ವಿದ್ಯುತ್ ಕಡಿತ ಖಂಡಿಸಿ ಪ್ರತಿಭಟನೆ

ಭಟ್ಕಳ: ಹಬ್ಬದ ಸಮಯದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದು ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸಮಾಜದ ನೂರಾರು ಜನ ಹೆಸ್ಕಾಂ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಳೆದ ಕೆಲ ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕಂಡು ಬರುತ್ತಿತ್ತು. ರಮಜಾನ್ ಹಬ್ಬಕ್ಕೂ 2 ದಿನ ಮುನ್ನ ರಾತ್ರಿ ವೇಳೆ ವಿದ್ಯುತ್ ಇರಲಿಲ್ಲ. ಹಬ್ಬದ ದಿನವೂ ವಿದ್ಯುತ್ ಇಲ್ಲ ಎಂದರೆ ನಾವು ಹೇಗೆ ಹಬ್ಬ ಆಚರಿಸುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಕ ಜಿಲ್ಲೆಯಲ್ಲಿ ಭಟ್ಕಳದ ಜನರು ಅತಿ ಹೆಚ್ಚು ವಿದ್ಯುತ್ ಶುಲ್ಕ ಪಾವತಿಸುತ್ತಾರೆ. ಆದರೂ ಮಹತ್ವದ ಸಂದರ್ಭದಲ್ಲಿಯೇ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ. ಇದಕ್ಕೆ ಹೆಸ್ಕಾಂ ಎಇಇ ಹೊಣೆಗಾರರು. ತಕ್ಷಣ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಹೆಚ್ಚಿನ ಜನರು ಸೇರುತ್ತಿರುವುದು ತಿಳಿಯುತ್ತಿದ್ದಂತೆ ತಹಸೀಲ್ದಾರ್ ಎನ್.ಬಿ. ಪಾಟೀಲ, ಡಿವೈಎಸ್​ಪಿ ವೆಲೈಂಟೆನ್ ಡಿಸೋಜಾ ಹೆಸ್ಕಾಂ ಕಚೇರಿ ಬಳಿ ಆಗಮಿಸಿ, ಪ್ರತಿಭಟನಾಕಾರರನ್ನು ಸಂತೈಸಲು ಪ್ರಯತ್ನಿಸಿದರು. ಪಟ್ಟುಬಿಡದ ಪ್ರತಿಭಟನಾಕಾರರು ಹೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದರು.

ಈ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರೂ ಅವರು ಪಟ್ಟು ಬಿಡಲಿಲ್ಲ. ತಂಜೀಂ ಉಪಾಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಜಿಲ್ಲಾಧಿಕಾರಿಗೆ ಕರೆ ಮಾಡಿದರು. ತಹಸೀಲ್ದಾರರಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಸಮಾಧಾನಗೊಂಡರು. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಡುತ್ತಿದ್ದಂತೆ ಕೆಎಸ್​ಆರ್​ಪಿ ಎರಡು ತುಕಡಿ, ಜಿಲ್ಲೆಯ ಹೊರಭಾಗಗಳಿಂದ ಆಗಮಿಸಿದ ಇತರ ಪೊಲೀಸರು, ಭಟ್ಕಳದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಶಾಂತಿ- ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದರು.

ಕುಮಟಾದ 110 ಕೆವಿ ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಬಸ್​ಬಾರ್ (ಮುಖ್ಯ ವಿದ್ಯುತ್ ಪ್ರಸರಣ ತಂತಿ) ಕಟ್ ಆಗಿದೆ. ಅತ್ಯಂತ ಎತ್ತರದಲ್ಲಿರುವ ಅದನ್ನು ಸರಿಪಡಿಸಲು ಟ್ರಾನ್ಸ್​ಲೇನ್ ಲೈನ್ ನಿರ್ವಹಣೆ ತಂಡವೆ ಬರಬೇಕು. ಅದನ್ನು ದುರಸ್ತಿ ಮಾಡಲು ಅವರೇ ಅಧಿಕೃತ ತಂತ್ರಜ್ಞರು. ಅದನ್ನು ನಮ್ಮ ತಂಡ ಸರಿ ಮಾಡಲು ಆಗುವುದಿಲ್ಲ. ಹೊನ್ನಾವರದಲ್ಲೂ ಇದೆ ಸಮಸ್ಯೆ ಮರುಕಳಿಸಿದೆ. ಕುಮಟಾ, ಹೊನ್ನಾವರ ಎಲ್ಲಿ ಸಮಸ್ಯೆಯಾದರೂ ಭಟ್ಕಳದ ಜನ ತೊಂದರೆ ಅನುಭವಿಸಬೇಕು. ಭಟ್ಕಳಕ್ಕೆ ಪರ್ಯಾಯ ಯೋಜನೆಯೆ ಇಲ್ಲದಿರುವುದು ಸಮಸ್ಯೆಗೆ ಕಾರಣ. | ಮಂಜುನಾಥ ನಾಯ್ಕ ಎಇಇ ಹೆಸ್ಕಾಂ ಭಟ್ಕಳ

Leave a Reply

Your email address will not be published. Required fields are marked *