾಜ-ಮಹಾರಾಜರುಗಳು ಹಾತೊರೆಯುತ್ತಿದ್ದರೋ ಅಂಥ ಗಾಂಧೀಜಿ ಅವರಿಗೆ ಆ ನಾಲ್ಕು ಮೆಟ್ಟಿಲುಗಳನ್ನು ಹತ್ತಬೇಡಿರೆಂದು ವೈಸರಾಯ್ ಅವಮಾನ ಮಾಡಿದ. ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ಹನುಮಂತಯ್ಯನವರು ತಲೆಯೆತ್ತಿ ನಿಂತಿರುವ ಆ ಮಹಾನ್ ಸೌಧದ ಮುಂಭಾಗದಲ್ಲಿ 204 ಅಡಿ ಉದ್ದದ 45 ಮೆಟ್ಟಿಲುಗಳನ್ನು ಹಾಕಿಸಿದರು. ಕನ್ನಡಿಗರಾದ ನಾವು ನಮ್ಮ ಪ್ರಜಾಪ್ರಭುತ್ವದ ಕೇಂದ್ರವಸ್ತುವಿನಂತಿರುವ ವಿಧಾನಸೌಧಕ್ಕೆ ಆ ಎಲ್ಲ ಮೆಟ್ಟಿಲುಗಳನ್ನೂ ಹತ್ತಿ ಹೆಮ್ಮೆಯಿಂದ ಹೋಗಬೇಕು- ಹಾಗೆಂದು ಹನುಮಂತಯ್ಯನವರೇ ಹೇಳಿದ್ದಾರೆ.

ವಿಧಾನಸೌಧದ ಮೂಲನಕ್ಷೆಯ ಪ್ರಕಾರ ಅದಕ್ಕಿದ್ದುದು ಮೂರೇ ಅಂತಸ್ತುಗಳು. ಆದರೆ ತಾವು ಮುಖ್ಯಮಂತ್ರಿಯಾಗಿದ್ದುಕೊಂಡೇ ವಿಶಾಲ ಮೈಸೂರು ರಾಜ್ಯ ರಚನೆಯ ಆಂದೋಲನಕ್ಕಿಳಿದರಲ್ಲ ಹನುಮಂತಯ್ಯನವರು, ಆಗ ರಾಜ್ಯದ ವ್ಯಾಪ್ತಿ ದೊಡ್ಡದಾದ ಮೇಲೆ ವಿಧಾನಸೌಧದ ಕಟ್ಟಡವೂ ಮತ್ತಷ್ಟು ದೊಡ್ಡದಾಗಬೇಕೆಂದು ಆಲೋಚಿಸಿದ ಕೆಂಗಲ್ಲರು ನಾಲ್ಕನೇ ಅಂತಸ್ತಿನ ನಿರ್ವಣಕ್ಕೂ ನಿರ್ಧರಿಸಿಬಿಟ್ಟರು. ಮಲ್ಲಸಂದ್ರ ಮತ್ತು ಹೆಸರುಘಟ್ಟದಿಂದ ಭಾರಿಭಾರಿ ಗ್ರಾನೈಟ್ ದಿಮ್ಮಿಗಳನ್ನು ತರಿಸಿದರು. 5,000 ಕಟ್ಟಡ ಕೆಲಸಗಾರರು, ಮೇಸ್ತ್ರಿಗಳು, 1,500 ಮಂದಿ ಕಲ್ಲುಕುಟ್ಟುವ ಕುಶಲಕರ್ವಿುಗಳು, ಕಲ್ಲುಕೆತ್ತನೆ ಮತ್ತು ಮರದ ಕೆತ್ತನೆಯ ನಿಷ್ಣಾತ ಶಿಲ್ಪಿಗಳು ಸುಮಾರು ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಹಗಲಿರುಳೆನ್ನದೆ ದುಡಿದು, 