ಸಿನಿಮಾ

ವಿಧಾನಸಭಾ ಚುನಾವಣೆ: ಜಿಲ್ಲೆಯಾದ್ಯಂತ ಬಿರುಸಿನ ಮತದಾನ

ಮಡಿಕೇರಿ:

ವಿಧಾನಸಭಾ ಚುನಾವಣೆಯ ಮತದಾನವು ಜಿಲ್ಲೆಯಾದ್ಯಂತ ಬುಧವಾರ ಶಾಂತಿಯುತ ಹಾಗೂ ಬಿರುಸಿನಿಂದ ನಡೆಯಿತು.
ಜಿಲ್ಲೆಯಲ್ಲಿ ೯ ಗಂಟೆ ವೇಳೆಗೆ ಶೇ.೧೧.೭೪ ರಷ್ಟು, ೧೧ ಗಂಟೆ ವೇಳೆಗೆ ಶೇ.೨೬.೫೨ ರಷ್ಟು, ಮಧ್ಯಾಹ್ನ ೧ ಗಂಟೆ ವೇಳೆಗೆ ಶೇ.೪೫.೬೪ ರಷ್ಟು, ಮಧ್ಯಾಹ್ನ ೩ ಗಂಟೆ ವೇಳೆಗೆ ೫೮.೨೪ ರಷ್ಟು ಮತದಾನವಾಗಿತ್ತು.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಒಟ್ಟು ೫೪೩ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗ್ಗಿನ ವೇಳೆಯಲ್ಲಿ ಮತಗಟ್ಟೆ ಕೇಂದ್ರಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದ್ದು ಕಂಡುಬಂದಿತು.

ಮತದಾರರು ಮತಹಕ್ಕು ಚಲಾಯಿಸಿ ಮತಗಟ್ಟೆಯಿಂದ ಹೊರಬರುತ್ತಿದ್ದ ದೃಶ್ಯವು ಮತದಾನದ ಹುಮ್ಮಸ್ಸನ್ನು ಹೆಚ್ಚಿಸಿತು. ಪ್ರಥಮ ಬಾರಿಗೆ ಮತಹಕ್ಕು ಚಲಾಯಿಸಿದ ಯುವ ಮತದಾರರು ಸಂತಸದಿಂದ ಮತದಾನದ ಹಬ್ಬದಲ್ಲಿ ಪಾಲ್ಗೊಂಡು ಮತಹಕ್ಕು ಚಲಾಯಿಸಿದರು.

ತಿತಿಮತಿ ಗ್ರಾಮದ ಯುವ ಮತದಾರರೊಬ್ಬರು ಮಾತನಾಡಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಮತ ಚಲಾಯಿಸಿದ್ದೇನೆ. ಪ್ರಥಮ ಬಾರಿಗೆ ಮತದಾನ ಮಾಡಿದ್ದು ತುಂಬಾ ಖುಷಿ ತಂದಿದೆ ಎಂದರು.
ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಲಾಗಿರುವ ವಣಚಲು ಗ್ರಾಮದ ಮತಗಟ್ಟೆಯಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯಿತು. ಅಲ್ಲಿನ ಮತದಾರರು ಉತ್ಸಾಹದಿಂದ ಮತಹಕ್ಕು ಚಲಾಯಿಸಿದ್ದು ಕಂಡುಬಂದಿತು.

ಇಲ್ಲಿನ ಸ್ಥಳೀಯರಾದ ಸರೋಜ ಅವರು ಮಾತನಾಡಿ ಗ್ರಾಮದ ಸುತ್ತಮುತ್ತಲಿನ ಜನರು ಮತದಾನ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿನ ಜನರು ಹೊರ ಜಿಲ್ಲೆ, ಹೊರ ರಾಜ್ಯದಲ್ಲಿ ಕೆಲಸದಲ್ಲಿ ಇರುವವರು ಸಹ ಗ್ರಾಮಕ್ಕೆ ಬಂದು ಮತದಾನ ಮಾಡಿದ್ದಾರೆ ಎಂದು ಅವರು ವಿವರಿಸಿದರು.

