ವಿಧಾನಸಭೆ ಅಂದರೆ ಅವರಪ್ಪನ ಮನೆ ಆಸ್ತಿನಾ?

ಧಾರವಾಡ: ಬೆಂಗಳೂರಿನ ಸದಾಶಿವನಗರ, ಡಾಲರ್ಸ್ ಕಾಲನಿಯಲ್ಲೆಲ್ಲ ಉತ್ತರ ಕರ್ನಾಟಕ ಭಾಗದ ಮುಠ್ಠಾಳ ಜನಪ್ರತಿನಿಧಿಗಳೇ ತುಂಬಿದ್ದಾರೆ. ಉ.ಕ. ಭಾಗಕ್ಕೆ ಬಂದ ಅನುದಾನವನ್ನು ಹಂಚಿಕೊಂಡು ಬೆಂಗಳೂರಿಗೆ ಹೋಗಿ ಮನೆ ಮಾಡುತ್ತಿದ್ದಾರೆ. ಒಬ್ಬೊಬ್ಬ ಶಾಸಕನಿಗೆ ಕನಿಷ್ಠ ಹತ್ತತ್ತು ನಿವೇಶನಗಳಿವೆ. ಹೀಗೆಯೇ ಬಿಟ್ಟರೆ ಬೆಂಗಳೂರಲ್ಲೆಲ್ಲ ಉ.ಕ. ರಾಜಕಾರಣಿಗಳೇ ತುಂಬಿ ಹೋಗುತ್ತಾರೆ. ಉ.ಕ. ಹಿನ್ನಡೆಗೆ ಜನಪ್ರತಿನಿಧಿಗಳೇ ಕಾರಣ ಹೊರತು ಬೇರೆಯವರಲ್ಲ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಟೀಕಾಪ್ರಹಾರ ನಡೆಸಿದರು.

ನಗರದ ಆಲೂರ ವೆಂಕಟರಾವ್ ಸಭಾಭವನದಲ್ಲಿ ಕರ್ನಾಟಕ ನವನಿರ್ವಣ ಸೇನೆಯಿಂದ ಬುಧವಾರ ಆಯೋಜಿಸಿದ್ದ ‘ಪ್ರತ್ಯೇಕ ರಾಜ್ಯ ಅಧಿಕಾರಕ್ಕೋ? ಅಭಿವೃದ್ಧಿಗೋ?’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಇಂದು ಶಾಸಕರಾಗಬೇಕು. ದೇವೇಗೌಡ, ಬಂಗಾರಪ್ಪ ಅವರ ಮಕ್ಕಳೇ ಶಾಸಕರಾಗಬೇಕಾ? ರಾಜಕಾರಣ, ವಿಧಾನಸಭೆ ಅಂದರೆ ಅವರಪ್ಪನ ಮನೆ ಆಸ್ತಿನಾ? ಎಂದು ಪ್ರಶ್ನಿಸುವ ಮೂಲಕ ಅಸಮಾಧಾನ ಹೊರಹಾಕಿದರು.

ಎಲ್ಲ ಕಾಲದಲ್ಲಿಯೂ ಮುಠ್ಠಾಳರಿದ್ದರು. ಇಂದಿಗೂ ಇದ್ದಾರೆ. ಇದರ ಮಧ್ಯೆ ನಮ್ಮ ನಾಡಿನಲ್ಲಿ ಯುವಕರ ಶಕ್ತಿ ಹೆಚ್ಚಿದ್ದು, ನಮ್ಮಲ್ಲಿ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ. ಚುನಾವಣೆಗೆ ನಿಲ್ಲಲು ನನಗೂ ಆಸೆ ಇದೆ. ಎಲ್ಲ ಕಡೆ ರಾಜಕೀಯ ವಂಶಸ್ಥರೇ ತುಂಬಿಕೊಂಡರೆ ನಮ್ಮಂಥವರು ಎಲ್ಲಿ ಹೋಗಬೇಕು. ಇದನ್ನು ಪ್ರಶ್ನಿಸುವುದನ್ನು ನಮ್ಮ ಯುವಕರು ಕಲಿಯಬೇಕು ಎಂದು ಸಲಹೆ ನೀಡಿದರು.