700 ಅಡಿ ್ಡ 350 ಅಡಿ ಆಯವಿರುವ, ನೆಲಮಟ್ಟದಿಂದ 150 ಅಡಿ ಎತ್ತರವಿರುವ, ನೆತ್ತಿಯ ಗುಮ್ಮಟವೇ 60 ಅಡಿ ವ್ಯಾಸವಿರುವ, ವಿಧಾನಸಭೆ ಮತ್ತು ವಿಧಾನ ಪರಿಷತ್ತಿಗಾಗಿ ಎರಡು ಸುವಿಶಾಲ ಸಭಾಂಗಣಗಳಿರುವ, ವಿವಿಧ ಅಳತೆ, ಉದ್ದಗಲದ 300 ಕೊಠಡಿಗಳಿರುವ, ಮುಂಭಾಗದಲ್ಲಿ ಎಂಟು ಭೀಮಸ್ತಂಭಗಳಿರುವ, ಚಿತ್ತಾರದ ಬೋದಗೆಗಳು, ಅತ್ಯಾಕರ್ಷಕ ಗವಾಕ್ಷಿಗಳು, ಕಟಾಂಜನಗಳುಳ್ಳ ಈ ವಾಸ್ತುವೈಭವವನ್ನು ಸೃಷ್ಟಿಸಿದರು. ಆ ಕಾಲಕ್ಕೆ ಅದಕ್ಕೆ ಖರ್ಚಾದ ಹಣ, ಸುಮಾರು ಒಂದೂ ಮುಕ್ಕಾಲು ಕೋಟಿ.

ಭಾರತ ದೇಶದ ಯಾವ ನಗರದಲ್ಲೂ ಇಷ್ಟು ಬೃಹತ್ ಸೌಂದರ್ಯವಿರುವ ಮತ್ತೊಂದು ಸಚಿವಾಲಯ ಕಟ್ಟಡ ಇಲ್ಲ. ‘ಈ ಕಟ್ಟಡವನ್ನು ಕಟ್ಟುವ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯನವರು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು’ ಎಂದಷ್ಟೇ ಹೇಳಿದರೆ ಅದು ಅನ್ಯಾಯ. ಈ ಇಡೀ ಕಟ್ಟಡವನ್ನು ರೂಪಿಸಿದವರು, ಉಸ್ತುವಾರಿ ಮಾಡಿದವರು, ಅದಕ್ಕಾಗಿ ವಿವಿಧ ಮೂಲಗಳಿಂದ ಹಣ ಎತ್ತಿದವರು ಸ್ವತಃ ಕೆಂಗಲ್ಲರೇ. ಆ ಕಟ್ಟಡದ ಪ್ರತಿ ಹಂತವನ್ನೂ ಅವರೇ ನಿರ್ಧರಿಸಿದ್ದಾರೆ (ತಂತ್ರಜ್ಞರ ಸಲಹೆ-ಸಹಾಯ ಪಡೆದಿದ್ದಾರಷ್ಟೆ). ಅವರ ಕಲ್ಪನಾಶಕ್ತಿ, ಮೇಧಾಶಕ್ತಿ ಎಷ್ಟು ದೊಡ್ಡವೋ ಅವರ ಕರ್ತೃತ್ವಶಕ್ತಿ, ಸಂಕಲ್ಪಶಕ್ತಿಗಳೂ ಅಷ್ಟೇ ದೊಡ್ಡವು. ಆ ಕಟ್ಟಡದ ಉದ್ಘಾಟನೆಗೆ ಬಂದಿದ್ದ ನೆಹರು ಅದೆಷ್ಟು ಬಾರಿ ‘ಮಾರ್ವೆಲಸ್! ಫೆಂಟಾಸ್ಟಿಕ್! ವಂಡರ್​ಫುಲ್!’ ಎಂದು ಉದ್ಗರಿಸಿದರೋ!