ಗಾಳಿಬೀಡು ಗ್ರಾಮದ ಮತಗಟ್ಟೆಯಲ್ಲಿ ೧೨ ಗಂಟೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದರು.
ಮದೆನಾಡು, ಸುಂಟಿಕೊಪ್ಪ, ಸಿದ್ದಾಪುರ, ಗೋಣಿಕೊಪ್ಪ, ಪೊನ್ನಂಪೇಟೆ, ಹುದಿಕೇರಿ, ಬಾಳೆಲೆ, ಮೂರ್ನಾಡು, ನಾಪೋಕ್ಲು, ಸೋಮವಾರಪೇಟೆ, ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ, ಮಾದಾಪುರ, ಹೆಬ್ಬಾಲೆ ಮತಗಟ್ಟೆಗಳಲ್ಲಿ ಮತದಾರರು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿತು.
ಸುಮಾರು ೭೦ ವರ್ಷ ಮೇಲ್ಪಟ್ಟ ಒಬ್ಬರು ಗಾಲಿ ಕುರ್ಚಿಯಲ್ಲಿ ಕುಟುಂಬರ ಸದಸ್ಯರೊಂದಿಗೆ ಆಗಮಿಸಿ ಮತಹಕ್ಕು ಚಲಾಯಿಸಿದರು. ಮಾದರಿ ಮತಗಟ್ಟೆಯಾಗಿ ಸ್ಥಾಪಿಸಲಾಗಿದ್ದ ನಗರದ ಹಿಲ್ ರಸ್ತೆಯಲ್ಲಿರುವ ಮತಗಟ್ಟೆಯಲ್ಲಿ ಮತದಾರರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿತ್ತು, ಹಾಗೆಯೇ ಕುಡಿಯುವ ನೀರು ಕಲ್ಪಿಸಲಾಗಿತ್ತು.
ಜಿಲ್ಲೆಯ ವಿವಿಧ ಕಡೆ ಸ್ಥಾಪಿಸಲಾಗಿದ್ದ ಸಖಿ ಮತಗಟ್ಟೆ, ವಿಶೇಷಚೇತನರ ಸ್ನೇಹಿ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಥೀಮ್ ಬೇಸ್‌ಡ್(ಕಾಫಿ, ಅರಣ್ಯ) ಮತಗಟ್ಟೆ ಇತರ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಮತಗಟ್ಟೆಗಳು ಮತದಾರರ ಗಮನ ಸೆಳೆದವು.

ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದ್ದ, ನಾಗರಹೊಳೆ ಬಳಿಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆ, ಹಾಗೆಯೇ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆದಿವಾಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತಹಕ್ಕು ಚಲಾಯಿಸಿ, ಸಂಭ್ರಮಿಸಿದರು. ವಿಶೇಷ ಚೇತನರ ಸ್ನೇಹಿ ಮತಗಟ್ಟೆಗಳಾದ ನಗರದ ಸಂತ ಮೈಕಲರ ಶಾಲೆ ಮತ್ತು ವಿರಾಜಪೇಟೆಯ ಸೇಂಟ್ ಆನ್ಸ್ ಪ್ರೌಢ ಶಾಲೆಯ ಮತಗಟ್ಟೆ ಮತದಾರರ ಗಮನ ಸೆಳೆಯಿತು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತು ರೂಪಾಶ್ರೀ ಸತೀಶ ಅವರು ನಗರದ ತಾಲ್ಲೂಕು ಪಂಚಾಯಿತಿ ಮತಗಟ್ಟೆಗೆ ತೆರಳಿ ಮತದಾನ ಮಾಡಿ, ಮತದಾನದ ಮಹತ್ವ ಸಾರಿದರು.

ವಿಧಾನಸಭೆ ಚುನಾವಣೆಯು ಮತದಾರರದಲ್ಲಿ ಸಂಭ್ರಮ ಮತ್ತು ಹೊಣೆಗಾರಿಕೆ ಹೆಚ್ಚಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಮತದಾರರ ಹಬ್ಬವೆಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ಆಶಯ ಸಕಾರವಾಗುವಲ್ಲಿ ಚುನಾವಣೆಯ ಪಾತ್ರ ಬಹುದೊಡ್ಡದು ಎಂದು ಹಿರಿಯ ಮತದಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಕುಟುಂಬದವರ ಜೊತೆ ಆಗಮಿಸಿ ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು. ಒಟ್ಟಾರೆ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಉತ್ಸಾಹದಿಂದ ಮತದಾನದಲ್ಲಿ ಮತದಾರರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Latest Posts

ಲೈಫ್‌ಸ್ಟೈಲ್