ವಿದೇಶಿ ಪ್ರವಾಸಿಗರ ವಿಶೇಷ ತಪಾಸಣೆ

ಗೋಕರ್ಣ: ಇತ್ತೀಚೆಗೆ ಗೋಕರ್ಣದಲ್ಲಿ ವಿದೇಶಿಗರ ಅಕ್ರಮ ವಾಸ ಹೆಚ್ಚಾಗಿದ್ದು, ಇಲ್ಲಿನ ವಿವಿಧೆಡೆ ವಾಸವಾಗಿರುವ ಪ್ರವಾಸಿ ವಿದೇಶಿಯರನ್ನು ಪೊಲೀಸರು ತಪಾಸಣೆ ನಡೆಸಿದರು.

ಅಕ್ರಮ ವಿದೇಶಿಗರ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 18 ಸದಸ್ಯರ ವಿಶೇಷ ದಳ ರಚಿಸಿದ್ದಾರೆ. ಇತ್ತೀಚೆಗೆ ರಷ್ಯಾದ ಪ್ರವಾಸಿ ಕಳೆದ ಎರಡು ವರ್ಷಕ್ಕೂ ಹೆಚ್ಚಿನ ಕಾಲ ಅಕ್ರಮ ವಾಸವಾಗಿರುವ ಕಾರಣ ಜಿಲ್ಲಾಡಳಿತ ಸಮಗ್ರ ತನಿಖೆಗೆ ಮುಂದಾಗಿದೆ. ವಿದೇಶಿಯರ ವೀಸಾ, ಪಾಸ್​ಪೋರ್ಟ್ ಸೇರಿ ಎಲ್ಲ ವಸ್ತುಗಳ ತಪಾಸಣೆ ಮಾಡಲಾಗಿದೆ. ಸದ್ಯ ಗೋಕರ್ಣದಲ್ಲಿ 320 ವಿದೇಶಿಯರು ವಾಸವಾಗಿದ್ದಾರೆ.

ಕುಮಟಾ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿಎಸ್​ಐ ಸಂತೋಷಕುಮಾರ, ಜಿಲ್ಲಾ ವಿಶೇಷ ದಳದ ಪಿಎಸ್​ಐ ಶ್ರೀಧರ, ಕುಮಟಾ ಪಿಎಸ್​ಐ ಹನುಮಂತ ಬಿರಾದಾರ ಸಿಬ್ಬಂದಿ ಸಿದ್ದಪ್ಪ, ಶಿವಾನಂದ ಗೌಡ, ಅನಿಲ ಮಾದರ ಇದ್ದರು.