ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಇಬ್ಬರ ಬಂಧನ

ಭಟ್ಕಳ: ರೈಲಿನಲ್ಲಿ ಅನಧಿಕೃತವಾಗಿ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಇಬ್ಬರನ್ನು ಭಟ್ಕಳ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಭಟ್ಕಳ ಮೂಲದ ಮಸ್ಮಾ ಸ್ಟ್ರೀಟ್​ನ ಹಸನ್​ಶಬ್ಬರ, ಉಮೈದ್ ಅಹ್ಮದ್ ಬಂಧಿತ ಆರೋಪಿಗಳು.

ಇವರು ಗೋವಾ ರಾಜ್ಯದಿಂದ ಮಂಗಳೂರು ಕಡೆಗೆ ಕರೆನ್ಸಿ ಸಾಗಿಸುತ್ತಿರುವ ಮಾಹಿತಿ ತಿಳಿದು ಪೊಲೀಸರು ದಾಳಿ ನಡೆಸಿದ್ದರು. ಇಬ್ಬರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಆದರೆ, ಆರೋಪಿಗಳು ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮಂಗಳೂರಿನ ಕೇಂದ್ರ ತೆರಿಗೆ ಗುಪ್ತಚರ ಇಲಾಖೆಯ ಸಹಾಯಕ ನಿರ್ದೇಶಕರಿಗೆ ವಿಷಯ ತಿಳಿಸಿದ್ದರು. ಗುರುವಾರ ಠಾಣೆಗೆ ಆಗಮಿಸಿದ ಡಿ.ಡಿ.ಆರ್.ಐ ಶ್ರೇಯಸ್ ನೇತೃತ್ವದ ತಂಡ ಆರೋಪಿಗಳನ್ನು ಸಂಜೆವರೆಗೂ ತಪಾಸಣೆ ನಡೆಸಿತು. ಯೂರೊ, ಪೌಂಡ್, ದಿರಾಮ್್ಸ, ಸ್ವೀಸ್ ಪ್ರಾನ್ಸ್, ಒಮನ್ ಡಾಲರ್​ಗಳ ರೂಪದಲ್ಲಿ ವಿವಿಧ ದೇಶಗಳ ಸುಮಾರು 80 ಲಕ್ಷ ರೂ. ಮೌಲ್ಯದ ಕರೆನ್ಸಿ ಲಭಿಸಿದೆ. ಆರೋಪಿಗಳನ್ನು ಕೇಂದ್ರ ತೆರಿಗೆ ಗುಪ್ತಚರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ತನಿಖೆಗಾಗಿ ಮಂಗಳೂರಿಗೆ ಕರೆದೊಯ್ದಿದ್ದಾರೆ. ಡಿವೈಎಸ್​ಪಿ ವೆಲೈಂಟೆನ್ ಡಿಸೋಜ, ಸಿಪಿಐ ಗಣೇಶ ಕೆ.ಎಲ್, ಪಿಎಸ್​ಐ ಕುಸುಮಾಧರ ಅವರು ಕಾರ್ಯಾಚರಣೆ ತಂಡದಲ್ಲಿದ್ದರು.