
ಮೂಡಿಗೆರೆ: ನನ್ನ ತೋಟದ ಮಧ್ಯಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಮರಕ್ಕೆ ತಗುಲುತ್ತಿದ್ದು ಅಪಾಯವನ್ನು ಆಹ್ವಾನಿಸುತ್ತಿದ್ದು ವಿದ್ಯುತ್‌ಲೈನ್ ಸ್ಥಳಾಂತರಿಸಬೇಕು ಎಂದು
ಒತ್ತಾಯಿಸಿ ಬೀಜುವಳ್ಳಿ ಗ್ರಾಮದ ರೈತ ಅಲ್ಬರ್ಟ ಪಿಂಟೊ ಬುಧವಾರ ಮೆಸ್ಕಾಂ ಕಚೇರಿ ಎದುರು ಏಕಾಂಗಿ ಧರಣಿ ನಡೆಸಿದರು.
ರೈತ ಅಲ್ಬರ್ಟ ಪಿಂಟೊ ಮಾತನಾಡಿ, ನಮ್ಮ ಮನೆ ಬಳಿ 50 ವರ್ಷದ ಹಿಂದೆ ಹಾಕಿದ್ದ ಮರದ ವಿದ್ಯುತ್ ಕಂಬ ಮುರಿಯುವ ಸ್ಥಿತಿಯಲ್ಲಿ ಬಾಗಿ ನಿಂತಿದೆ. ಅದನ್ನು ತೆರವುಗೊಳಿಸಿ ಹೊಸ ಕಂಬ
ಅಳವಡಿಸಬೇಕು ಎಂದು ಕಳೆದ 10 ವರ್ಷದಿಂದ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ನ್ಯಾಯ
ದೊರಕಿಸಿಕೊಡುವಂತೆ ಒತ್ತಾಯಿಸಿ ಮೆಸ್ಕಾಂ ಕಚೇರಿ ಎದುರು ಧರಣಿ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಮರದ ವಿದ್ಯುತ್ ಕಂಬ ನಮ್ಮ ತಲೆ ಮೇಲೆ ಬೀಳುವ ಸಾಧ್ಯತೆ ಇದೆ. ಮರದ ಕಂಬದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಕೈಗೆಟುಕುತ್ತಿದೆ. ಗಾಳಿ ಮಳೆ ಹೆಚ್ಚಾದಾಗ ಕೈಗೆ ತಂತಿ
ತಗುಲಿ ಅವಘಡ ಸಂಭವಿಸುವ ಸಾಧ್ಯತೆಯಿದೆ. ಅವಘಡ ಸಂಭವಿಸುವ ಮೊದಲು ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಕಂಬ ಮತ್ತು ತಂತಿಯನ್ನು ಬದಲಾಯಿಸಬೇಕಾಗಿದೆ ಎಂದು
ಒತ್ತಾಯಿಸಿದರು.
ಈ ಬಗ್ಗೆ ಹಳೆಮೂಡಿಗೆರೆ ಗ್ರಾಪಂ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. 10 ದಿನದ ಹಿಂದೆ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ನಾನು ಸಲ್ಲಿಸಿದ ಅಹವಾಲಿನ
ಬಗ್ಗೆ ವಿಚಾರಿಸಿದಾಗ ನಮ್ಮ ಮನೆಯ ವಿದ್ಯುತ್ ಸಂಪರ್ಕವನ್ನೆ ಕಡಿತಗೊಳಿಸಿದ್ದಾರೆ. 10 ದಿನದಿಂದ ನಾವು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಈ ಬಗ್ಗೆ ಮಂಗಳೂರಿನ ಮೆಸ್ಕಾಂ
ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ನಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವವರೆಗೂ ಜಾಗ ಬಿಟ್ಟು ಕದಲದೆ ಅಮರಣಾಂತ ಉಪವಾಸ ಸತ್ಯಾಗ್ರಹ
ಮಾಡುವುದಾಗಿ ತಿಳಿಸಿದರು.