ಆದರೆ ಪ್ರಜಾಪ್ರಭುತ್ವದ ವಿಪರ್ಯಾಸ ನೋಡಿ. ಇಂಥದೊಂದು ಭವ್ಯಸೌಧದ ಕನಸು ಕಂಡು ಅದನ್ನು ಸಾಕಾರಗೊಳಿಸಿದ ಕೆಂಗಲ್ ಹನುಮಂತಯ್ಯ ಎಂಬ ಧೀಮಂತ ಆಡಳಿತಗಾರ, ಜೈಲಿನ ಕೈದಿಗಳನ್ನು ಕಟ್ಟಡ ನಿರ್ವಣಕ್ಕೆ ಬಳಸಿಕೊಂಡು ಮಿತವ್ಯಯ ಸಾಧಿಸಿದ ಮುತ್ಸದ್ದಿ, ಕಟ್ಟಡ ತಳಪಾಯದ ಸಹಸ್ರಾರು ಲಾರಿ ಲೋಡುಗಳಷ್ಟು ಮಣ್ಣನ್ನೂ ಮಾರಿ ಕಟ್ಟಡಕ್ಕೆ ಹಣ ಹೊಂದಿಸಿದ ನಿಪುಣ, ತಾವೇ ನಿಂತು ನಡೆದಾಡಿ ಪ್ರತಿಹಂತದಲ್ಲೂ ಕಟ್ಟಡ ನಿರ್ವಣಕ್ಕೆ ಮಾರ್ಗದರ್ಶನ ಮಾಡಿದ ಆಡಳಿತ ಕುಶಲಿ, ಆ ಕಟ್ಟಡದಲ್ಲಿ ಮುಖ್ಯಮಂತ್ರಿಯಾಗಿ ಒಂದು ದಿನವೂ ಕೂರಲಿಲ್ಲ. ವಿಶ್ವಾಸಿಗಳೆಂದು ಭಾವಿಸಿದವರೇ ಬೆನ್ನಲ್ಲಿ ಇರಿದರು. ಬಗೆಬಗೆ ಟೀಕೆಗಳ ಮಳೆಗರೆದರು. ‘ನೀವೇನು ಅರಮನೆ ಕಟ್ಟಿಸಿಕೊಳ್ಳುತ್ತಿದ್ದೀರಾ ಹನುಮಂತಯ್ಯನವರೇ?’, ‘This is a vulgar building’ ಎಂದು ವಿಷಕಾರಿದರು. ಕರ್ನಾಟಕದ ಮಹಾಮುತ್ಸದ್ದಿ ನಿಜಲಿಂಗಪ್ಪನವರಂಥವರು ಕೂಡ ‘ಇದು ವಿಧಾನಸೌಧವಲ್ಲ, ವಿಷಾದಸೌಧ!’ ಅಂದುಬಿಟ್ಟರು. ‘ಸುತ್ತಮುತ್ತ ಗೋಪುರಗಳನ್ನು ಕಟ್ಟಿಸಿದ್ದೀರಲ್ಲಾ, ಇದು ವಿಧಾನಸೌಧವೋ, ದೇವಸ್ಥಾನವೋ?’ ಅಂದವರೂ ಇದ್ದರು. ಕೆಂಗಲ್ಲರು ಬಹಳವಾಗಿ ನೊಂದುಹೋದರು. ತಮ್ಮ ಮೇಲೆ ತಾವೇ ಒಂದು ಸ್ವತಂತ್ರ ವಿಚಾರಣಾ ಸಮಿತಿಯನ್ನು ನೇಮಿಸಿ, ಅದರೆದುರು ‘ಆಪಾದಿತ’ನೆಂಬ ಹೆಸರು ಹೊತ್ತು ಹಾಜರಾಗಿ, ಇಂಥದೊಂದು ಕಟ್ಟಡವನ್ನು ನಿರ್ವಿುಸಿದ್ದು ಏಕೆ? ಮತ್ತು ಹೇಗೆ? ಎಂದು ಸಮರ್ಥಿಸಿಕೊಳ್ಳಬೇಕಾಯಿತು.

