ಕುಮಟಾ: ತಾಲೂಕಿನ ಹೆಗಡೆ ಪೇಟೆಯಿಂದ ಗಣಪತಿ ದೇವಸ್ಥಾನದವರೆಗೆ ಕೈಗೊಂಡಿರುವ ಅಂದಾಜು ಒಂದು ಕೋಟಿ ರೂ. ವೆಚ್ಚದ ಮುಖ್ಯರಸ್ತೆ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ಸೋಮವಾರ ಪರಿಶೀಲಿಸಿದರು.
ಮುಖ್ಯರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ರಸ್ತೆಯ ವಿಸ್ತರಣೆಗೆ ಅನುಕೂಲ ಮಾಡಿಕೊಡುವಂತೆ ಸ್ಥಳದಲ್ಲಿ ಹಾಜರಿದ್ದ ಹೆಸ್ಕಾಂ ಅಧಿಕಾರಿ ಕುಲಕರ್ಣಿಯವರಿಗೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶೆಟ್ಟಿ, ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಯಲ್ಲಿ ಹೆಗಡೆ ಪೇಟೆ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಉಳಿದ ಭಾಗ ಡಾಂಬರೀಕರಣ ಎಂದು ಯೋಜಿಸಲಾಗಿತ್ತು. ಅದರಂತೆ ಕಾಂಕ್ರೀಟ್ ಕೆಲಸ ಇನ್ನೊಂದೆರಡು ದಿನದಲ್ಲಿ ಮುಕ್ತಾಯಗೊಳ್ಳಲಿದ್ದು, ಉಳಿದ ಭಾಗದ ಡಾಂಬರೀಕರಣ ಮುಗಿದಿದೆ. ಗುಣಮಟ್ಟದ ರಸ್ತೆ ನಿರ್ವಣವಾಗಲಿದೆ ಎಂದರು. ಇಂಜಿನಿಯರ್ ಶಶಿಕಾಂತ ಕೊಳೆಕರ್, ಮೋಹನ ಶಾನಭಾಗ, ವೆಂಕಟೇಶ ನಾಯ್ಕ, ಪಿಡಿಒ ಶಿವಾನಂದ ಜೋಶಿ, ಯೋಗೇಶ ಪಟಗಾರ, ಸಂತೋಷ ನಾಯ್ಕ ಇತರರು ಇದ್ದರು.
ದೇಣಿಗೆ ಹಸ್ತಾಂತರ: ಇದೇ ವೇಳೆ ಹೆಗಡೆಯ ಶ್ರೀ ಶಾಂತಿಕಾಂಬಾ ದೇವಸ್ಥಾನದ ಆಡಳಿತ ಸಮಿತಿಯಿಂದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ನಿಧಿಗೆ ತಲಾ 50 ಸಾವಿರಂತೆ ಒಟ್ಟು 1 ಲಕ್ಷ ರೂ. ದೇಣಿಗೆ ಚೆಕ್ನ್ನು ಮೊಕ್ತೇಸರ ನಾಗೇಶ ಶಾನಭಾಗ ಅವರು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅವರಿಗೆ ಹಸ್ತಾಂತರಿಸಿದರು. ಬಿಜೆಪಿ ಜಿಲ್ಲಾ ಉಸ್ತುವಾರಿ ವಿನೋದ ಪ್ರಭು, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಇದ್ದರು.