ಕುಮಟಾ: ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸವಿದೆ. ಹಾಗೆಯೇ ಮಕ್ಕಳಲ್ಲೂ ಧೈರ್ಯದಿಂದ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಪಂ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸೂಕ್ಷ್ಮತೆ ಹಾಗೂ ಗಂಭೀರತೆಯಿಂದ ನಿಭಾಯಿಸಬೇಕಿದೆ. ಸಾರಿಗೆ ಇಲಾಖೆಯ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದರು.
ಬಿಇಒ ರಾಜೇಂದ್ರ ಭಟ್ ಮಾತನಾಡಿ, ತಾಲೂಕಿನಲ್ಲಿ ಹೆಚ್ಚುವರಿ 2 ಪರೀಕ್ಷಾ ಕೇಂದ್ರ ಸೇರಿ ಒಟ್ಟು 11 ಕೇಂದ್ರಗಳಲ್ಲಿ 1988 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸರ್ಕಾರಿ ಬಸ್ನಲ್ಲಿ 1075 ಮಕ್ಕಳು, ಖಾಸಗಿ ಶಾಲಾ ವಾಹನ ಬಾಡಿಗೆಗೆ ಪಡೆದು 97 ಮ್ಮಕಳು, ಖಾಸಗಿ ಶಾಲಾ ವಾಹನದಲ್ಲಿ ಆಡಳಿತ ಮಂಡಳಿ ಕರೆತರುವ 67 ಮಂದಿ, ಕಾಲ್ನಡಿಗೆಯಲ್ಲಿ 99 ಮಂದಿ, ಸೈಕಲ್-ಆಟೋ ಮೂಲಕ 46 ಮಂದಿ, ಪಾಲಕರ ಜೊತೆ 598 ಮಂದಿ ಹಾಗೂ ವಸತಿ ನಿಲಯದ 6 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ. ಪರೀಕ್ಷೆ ನಿರ್ವಹಣೆಗೆ ಒಟ್ಟೂ 261 ಅಧಿಕಾರಿ ಹಾಗೂ ಸಿಬ್ಬಂದಿ, ಸಹಾಯವಾಣಿಯಲ್ಲಿ 27 ಮಂದಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಎಂದರು.
ಉಪವಿಭಾಗಾಧಿಕಾರಿ ಅಜಿತ್ ಎಂ.ರೈ, ತಹಸೀಲ್ದಾರ್ ಮೇಘರಾಜ ನಾಯ್ಕ, ವಾಕರಸಾ ಘಟಕ ವ್ಯವಸ್ಥಾಪಕಿ ಸೌಮ್ಯಾ ನಾಯಕ, ತಾಪಂ ಇಒ ಸಿ.ಟಿ. ನಾಯ್ಕ, ಸಿಪಿಐ ಪರಮೇಶ್ವರ ಗುನಗಾ, ಮುಖ್ಯಾಧಿಕಾರಿ ಸುರೇಶ. ಎಂ.ಕೆ. ಬಿಆರ್ಸಿ ರೇಖಾ ನಾಯ್ಕ, ಜಿಪಂ ಇಓ ರಾಮದಾಸ ಗುನಗಿ ಇನ್ನಿತರರು ಇದ್ದರು.