ವಿಧಾನಸೌಧಕ್ಕೆ ಮೊದಲಿನಷ್ಟು ಪಾವಿತ್ರ್ಯ ಇಲ್ಲ. ಅದೊಂದು ಬಿಗ್ ಬಜಾರ್ ರೀತಿಯ ಮಾರುಕಟ್ಟೆ ಆಗಿಬಿಟ್ಟಿದೆ. ಯಾರು ಬೇಕಾದರೂ ಹಣ ಕೊಟ್ಟು ಅಧಿಕಾರ ಪಡೆಯಬಹುದಾಗಿದೆ ಎಂದು ಕುಂವೀ ವ್ಯಂಗ್ಯವಾಡಿದರು.

ತಪ್ಪು ಮಾಡಿದಾಗ ಜನಪ್ರತಿನಿಧಿಗಳ ಕೊರಳ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆಯುವ ಅಧಿಕಾರವನ್ನು ಜನರಿಗೆ ಕೊಡಬೇಕಿದೆ. ಹೆಚ್ಚು ನದಿ ಹರಿಯುತ್ತಿರುವುದು ಉತ್ತರ ಕರ್ನಾಟಕ ಭಾಗದಲ್ಲಿ. ಕನ್ನಡ ಸಾಹಿತ್ಯಕ್ಕೆ ಹೆಚ್ಚು ಕೊಡುಗೆ ಕೊಟ್ಟಿದ್ದೂ ಈ ಭಾಗದವರೇ. ಹೆಚ್ಚು ಆಹಾರ ಧಾನ್ಯ ಬೆಳೆಯುವುದೂ ಇಲ್ಲೇ. ರಾಜಕಾರಣಿಗಳು ಇಂದು ನಮಗೆ ದುಃಸ್ವಪ್ನಗಳಾಗಿ ಕಾಡುತ್ತಿದ್ದಾರೆ. ಅವರ ಕಾಟವಿಲ್ಲದೇ ನೆಮ್ಮದಿಯಿಂದ ಮಲಗಬೇಕಾದರೆ ಒಂದು ಕ್ವಾರ್ಟರ್ ಹಾಕಲೇಬೇಕಾಗುತ್ತದೆ ಎಂದು ಮಾರ್ವಿುಕವಾಗಿ ಹೇಳಿದರು.

ಕೈಯಿಂದ ಉತ್ತರ ಕೊಡುತ್ತೇವೆ: ಕರ್ನಾಟಕ ನವನಿರ್ವಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಮಾತನಾಡಿ, ಪ್ರತ್ಯೇಕ ರಾಜ್ಯದ ಘೊಷಣೆ ಕೊಡುವ ರಾಜಕಾರಣಿಗಳಿಗೆ ಕೈಯಿಂದ ಉತ್ತರ ಕೊಡುತ್ತೇವೆ. ರಾಜಕಾರಣಿ ಎಲ್ಲಿ ಹೇಳುತ್ತಾನೋ ಅಲ್ಲೇ ಉತ್ತರ ಕೊಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ಇಷ್ಟು ದಿನ ಹೇಳಿಕೆಗಳ ಮೂಲಕ ಉತ್ತರ ಕೊಟ್ಟಾಗಿದೆ. ಈ ಮೂಲಕ ರಾಜಕಾರಣಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಉತ್ತರ ಕರ್ನಾಟಕದ ರಾಜಕಾರಣಿಗಳು ತಮ್ಮ ಸ್ವಾರ್ಥದ ತೆವಲಿಗಾಗಿ ರಾಜ್ಯ ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ಸರಿಯಾಗಿ ಕನ್ನಡ ಮಾತನಾಡಲು ಬಾರದ ಮುಠ್ಠಾಳರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ. ಕರ್ನಾಟಕ ಅಖಂಡವಾಗಿ ಇದ್ದಾಗ ಮಾತ್ರ ಕನ್ನಡದ ಮನಸ್ಸುಗಳು ಒಂದಾಗಿರರಲು ಸಾಧ್ಯ ಎಂದರು.

ಸಾಹಿತಿ ಮೋಹನ ನಾಗಮ್ಮನವರ, ಪ್ರೊ. ಧನವಂತ ಹಾಜವಗೋಳ, ವಕೀಲ ಪ್ರಕಾಶ ಉಡಿಕೇರಿ, ಪತ್ರಕರ್ತರಾದ ಬಸವರಾಜ್ ಹೊಂಗಲ್, ಮುಸ್ತಫಾ ಕುನ್ನಿಭಾವಿ, ಕನಸೇ ಜಿಲ್ಲಾಧ್ಯಕ್ಷ ಗಿರೀಶ ಪೂಜಾರ, ರಮೇಶ ಬದ್ನೂರ್, ಇತರರಿದ್ದರು.