ಹುಬ್ಬಳ್ಳಿ: ದಲಿತ ಸಂಘ- ಸಂಸ್ಥೆಗಳ ಮಹಾಮಂಡಳದ ವತಿಯಿಂದ ನಗರದಲ್ಲಿ ಮಂಗಳವಾರ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರೋಧಿಸಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ವಿವಿಧ ದಲಿತಪರ ಸಂಘಟನೆಗಳು ಗುಡುಗಿದವು.
ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ವಿವಿಧ ದಲಿತಪರ ಸಂಘಟನೆಗಳು, ಕಾಂಗ್ರೆಸ್, ಅಂಜುಮನ್ ಸಂಸ್ಥೆ, ಮತ್ತಿತರ ಸಂಘಟನೆಗಳ ಮುಖಂಡರು, ಸಹಸ್ರಾರು ಸದಸ್ಯರು ಪಾಲ್ಗೊಂಡಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಲ್ಯಾಮಿಂಗ್ಟನ್ ರಸ್ತೆ ಮೂಲಕ ಪ್ರತಿಭಟನಾ ರ‍್ಯಾಲಿ ಆರಂಭಿಸಲಾಯಿತು. ರಾಯಣ್ಣ ವೃತ್ತ, ಚನ್ನಮ್ಮ ವೃತ್ತದ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ಆರ್ಎಸ್ಎಸ್ ಇತಿಹಾಸ ನೋಡಿದರೆ ಯಾರೂ ದೇಶಕ್ಕಾಗಿ ರಕ್ತ ಕೊಟ್ಟವರಲ್ಲ. ಜಾತಿ- ಧರ್ಮದ ಹೆಸರಲ್ಲಿ ಬೆಂಕಿ ಹಚ್ಚಿ ದೇಶ ಒಡೆಯುವ ಕುತಂತ್ರ ಮಾಡುತ್ತಿದ್ದಾರೆ. ಬೇರೆ ದೇಶದಿಂದ ಬರುವ ಎಲ್ಲ ಧರ್ಮದವರಿಗೆ ಪೌರತ್ವ ಕೊಟ್ಟು ಮುಸಲ್ಮಾನ ಸಮಾಜವನ್ನು ಮಾತ್ರ ಏಕೆ ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಇಸ್ಮಾಯಿಲ್ ತಮಟಗಾರ ಮಾತನಾಡಿದರು. ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ದಲಿತ ಮುಖಂಡರಾದ ಪಿತಾಂಬರಪ್ಪ ಬಿಳಾರ, ಗುರುನಾಥ ಉಳ್ಳಿಕಾಶಿ, ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಗಣೇಶ ಟಗರಗುಂಟಿ, ಅಲ್ತಾಫ್ ಕಿತ್ತೂರ, ವೆಂಕಟೇಶ ಮೇಸ್ತ್ರಿ, ಲಕ್ಷ್ಮಣ ಬಕ್ಕಾಯಿ, ಪ್ರಕಾಶ ಕ್ಯಾರಕಟ್ಟಿ, ದೇವಾನಂದ ಜಗಾಪುರ, ಬಷೀರ ಗುಡಮಾಲ, ದಶರಥ ವಾಲಿ, ದೀಪಾ ಗೌರಿ, ಸುಧಾ ಮಣಿಕುಂಟ್ಲ, ಸುವರ್ಣ ಕಲ್ಲಕುಂಟ್ಲ, ಇಂದುಮತಿ ಸಿರಗಾಂವಿ, ಇತರರಿದ್ದರು.
ಬ್ಯಾರಿಕೇಡ್ ತಳ್ಳಿ ನುಗ್ಗಿದರು: ಪ್ರತಿಭಟನಾಕಾರರು ಚನ್ನಮ್ಮ ವೃತ್ತಕ್ಕೆ ಹೋಗಬಾರದು ಎಂದು ಪೊಲೀಸರು ರಾಯಣ್ಣ ವೃತ್ತದಲ್ಲಿ ಎರಡು ಕಡೆ ಬ್ಯಾರಿಕೇಡ್ ಅಡ್ಡಲಾಗಿ ಇಟ್ಟಿದ್ದರು. ಅದನ್ನು ಲೆಕ್ಕಿಸದೇ ಪೊಲೀಸರು ಹಾಗೂ ಬ್ಯಾರಿಕೇಡ್ಗಳನ್ನು ತಳ್ಳಿಕೊಂಡು ಚನ್ನಮ್ಮ ವೃತ್ತದ ಕಡೆಗೆ ನುಗ್ಗಿದರು.
ಪೊಲೀಸರ ಜತೆ ವಾಗ್ವಾದ: ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪ್ರತಿಭಟನಾ ಮೆರವಣಿಗೆ ವೇಗವಾಗಿ ಮುಂದೆ ಸಾಗುವಂತೆ ಪೊಲೀಸರು ಮುಖಂಡರಿಗೆ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ಭಾರಿ ಸಂಚಾರ ದಟ್ಟಣೆ: ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ಆರಂಭವಾಗಿ ಮಧ್ಯಾಹ್ನ 2.30ಕ್ಕೆ ಮುಕ್ತಾಯವಾಯಿತು. ಈ ವೇಳೆ ಬಸವ ವನದಿಂದ ರೈಲು ನಿಲ್ದಾಣದವರೆಗೆ ಸಂಚಾರ ಸ್ತಬ್ಧವಾಗಿತ್ತು. ಮಾರ್ಗ ಬದಲಾವಣೆ ಮಾಡಲಾಗಿತ್ತಾದರೂ ಕಾಟನ್ ಮಾರ್ಕೆಟ್, ಶಾರದಾ ಭವನ, ದೇಶಪಾಂಡೆ ನಗರ, ಕೇಶ್ವಾಪುರ, ಗದಗ ರಸ್ತೆ, ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆ, ಗೋಕುಲ ರಸ್ತೆಯಲ್ಲಿ ವಾಹನಗಳು ಗಂಟೆಗಟ್ಟಲೇ ಸಾಲುಗಟ್ಟಿ ನಿಂತಿದ್ದವು.
ಕೌತಾಳಗೆ ಅಬ್ಬಯ್ಯ ಆಹ್ವಾನ: ಬಿಜೆಪಿ ಮುಖಂಡ ಮಹೇಂದ್ರ ಕೌತಾಳ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಚರ್ಚೆಗೆ ಬರಲು ನನಗೆ ಆಹ್ವಾನ ನೀಡಿದ್ದಾರೆ. ಅವರೊಂದಿಗೆ ರ್ಚಚಿಸಲು ನಮ್ಮ ಒಬ್ಬ ಕಾರ್ಯಕರ್ತ ಸಾಕು ಎಂದು ಅಬ್ಬಯ್ಯ ಬಹಿರಂಗ ಆಹ್ವಾನ ನೀಡಿದರು.