ವಿದ್ಯಾರ್ಥಿಗಳಿಗೆ ಶ್ರದ್ಧೆ, ಸಂಯಮ ಮುಖ್ಯ

ಧಾರವಾಡ: ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ತತ್ಪರತೆ, ಸಂಯಮ ಅತಿ ಮುಖ್ಯ. ಇವುಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಖಚಿತ ಎಂದು ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಭಗವದ್ಗೀತಾ ಅಭಿಯಾನ, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ಜೆಎಸ್​ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜೆಎಸ್​ಎಸ್ ಸೆಂಟ್ರಲ್ ಸ್ಕೂಲ್ ಸಭಾಂಗಣದಲ್ಲಿ ಸೋಮವಾರ ಸಂಜೆ ಜರುಗಿದ ‘ಗೀತಾ ಸಂದೇಶ ಸಪ್ತಾಹ’ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.

ಪ್ರತಿಯೊಬ್ಬರಿಗೂ ಹೊರ ಶರೀರ ಹಾಗೂ ಮನಸ್ಸು ಎಂಬ ಸೂಕ್ಷ್ಮ ಶರೀರಗಳಿರುತ್ತವೆ. ಮನಸ್ಸಿನಿಂದ ಹೊರಶರೀರದ ನಿಯಂತ್ರಣವಾಗುತ್ತದೆ. ಹೊರ ಶರೀರದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುವಂತೆ ಮನಸ್ಸಿಗೂ ಅನಾರೋಗ್ಯ ಉಂಟಾಗುತ್ತದೆ. ವ್ಯಾಯಾಮ ಹೊರ ಶರೀರದ ತ್ಯಾಜ್ಯವನ್ನು ಹೊರಹಾಕಿದಂತೆ ಧ್ಯಾನ, ಜಪಗಳಿಂದ ಮನಸ್ಸಿನಲ್ಲಿ ಜಮೆಯಾಗುವ ತ್ಯಾಜ್ಯವನ್ನು ಮನಸ್ಸಿನ ತ್ಯಾಜ್ಯ ಹೊರಹೋಗುತ್ತವೆ. ಪಾಪ, ಉದ್ವೇಗ, ಕೆಟ್ಟ ವಿಚಾರ, ಚಿಂತೆ, ಬೇಸರ ದೂರ ಆಗಲು ಭಗವಂತನ ಕಡೆ ಗಮನ ಮುಖ್ಯ. ಮನಸ್ಸನ್ನು ಉಲ್ಲಾಸಗೊಳಿಸುವ, ಅರಳಿಸುವ ಚಟುವಟಿಕೆ ಅತಿ ಅಗತ್ಯ ಎಂದರು.

ಶರೀರಕ್ಕೆ ಆಹಾರ ಹೇಗೆ ಶಕ್ತಿ ನೀಡುತ್ತದೋ ಹಾಗೆ ಭಗವದ್ಗೀತೆ, ಶರಣರ ವಚನಗಳ ಪಠಣದಿಂದ ಮನಸ್ಸಿಗೆ ಶಕ್ತಿ ದೊರೆಯುತ್ತದೆ. ಮಕ್ಕಳ ಮನಸುಗಳಿಗೆ ಉತ್ತಮ ವಿಚಾರ, ವಿಷಯಗಳನ್ನು ತುಂಬಬೇಕು. ಟಿವಿ ಎಂಬ ಮೂರ್ಖರ ಪೆಟ್ಟಿಗೆಗೆ ಅಂಟಿಕೊಳ್ಳದೆ, ಕಾಲಹರಣ ಮಾಡದೆ ಪ್ರತಿದಿನವೂ ಭಗವದ್ಗೀತೆಯನ್ನು ಓದಬೇಕು. ಅಂದಾಗ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ನುಡಿದರು.

ಹುಬ್ಬಳ್ಳಿಯ ಶ್ರೀ ಅದ್ವೈತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ಮಹಾಸ್ವಾಮೀಜಿ ಮಾತನಾಡಿ, ಭಗವದ್ಗೀತೆ ಮನದ ದುರ್ಬಲತೆಯನ್ನು ತೊಡೆದು ಹಾಕುತ್ತದೆ. ಸಮಾಜದ ಪ್ರತಿಯೊಬ್ಬರಿಗೂ ಅದರ ಮಹತ್ವ ಸಾರುತ್ತಿರುವ ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರ್ಯ ಶ್ಲಾಘನೀಯ ಎಂದರು.

ಜೆಎಎಸ್​ಎಸ್ ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಉಪಾದ್ಯೆ ಸ್ವಾಗತಿಸಿದರು. ವಿ.ಎಂ. ಭಟ್ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವೇದಘೊಷ ಮೊಳಗಿತು. ವಸಂತ ಭಟ್, ರಾಮಕೃಷ್ಣ ಭಟ್, ಜಿ.ಕೆ. ಹೆಗಡೆ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.