ಪ್ರಜಾಪ್ರಭುತ್ವದ ಘನತೆ ಮತ್ತು ಗೌರವಗಳಿಗೆ ಸಂಕೇತವಾದ ಈ ವಿಧಾನಸೌಧ, ಹಾಗೆಯೇ ಮನುಷ್ಯನ ಕೃತಘ್ನತೆ ಮತ್ತು ಸಣ್ಣತನಗಳಿಗೆ ಸಾಕ್ಷಿಯಾಗಿಯೂ ನಿಂತಿತು.

ಇಂಥಾ ವಿಧಾನಸೌಧಕ್ಕೆ ಇದೀಗ ವಜ್ರಮಹೋತ್ಸವ. ವಿಧಾನಸೌಧದ ಯಜಮಾನ ಪದವಿಯಲ್ಲಿ ಕೂತವರು ಶಾಸಕರಿಗೆ ಚಿನ್ನದ ಬಿಸ್ಕತ್ತುಗಳನ್ನು ಹಂಚುವ ಯೋಜನೆ ಹೊತ್ತುಕೊಂಡು ನಿಂತುಬಿಟ್ಟಿದ್ದರಂತೆ! ಸದ್ಯ ಅದಕ್ಕೆ ಅವಕಾಶವಾಗದೆ ಸರ್ಕಾರದ ಮಾನ ಒಂದಿಷ್ಟು ಉಳಿಯಿತು. ದೇವೇಗೌಡರು ಆ ವಜ್ರಮಹೋತ್ಸವ ಸಂದರ್ಭಕ್ಕೆ ಹೋಗಲಿಲ್ಲ. ‘ಇದನ್ನು ಕಟ್ಟಿದ ಪುಣ್ಯಾತ್ಮನನ್ನೇ ಹೊರದೂಡಿದ ನೆನಪಾಗುತ್ತಿದೆ ನನಗೆ. ಯಾವ ಸಂಭ್ರಮಕ್ಕೆ ನಾನಲ್ಲಿಗೆ ಹೋಗಬೇಕು?’ ಅಂದುಬಿಟ್ಟರು ಮಾಜಿ ಪ್ರಧಾನಿ. ಕೆಂಗಲ್ಲರು ಅನುಭವಿಸಿದ ನೋವು ಅವರಿಗೂ ಆಯಿತೋ ಏನೋ!

ಭಾರತ ಪ್ರಜಾಪ್ರಭುತ್ವಕ್ಕೆ ಬಂದು ಎಪ್ಪತ್ತು ವರ್ಷ ಸಮೀಪಿಸುತ್ತಿದೆ. ಪ್ರಜಾಪ್ರಭುತ್ವದ ಘನತೆ, ಗೌರವಗಳ ಪ್ರತೀಕವಾದ ವಿಧಾನಸೌಧ, ಭ್ರಷ್ಟಾಚಾರ, ಅಧಿಕಾರ, ಅಹಂಕಾರಗಳ ಕೇಂದ್ರಸ್ಥಾನದಂತೆ ಕಾಣುತ್ತಿದೆ. ತನ್ನ ಸುತ್ತ ತಾನೇ ಬೇಲಿ ಹಾಕಿಕೊಂಡು ಕೂತಿದೆ. ಅದರ ಮುಂಭಾಗದ ತೊಲೆಯ ಮೇಲೆ ಬರೆದಿರುವ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಉಕ್ತಿಗೆ ವ್ಯಂಗ್ಯಾರ್ಥವೇ ಕಾಣುತ್ತಿದೆ. ಶಾಸನಸಭೆಯಲ್ಲಿ ಮೇಜಿನ ಮೇಲೆ ನಿಂತು ಅಂಗಿ ಹರಿದುಕೊಂಡು ಎದೆಎದೆ ಚಚ್ಚಿಕೊಂಡ ಶಾಸಕನ ಕಿರುಚಾಟ ಪ್ರಜಾಪ್ರಭುತ್ವದ ರೋದನದಂತೆ ಕೇಳಿಸುತ್ತಿದೆ.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top