ಚಿತ್ರದುರ್ಗ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕೃತಿಕ ರಾಯಬಾರಿಗಳಾಗಿ ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ಪ್ರಾಥಮಿಕ,ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ನಗರದ ಮುರುಘಾಮಠದಲ್ಲಿ 2 ದಿನಗಳ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತ ನಾಡಿ, ಪ್ರತಿಭಾ ಕಾರಂಜಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯುವ ಸಾಧ್ಯತೆ ಇದೆ ಎಂದರು.
ವಿಭಿನ್ನ ಸಂಸ್ಕೃತಿ, ಕಲೆ, ಭಾಷೆಗಳನ್ನು ಒಂದೇ ನೆಲದಲ್ಲಿ ಹೊಂದಿರುವ ದೇಶವೆಂದರೆ ಅದು ಭಾರತ. 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಎಂಎಲ್‌ಸಿ ಡಿ.ಟಿ. ಶ್ರೀನಿವಾಸ್ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಅನುದಾನಿತ ಶಾಲೆಗಳ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ವಹಿಸಿದೆ. ಇತರೆ ರಾಜ್ಯಗಳಲ್ಲಿರುವ ವಿಧಾನಗಳನ್ನು ಪರಿಶೀಲಿಸಿ ನಮ್ಮ ರಾಜ್ಯದಲ್ಲೂ ಒಪಿಎಸ್ ಜಾರಿಗೊಳಿಸುವ ಮೂಲಕ ಶಿಕ್ಷಕರು ನಿವೃತ್ತಿ ಜೀವನವನ್ನು ನೆಮ್ಮದಿಯಾಗಿ ಕಳೆಯಲು ಅವಕಾಶ ಮಾಡಿಕೊಡಬೇಕಿದೆ. ಹತ್ತಾರು ವರ್ಷ ಸೇವೆ ಸಲ್ಲಿಸಿರುವ ಅತಿಥಿ ಶಿಕ್ಷಕರಿಗೂ ನ್ಯಾಯ ಒದಗಿಸಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ನವೀಕರಣ ಕುರಿತು ದೂರುಗಳಿದ್ದು, ಸಂಸ್ಥೆ ಮುಖ್ಯಸ್ಥರನ್ನು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸುವುದು ಸಲ್ಲದು ಎಂದರು.
ಅಧ್ಯಕ್ಷತೆ ವಹಿಸಿದ್ದ ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ರಾಜ್ಯದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನಕ್ಕೆ ಚಿತ್ರದುರ್ಗಕ್ಕೆ ಆಗಮಿಸಿರುವುದು ಹರ್ಷ ತಂದಿದೆ ಎಂದರು.
ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿದರು. ಡಿವೈಪಿಸಿ ವೆಂಕಟೇಶ್ ನೇತೃತ್ವ ದಲ್ಲಿ ಮಠದ ಕುರುಬರಹಟ್ಟಿ ಶಾಲೆ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಎಂಎಲ್‌ಸಿ ಕೆ.ಎಸ್.ನವೀನ್, ಕುಡಾ ಎಂ.ಕೆ. ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಡಿಸಿ ಟಿ. ವೆಂಕಟೇಶ್, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಡಿಡಿಪಿಐ ಎಂ. ಆರ್. ಮಂಜುನಾಥ್, ತಿಪ್ಪೇಸ್ವಾಮಿ, ಸಿದ್ದಪ್ಪ ಮತ್ತಿತರ ಶಿಕ್ಷಣ ಇಲಾಖೆ ಅಧಿಕಾರಿಗಳು, ಡಿಡಿಪಿಯು ಪುಟ್ಟಸ್ವಾಮಿ, ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ. ಮಹಾಂತೇಶ್, ಪ್ರಧಾನ ಕಾರ್ಯದರ್ಶಿ ಜಿ.ಟಿ. ಹನುಮಂತಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪಿ.ಎಚ್. ಬಸವರಾಜಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಎಸ್. ರಾಜಪ್ಪ ಇತರರು ಇದ್ದರು.
35 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ನೋಡೆಲ್ ಅಧಿಕಾರಿಗಳು ಇದ್ದರು. ವಿವಿಧ ಶಾಲೆಗಳ ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿದರು.
ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮುಂದಿರಬೇಕು
ಪ್ರತಿ ಮಗುವಿಗೂ ಸಾಂಸ್ಕೃತಿಕ ಜಗತ್ತಿದೆ. ಪ್ರತಿಭೆ ಅನಾವರಣಕ್ಕೆ ಅವಕಾಶ ಒದಗಿಸುವುದು ಎಲ್ಲರ ಜವಾಬ್ದಾರಿ. ಶೈಕ್ಷಣಿಕ ಕ್ರಾಂತಿಯಿಂ ದ ಉಳಿದ ಎಲ್ಲ ಕ್ಷೇತ್ರಗಳಲ್ಲೂ ಸುಧಾರಣೆ ಸಾಧ್ಯ. 2-3 ಲಕ್ಷ ವಿದ್ಯಾರ್ಥಿಗಳಿಗೆ ಸಿಇಟಿ ಇತ್ಯಾದಿ ವೃತ್ತಿಪರ ಕೋರ್ಸ್‌ಗಳ ಉಚಿತ ತರಬೇತಿ ಸಿಗಬೇಕು. ಉನ್ನತ ಶಿಕ್ಷಣದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಹೆಚ್ಚಿನ ಸೀಟು ಹಂಚಿಕೆಯಾಗುವಂತಾಗಬೇಕು. ಇಲ್ಲಿ ಓದಿದವರು ಎಲ್ಲ ಕ್ಷೇತ್ರ ಗಳಲ್ಲೂ ಮುಂದೆ ಇರಬೇಕು.
ಡಾ. ಶ್ರೀಬಸವಕುಮಾರ ಸ್ವಾಮೀಜಿ,
ಆಡಳಿತ ಮಂಡಳಿ ಸದಸ್ಯ,ಮುರುಘಾ ಮಠ
—–
ಹೈರಾಣದ ವಿದ್ಯಾರ್ಥಿಗಳು
ಬೆಳಗ್ಗೆ 10ಕ್ಕೆ ಉದ್ಘಾಟನೆಯಾಗಬೇಕಿದ್ದ ಕಾರ್ಯಕ್ರಮ ಮಧ್ಯಾಹ್ನ 2ಕ್ಕೆ ಆರಂಭವಾಯಿತು. ಸಚಿವ ಮಧುಬಂಗಾರಪ್ಪ ಜಗಳೂರು ತಾಲೂಕು ಹುಚ್ಚಂಗಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮುರುಘಾ ಮಠಕ್ಕೆ ಮಧ್ಯಾಹ್ನ 1.30ರ ಸಮಯಕ್ಕೆ ಆಗಮಿಸಿದರು. ತಡವಾಗಿ ಬಂದಿದ್ದಕ್ಕೆ ಸಚಿವರು ಸಮಾರಂಭದಲ್ಲಿ ಕ್ಷಮೆಯಾಚಿಸಿದರು. ರಾಜಕಾರಣಿಗಳನ್ನು ಕಾಯದೆ ಕಾರ್ಯಕ್ರಮ ಆರಂಭಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸ ಬೇಕಿದ್ದ ವಿದ್ಯಾರ್ಥಿಗಳು ಸಚಿವರಿಗಾಗಿ ಕಾದು ಹೈರಾಣಾದರು.
—-