ಮುಂಡಗೋಡ: ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಬಾರದ ಕಾರಣ ತಾಲೂಕಿನ ಸನವಳ್ಳಿ ಗ್ರಾಮದ ವಿದ್ಯಾರ್ಥಿಗಳು ಕೆಲ ಹೊತ್ತು ಬಸ್ ತಡೆದು ಪ್ರತಿಭಟಿಸಿದರು. ನಂತರ ಸರಿಯಾದ ಸಮಯಕ್ಕೆ ಬಸ್ ಬಿಡುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಸಾರಿಗೆ ನಿಯಂತ್ರಣಾಧಿಕಾರಿ ಟಿ.ಸಿ. ಮೇತ್ರಿ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಸೋಮವಾರ ಮನವಿ ಸಲ್ಲಿಸಿದರು.
ಸನವಳ್ಳಿ ಗ್ರಾಮದಿಂದ ನಿತ್ಯ ಅರವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂಡಗೋಡ ಶಾಲೆ-ಕಾಲೇಜ್ಗಳಿಗೆ ತೆರಳುತ್ತಾರೆ. ಆದರೆ, ಬಂಕಾಪುರ ಸನವಳ್ಳಿ ಗ್ರಾಮಕ್ಕೆ ಬೆಳಗ್ಗೆ 11ಗಂಟೆಗೆ ಬಸ್ ಬರುತ್ತದೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ. ಅಲ್ಲದೆ, ಅನಿವಾರ್ಯವಾಗಿ ತರಗತಿಗಳಿಗೆ ತಡವಾಗಿ ಹೋಗಬೇಕಾಗಿದೆ. ಹೀಗಾಗಿ ಬೆಳಗ್ಗೆ 8.30 ಹಾಗೂ ಸಂಜೆ 5.30ಕ್ಕೆ ಬಸ್ ಬಿಡುವ ವ್ಯವಸ್ಥೆಯಾಗಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾರಿಗೆ ಅವ್ಯವಸ್ಥೆಗೆ ಪ್ರಯಾಣಿಕರ ಅಸಮಾಧಾನ
ಶಿರಸಿ: ಶಿರಸಿ- ಬನವಾಸಿ ರಸ್ತೆಯಲ್ಲಿ ಎರಡು ತಾಸುಗಳ ಕಾಲ ಯಾವುದೇ ಬಸ್ ಇರದಿದ್ದರಿಂದ ಪ್ರಯಾಣಿಕರು ಬೇಸತ್ತು ರಸ್ತೆ ತಡೆ ನಡೆಸಿದ ಘಟನೆ ಸೋಮವಾರ ಬೆಳಗ್ಗೆ ನಡೆಯಿತು.
ಇಲ್ಲಿಯ ಕೆರೆಕೈ ಬಸ್ ನಿಲ್ದಾಣದಲ್ಲಿ ಶಾಲೆ, ಕಾಲೇಜ್ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ಗಾಗಿ ಕಾಯುತ್ತಿದ್ದರು. ಬೆಳಗ್ಗೆ 7.30 ರಿಂದ 9.30ರ ವರೆಗೆ ಯಾವುದೇ ಬಸ್ ಬಂದಿರಲಿಲ್ಲ. ಇದರಿಂದಾಗಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿ, ಆ ಬಳಿಕ ಬಂದ ಬಸ್ಗಳು ತುಂಬಿ ನಿಲ್ಲಿಸದ ಸ್ಥಿತಿ ಉಂಟಾಗಿತ್ತು. ಇದರಿಂದಾಗಿ ಬೇಸತ್ತ ಪ್ರಯಾಣಿಕರು ರಸ್ತೆ ತಡೆ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು, ಬೆಳಗಿನ ವೇಳೆಯ ಬಸ್ಗಳನ್ನು ಸರಿಯಾದ ಸಮಯಕ್ಕೆ ಓಡಿಸುವುದಾಗಿ ಭರವಸೆ ನೀಡಿದರು.
ಜಿಪಂ ಸದಸ್ಯೆ ಉಷಾ ಹೆಗಡೆ ಅಧಿಕಾರಿಗಳೊಂದಿಗೆ ಮಾತನಾಡಿ, ‘ಬೆಳಗಿನ ವೇಳೆ ಹೆಚ್ಚುವರಿ ಬಸ್ ಓಡಿಸುವಂತೆ ಕಳೆದ ಮೂರು ವರ್ಷ ಗಳಿಂದ ಆಗ್ರಹಿಸುತ್ತಿದ್ದೇವೆ. ಸಮಯಕ್ಕೆ ಸರಿಯಾಗಿ ಬಸ್ ಬರದೇ ವಿದ್ಯಾರ್ಥಿಗಳಿಗೆ ಪ್ರತಿ ದಿನ ತರಗತಿ ತಪ್ಪುವಂತಾಗಿದೆ’ ಎಂದು ಆಕ್ಷೇಪಿಸಿದರು. ಸ್ಥಳೀಯರಾದ ಇಮ್ತಿಯಾಜ್, ಶಿವಣ್ಣ, ಪಾಲ್ಗೊಂಡಿದ್ದರು.