ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮ

ಅರಕಲಗೂಡು: ವಿದ್ಯುತ್ ಸಮಸ್ಯೆ ನಿವಾರಿಸುವ ಸಲುವಾಗಿ ಜಿಲ್ಲೆಯಲ್ಲಿ 48 ಉಪ ಕೇಂದ್ರಗಳನ್ನು ಸ್ಥಾಪಿಸಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ತಾಲೂಕಿನ ರುದ್ರಪಟ್ಟಣ ಗ್ರಾಮದಲ್ಲಿ ಬುಧವಾರ 5.27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 66/11 ಕೆ.ವಿ. ವಿದ್ಯುತ್ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದರು.

2006ರಲ್ಲಿ ಈ ಉಪಕೇಂದ್ರ ನಿರ್ಮಾಣ ಕೈಗೆತ್ತಿಕೊಂಡು 12 ವರ್ಷದ ಬಳಿಕ ನಾನೇ ಉದ್ಘಾಟಿಸುತ್ತಿದ್ದೇನೆ. ಕಳೆದ 50 ವರ್ಷಗಳಲ್ಲಿ ಕೇವಲ 450 ವಿದ್ಯುತ್ ಉಪಕೇಂದ್ರಗಳನ್ನು ಮಾತ್ರ ಸ್ಥಾಪಿಸಲಾಗಿತ್ತು. ನನ್ನ 3 ವರ್ಷದ ಅಧಿಕಾರಾವಧಿಯಲ್ಲಿ 500 ಉಪ ಕೇಂದ್ರಗಳನ್ನು ಸ್ಥಾಪಿಸಿದ್ದೆ. ಜಿಲ್ಲೆಯಲ್ಲಿ 22 ಉಪ ಕೇಂದ್ರಗಳಿದ್ದವು. ಈಗ 40 ಕೇಂದ್ರಗಳನ್ನು ಸ್ಥಾಪಿಸಿ ಸ್ಥಳೀಯವಾಗಿ ವಿದ್ಯುತ್ ಸಂಬಂಧಿತ ತೊಂದರೆಗಳನ್ನು ನಿವಾರಿಸಲು ಆದ್ಯತೆ ನೀಡಲಾಗಿದೆ ಎಂದರು.

ಅಲ್ಲದೆ, ಜಿಲ್ಲೆಯ ಕುಂದೂರು ಮಠ, ಗಂಗೂರು ಹಾಗೂ ಬೇಲೂರು ತಾಲೂಕಿನಲ್ಲಿ ನಾಲ್ಕು ಮತ್ತು ಸಂತೆಮರೂರು, ಬೆಳವಾಡಿ, ದೊಡ್ಡಬೆಮ್ಮತ್ತಿಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ರುದ್ರಪಟ್ಟಣ ವಿದ್ಯುತ್ ಉಪ ಕೇಂದ್ರದ ಮೂಲಕ ಹನ್ಯಾಳು, ಆನಂದೂರು, ಗಂಗೂರು, ಕಾಂತಪುರ, ಲಕ್ಕೂರು, ಮಲ್ಲಾಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲು ಸಹಕಾರಿಯಾಗಲಿದೆ. ಇದಲ್ಲದೇ ರಾಮನಾಥಪುರ ಕೇಂದ್ರದ ಹೊರೆಯನ್ನು ಶೇ.75ರಷ್ಟು ಕಡಿಮೆ ಮಾಡಿದ್ದು 11 ಕೆ.ವಿ. ಮಾರ್ಗದಲ್ಲಾಗುವ ವಿದ್ಯುತ್ ನಷ್ಟವು ಕಡಿತಗೊಳ್ಳಲಿದೆ. ವೋಲ್ಟೇಜ್ ಏರುಪೇರು ನಿವಾರಣೆಯಾಗಲಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಕಳೆದ ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿಗೆ ರೈತರ ಸಮಸ್ಯೆಗಳು ಕಣ್ಣಿಗೆ ಬೀಳಲಿಲ್ಲ. ರೈತರ ಕುರಿತು ನಾಟಕವಾಡುವ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ರೈತರ ಏಳಿಗೆಗೆ ಸ್ಪಂದಿಸಲಿಲ್ಲ. ಈಗ ಎಚ್.ಡಿ. ಕುಮಾರಸ್ವಾಮಿ 40 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದಾರೆ. ಇದರಿಂದ ಜಿಲ್ಲೆಯ ರೈತರ 2 ಸಾವಿರ ಕೋಟಿ ರೂ. ಸಾಲ ಮನ್ನಾ ಆಗಿದೆ ಎಂದು ಹೇಳಿದರು.

ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿದರು. ಹಾಸನ ಸೆಸ್ಕ್ ವಿಭಾಗದ ಮುಖ್ಯ ಇಂಜಿನಿಯರ್ ಕೊಟ್ಟೇಶ್ ತಳಸ್ತ, ಅಧೀಕ್ಷಕ ಇಂಜಿನಿಯರಿಂಗ್ ಉಮೇಶ್, ತಹಸೀಲ್ದಾರ್ ಶಿವರಾಜ್, ತಾಪಂ ಇಒ ಡಾ.ಯಶ್ವಂತ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *