Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ವಿದೇಶಾಂಗ ನೀತಿಯ ಏಳು ದಶಕಗಳ ಏಳುಬೀಳು

Wednesday, 16.08.2017, 3:01 AM       No Comments

ಆದರ್ಶಗಳು ಯಶಸ್ವಿಯಾಗುವುದು ಸಂಬಂಧಿಸಿದ ಎಲ್ಲ ಪಕ್ಷಗಳೂ ಅವನ್ನು ನಿಷ್ಠೆಯಿಂದ ಪಾಲಿಸುವುದರಿಂದ ಮಾತ್ರ. ನೆಹರೂ ಅನುಸರಿಸಿದ ವಿದೇಶ ನೀತಿಗಳು ಈ ಮಾತಿಗೆ ಸಾಕ್ಷಿ. ಅಂದು ನೆಹರೂ ಮಾಡಿದ ಪ್ರಮಾದಗಳು, ಅನುಸರಿಸಿದ ಅಪ್ರಾಯೋಗಿಕ ನೀತಿಗಳ ಫಲವನ್ನು ದೇಶ ಇಂದಿಗೂ ಉಣ್ಣುತ್ತಲೇ ಇದೆ.

ನಿನ್ನೆಯಷ್ಟೇ ಭಾರತ ತನ್ನ ಸ್ವತಂತ್ರ ಅಸ್ತಿತ್ವದ ಏಳು ದಶಕಗಳನ್ನು ಪೂರ್ಣಗೊಳಿಸಿದೆ. ಕಳೆದ ಎಪ್ಪತ್ತು ವರ್ಷಗಳ ವಿದೇಶಾಂಗ ನೀತಿಯ ಅವಲೋಕನಕ್ಕೆ ಈ ಸಂದರ್ಭ ಸೂಕ್ತ. ಈ ಪುರಾತನ ನಾಡು ಆಧುನಿಕ ಯುಗದಲ್ಲಿ ವಿಶ್ವ ರಾಜಕಾರಣದಲ್ಲಿ ತನಗೊಂದು ವಿಶಿಷ್ಟ ಸ್ಥಾನ ಗಳಿಸಿಕೊಳ್ಳಲು ಹೆಣಗಿದ ಕಥನವನ್ನು ಮೂರು ‘ಕಾಲ‘ಗಳಲ್ಲಿ ವಿಂಗಡಿಸಿ ವಿಶ್ಲೇಷಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಆತ್ಮಘಾತಕ ಕಾಲ: ಆದರ್ಶವಾದಿಯಾಗಿದ್ದ ಜವಾಹರ್​ಲಾಲ್ ನೆಹರೂ ಸ್ವತಂತ್ರ ಭಾರತದ ವಿದೇಶನೀತಿಯನ್ನು ರೂಪಿಸಿದಾಗ ಸಹವಾಗಿಯೇ ಅದರಲ್ಲಿ ಆದರ್ಶಗಳು ಪ್ರಧಾನ ಅಂಶವಾದವು. ಹಾಗೆ ನೋಡಿದರೆ, ಈ ಸೂಚನೆ ದೇಶ ಸ್ವತಂತ್ರವಾಗುವುದಕ್ಕೆ ಕೆಲ ತಿಂಗಳ ಮೊದಲೇ ಜಗತ್ತಿಗೆ ಬಿತ್ತರವಾಗಿತ್ತು. 1947ರ ಮಾರ್ಚ್​ನಲ್ಲಿ ದೆಹಲಿಯಲ್ಲಿ ಆಯೋಜಿಸಲಾದ ಪ್ರಥಮ “Asian Relations Conference’ನಲ್ಲಿ ಭಾರತದ ಆಂತರಿಕ ಪ್ರಧಾನಮಂತ್ರಿ (Interim Prime Minister) ಸ್ಥಾನದಿಂದ ಮಾತನಾಡುತ್ತಾ ನೆಹರೂ ಭಾರತದ ವಿದೇಶನೀತಿಯ ಮೊಟ್ಟಮೊದಲ ಗುರಿ”Freedom of policy’ ಆಗಿರುತ್ತದೆ ಎಂದು ಘೊಷಿಸಿದರು. ಅವರ ಮಾತಿನ ಅರ್ಥ ‘ತನ್ನ ವಿದೇಶ ಹಾಗೂ ಆಂತರಿಕ ನೀತಿಗಳನ್ನು ರೂಪಿಸುವಲ್ಲಿ ಹಾಗೂ ಅನುಷ್ಠಾನಗೊಳಿಸುವಲ್ಲಿ ಭಾರತ ಸಂಪೂರ್ಣ ಸ್ವತಂತ್ರವಾಗಿರುತ್ತದೆ, ಬೇರೆ ಯಾವುದೇ ಹೊರಗಿನ ಶಕ್ತಿಗಳು ನಮ್ಮ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರಲು ಅವಕಾಶವಿರುವುದಿಲ್ಲ‘ ಎಂದಾಗಿತ್ತು. ಈ ನೀತಿಯ ಆಧಾರದ ಮೇಲೇ ನೆಹರೂ ಭಾರತವನ್ನು ಶೀತಲ ಸಮರದ ಆ ದಿನಗಳಲ್ಲಿ ಅಮೆರಿಕಾ ಅಥವಾ ಸೋವಿಯೆತ್ ಯೂನಿಯನ್ ನೇತೃತ್ವದ ಯಾವುದೇ ಬಣದ ಸದಸ್ಯರಾಷ್ಟ್ರವನ್ನಾಗಿ ಮಾಡಲು ನಿರಾಕರಿಸಿದರು. ಯಾವುದೇ ಗುಂಪಿನ ಸದಸ್ಯನಾದರೆ ಗುಂಪಿನ ನಾಯಕ ಅಥವಾ ಇತರ ಸದಸ್ಯರಾಷ್ಟ್ರಗಳ ಒತ್ತಡಕ್ಕೆ ಸಿಲುಕಿ ಅಷ್ಟರಮಟ್ಟಿಗೆ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ, ನಮ್ಮ ನೀತಿಗಳನ್ನು ರೂಪಿಸುವಾಗ ಇತರರ ಒತ್ತಡಕ್ಕೆ ಸಿಕ್ಕಿಬೀಳುತ್ತೇವೆ ಎಂಬ ನಂಬಿಕೆ ಅಥವಾ ಶಂಕೆಯೇ ನೆಹರೂ ಯಾವ ಗುಂಪಿಗೂ ಸೇರದೇ ಮೂರನೆಯದಾದ ಅಲಿಪ್ತ ಮಾರ್ಗವನ್ನು ಅನುಸರಿಸಲು ಕಾರಣವಾಯಿತು. ಆದರೆ, ಆದರ್ಶಗಳು ಯಶಸ್ವಿಯಾಗುವುದು ಸಂಬಂಧಿಸಿದ ಎಲ್ಲ ಪಕ್ಷಗಳೂ ಅವನ್ನು ನಿಷ್ಠೆಯಿಂದ ಪಾಲಿಸುವುದರಿಂದ ಮಾತ್ರ, ಅನಾದರ್ಶಮಯ ಜಗತ್ತಿನಲ್ಲಿ ಆದರ್ಶಗಳನ್ನು ಪಾಲಿಸಹೊರಟವನು ಅಂತಿಮವಾಗಿ ಸಂಕಷ್ಟಕ್ಕೊಳಗಾಗುತ್ತಾನೆ ಎಂಬ ಸತ್ಯವನ್ನು ಮನಗಾಣುವುದರಲ್ಲಿ ನೆಹರೂ ವಿಫಲರಾದರು. ನಿಜ ಹೇಳಬೇಕೆಂದರೆ, ಶೀತಲ ಸಮರದ ದಿನಗಳಲ್ಲಿ ಭಾರತಕ್ಕೆ ಅಮೆರಿಕದ ಮಿತ್ರತ್ವ ಅನುಕೂಲಕರವಾಗುತ್ತಿತ್ತು. ಇದರಿಂದಾಗಿ ಅಮೆರಿಕಾ ಪಾಕಿಸ್ತಾನವನ್ನು ಕಡೆಗಣಿಸುತ್ತಿತ್ತು ಮತ್ತದರ ಪರಿಣಾಮವಾಗಿ ಪಾಕಿಸ್ತಾನ ನಮಗೆ ಮಗ್ಗುಲ ಮುಳ್ಳಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಚೀನಾ ಸಹ 1962ರಲ್ಲಿ ನಮ್ಮ ವಿರುದ್ಧ ಯುದ್ಧಕ್ಕಿಳಿಯುತ್ತಿರಲಿಲ್ಲ. ಈ ಸಂಬಂಧದಲ್ಲಿ, ಪಕ್ಕದ ತೈವಾನ್​ಗೆ ಸೇರಿದ ಎರಡು ದ್ವೀಪಗಳನ್ನು ಆಕ್ರಮಿಸಿಕೊಳ್ಳಲು ಚೀನಾ 1958ರಲ್ಲಿ ಪ್ರಯತ್ನಿಸಿದ್ದು, ನಂತರ ಅಮೆರಿಕಾದ ಬೆದರಿಕೆಯಿಂದ ಹಿಂತೆಗೆದದ್ದನ್ನು ನಾವು ನೆನಪಿಸಿಕೊಳ್ಳಬೇಕು. ಆದರೆ ನೆಹರೂರ ಅಲಿಪ್ತ ನೀತಿಯಿಂದಾಗಿ ಅಮೆರಿಕಾ ಭಾರತದಿಂದ ದೂರಾಗಿ ಪಾಕಿಸ್ತಾನಕ್ಕೆ ಹತ್ತಿರವಾಯಿತು. ಸೋವಿಯೆತ್ ಯೂನಿಯನ್ ನಮ್ಮ ಬೆಂಬಲಕ್ಕೆ ನಿಂತದ್ದು 1971ರ ಆಗಸ್ಟ್​ನಿಂದೀಚೆಗಷ್ಟೇ. (1962ರ ಭಾರತ-ಚೀನಾ ಯುದ್ಧದಲ್ಲಿ ಮಾಸ್ಕೋ ಆಳ ಸೈದ್ಧಾಂತಿಕ ಭೇದಗಳಿದ್ದಾಗ್ಯೂ ಚೀನಾದ ಪರ ವಹಿಸಿತ್ತು.) ಹೀಗಾಗಿ ಶೀತಲ ಯುದ್ಧದ ಬಹುಪಾಲು ಅವಧಿಯಲ್ಲಿ ಭಾರತದ ಪರವಾಗಿ ಯಾವುದೇ ಬೃಹತ್ ರಾಷ್ಟ್ರ ಇರಲಿಲ್ಲ. ಅಲ್ಲದೇ ಇತರ ಪ್ರಮುಖ ಅಲಿಪ್ತ ದೇಶಗಳೂ ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪರ ವಹಿಸಲು ನಿರಾಕರಿಸಿದವು. ಚೀನಾದ ಜತೆಗಿನ ಯುದ್ಧದಲ್ಲಿ ಅಲಿಪ್ತ ಇಂಡೋನೇಷಿಯಾ ಬಹಿರಂಗವಾಗಿ ಚೀನಾದ ಪರ ವಹಿಸಿತು. ಯುಗೊಸ್ಲಾವಿಯಾ ಮತ್ತು ಈಜಿಪ್ಟ್​ಗಳು ಭಾರತಕ್ಕೆ ಯಾವುದೇ ಬೆಂಬಲ ವ್ಯಕ್ತಪಡಿಸಲಿಲ್ಲ. ಆಗ ನಮ್ಮ ನೆರವಿಗೆ ಬಂದ ದೇಶಗಳೆಂದರೆ ನೆಹರೂ ಅವಕಾಶ ಸಿಕ್ಕಿದಾಗೆಲ್ಲಾ ತೆಗಳುತ್ತಿದ್ದ ಅಮೆರಿಕಾ ಮತ್ತದರ ಸೇನಾ ಸಹಯೋಗಿಗಳಾಗಿದ್ದ ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್!

ತಮ್ಮ ಆದರ್ಶವಾದಿ ನಿಲುವುಗಳಿಂದಲೇ ನೆರೆಹೊರೆಯ ದುಷ್ಟಶಕ್ತಿಗಳು ಭಾರತಕ್ಕೆ ಒಡ್ಡಿದ ಅಪಾಯವನ್ನು ಸರಿಯಾಗಿ ಗ್ರಹಿಸುವುದರಲ್ಲೂ ಹಾಗೂ ಸಮರ್ಪಕವಾಗಿ ಪ್ರತಿಕ್ರಿಯಿಸುವುದರಲ್ಲೂ ನೆಹರೂ ದಾರುಣವಾಗಿ ಸೋತರು. ಪಾಕಿಸ್ತಾನ ಹಾಗೂ ಚೀನಾಗಳನ್ನು ಕುರಿತಂತೆ ನೆಹರೂ ರೂಪಿಸಿ ಆಚರಿಸಿದ ನೀತಿಗಳು ಭಾರತಕ್ಕೆ ಅದೆಷ್ಟು ಆತ್ಮಘಾತಕವಾದುವೆಂದರೆ ಅವುಗಳನ್ನು ಪರಿಹರಿಸಿಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಉದಾಹರಣೆಗೆ, ಕಾಶ್ಮೀರ ಸಮಸ್ಯೆಯನ್ನೇ ತೆಗೆದುಕೊಳ್ಳೋಣ.

ಕಾಶ್ಮೀರಕ್ಕೆ ಸಂಬಂಧಿಸಿದಂತೆ ನೆಹರೂ ಸರಕಾರ ತಪ್ಪಿನ ಮೇಲೆ ತಪ್ಪು ಎಸಗಿದೆ. ಕಾಶ್ಮೀರದ ಮೇಲೆ ಆಕ್ರಮಣವೆಸಗಿದ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಗೆ ದೂರು ಒಯ್ದದ್ದು ಮೊದಲ ತಪ್ಪು. ನೆಹರೂರ ಅಮೆರಿಕಾ-ವಿರೋಧೀ ನೀತಿಗಳಿಂದಾಗಿ ಆ ದೊಡ್ಡಣ್ಣನ ಮಿತ್ರರಿಂದಲೇ ತುಂಬಿದ್ದ ಆಗಿನ ವಿಶ್ವಸಂಸ್ಥೆ ನಮ್ಮ ಹಿತಾಸಕ್ತಿಗಳಿಗೆ ಅನುಕೂಲವಲ್ಲದ ನಿಲುವು ತಳೆಯಿತು. ವಾಸ್ತವವಾಗಿ ಕಾಶ್ಮೀರದಲ್ಲಿ ಸೇನಾ ಯುದ್ಧ ನಡೆಸುವುದಕ್ಕಿಂತಲೂ ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ಯುದ್ಧ ನಡೆಸುವುದು ಭಾರತಕ್ಕೆ ಹೆಚ್ಚು ಕಷ್ಟಕರವಾಯಿತು. ನಂತರ, ಕಾಶ್ಮೀರದಿಂದ ಪಾಕಿಸ್ತಾನೀ ಸೇನೆ ಸಂಪೂರ್ಣವಾಗಿ ಕಾಲು ತೆಗೆಯುವ ಮೊದಲೇ ವಿಶ್ವಸಂಸ್ಥೆಯ ನಿರ್ಣಯಗಳನ್ನು ಒಪ್ಪಿಕೊಂಡು ಯುದ್ಧವಿರಾಮ ಘೊಷಿಸಿದ್ದು ನೆಹರೂ ಮಾಡಿದ ಎರಡನೆಯ ತಪ್ಪು. ಇದರಿಂದಾಗಿ ಕಾಶ್ಮೀರದ ಒಟ್ಟು ನೆಲದ ಶೇಕಡಾ ನಲವತ್ತರಷ್ಟು ಈಗಲೂ ಪಾಕಿಸ್ತಾನದ ಹಿಡಿತದಲ್ಲಿದೆ ಮತ್ತು ಪಾಕಿಸ್ತಾನ ಅಲ್ಲಿ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ. ಈ ಕಾರಣಗಳಿಂದಾಗಿ ಕಾಶ್ಮೀರ ದಶಕಗಳಿಂದ ಅಶಾಂತಿಯಲ್ಲಿ ಬೇಯುತ್ತಿದೆ. ಅಲ್ಲಿ ಪಾಕಿಸ್ತಾನೀ-ಪ್ರೇರಿತ ಭಯೊತ್ಪಾದನೆಯಿಂದಾಗಿ ಸಾವಿರಾರು ಜನರ ಪ್ರಾಣಹಾನಿಯಾಗುತ್ತಿದೆ.

ತಮ್ಮ ಅವಾಸ್ತವಿಕ, ಅಸಮರ್ಪಕ ದೃಷ್ಟಿಕೋನಗಳಿಂದಾಗಿ ನೆಹರೂ ಸೃಷ್ಟಿಸಿದ, ಇಂದಿಗೂ ಬಗೆಹರಿಯದ ಮತ್ತೊಂದು ಸಮಸ್ಯೆಯೆಂದರೆ ಚೀನಾ ಜತೆ ಅನಗತ್ಯ ಗಡಿವಿವಾದ. ಪಶ್ಚಿಮದ ಅಕ್ಸಾಯ್ ಚಿನ್ ಮತ್ತು ಪೂರ್ವದ ಅರುಣಾಚಲ ಪ್ರದೇಶ ಭಾರತ ಮತ್ತು ಚೀನಾಗಳ ನಡುವೆ ಪ್ರಮುಖ ವಿವಾದಿತ ಪ್ರದೇಶಗಳಾಗಿವೆ. ಇವುಗಳಲ್ಲಿ ಈಗ ಅಕ್ಸಾಯ್ ಚಿನ್ ಚೀನಾದ ವಶದಲ್ಲೂ ಅರುಣಾಚಲ ಪ್ರದೇಶ ಭಾರತದ ವಶದಲ್ಲೂ ಇವೆ. ಐತಿಹಾಸಿಕ ದಸ್ತಾವೇಜುಗಳು ಮತು ಭೂಪಟಗಳ ಪ್ರಕಾರ ಈ ಎರಡೂ ಪ್ರದೇಶಗಳು ಐತಿಹಾಸಿಕವಾಗಿ ಭಾರತಕ್ಕೆ ಸೇರಿರಲಿಲ್ಲ. ಟಿಬೆಟ್ ಮೇಲೆ ಚೀನಾದ ಸಾರ್ವಭೌಮತ್ವವಿತ್ತು ಮತ್ತು ಅರುಣಾಚಲ ಪ್ರದೇಶದ ವಿವಿಧ ಬುಡಕಟ್ಟುಗಳ ನಾಯಕರು ಟಿಬೆಟ್​ನ ದಲೈ ಲಾಮಾರ ಸಾಮಂತರಾಗಿದ್ದರು. ಈ ಪ್ರದೇಶವನ್ನು ಸೇನಾಕಾರ್ಯಾಚರಣೆ ಮೂಲಕ ವಶಪಡಿಸಿಕೊಂಡು 1911ರಲ್ಲಿ ಭಾರತಕ್ಕೆ ಸೇರಿಸಿದವನು ಕರ್ನಲ್ ಫ್ರಾನ್ಸಿಸ್ ಯಂಗ್​ಹಸ್ಬೆಂಡ್. ಪಶ್ಚಿಮದ ಅಕ್ಸಾಯ್ ಚಿನ್ ಬಗ್ಗೆ ಹೇಳುವುದಾದರೆ ಆ ಪ್ರದೇಶವನ್ನು ಬ್ರಿಟಿಷ್ ಭಾರತ 20ನೇ ಶತಮಾನದ ಆದಿಭಾಗದಲ್ಲಿ ತನ್ನ ಭೂಪಟದಲ್ಲಿ ಮಾತ್ರ ಸೇರಿಸಿಕೊಂಡಿತೇ ವಿನಾ ಅದರ ಮೇಲೆ ವಾಸ್ತವ ಹತೋಟಿ ಸ್ಥಾಪಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಹೀಗಾಗಿ ಈ ಎರಡು ಪ್ರದೇಶಗಳ ಒಡೆತನದ ಬಗ್ಗೆ ಸ್ವತಂತ್ರ ಭಾರತ ಮತ್ತು ಕಮ್ಯೂನಿಸ್ಟ್ ಚೀನಾಗಳ ನಡುವೆ ವಿವಾದವೆದ್ದಾಗ ಅಕ್ಸಾಯ್ ಚಿನ್ ಮೇಲೆ ತನ್ನ ಅಧಿಕಾರವನ್ನು ಭಾರತ ಮಾನ್ಯ ಮಾಡುವುದಾದರೆ ಅರುಣಾಚಲದ ಮೇಲೆ ಭಾರತದ ಅಧಿಕಾರವನ್ನು ತಾನು ಒಪ್ಪಿಕೊಳ್ಳುವುದಾಗಿ ಚೀನಾ ಹೇಳಿತು. ಗಡಿಸಮಸ್ಯೆಯ ಪರಿಹಾರಕ್ಕೆ ಇದೊಂದು ಅತ್ಯಂತ ಸಮರ್ಪಕ ವಿಧಾನವಾಗಿತ್ತು. ಹೇಗೆಂದರೆ ಭೌಗೋಳಿಕವಾಗಿ ಕಾರಾಕೊರಂ ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದ ಅಕ್ಸಾಯ್ ಚಿನ್ ಅನ್ನು ಭಾರತ ವಶಕ್ಕೆ ತೆಗೆದುಕೊಂಡರೂ ಚಳಿಗಾಲದಲ್ಲಿ ಹಿಮದಿಂದ ಮುಚ್ಚಿಹೋಗುವ ಪರ್ವತ ಕಣಿವೆಗಳಿಂದಾಗಿ ಆ ಪ್ರದೇಶದ ಜತೆ ನಮ್ಮ ಸಂಪರ್ಕ ತಪ್ಪಿಹೋಗುತ್ತದೆ. ಅದೇ ರೀತಿ ಚೀನಾ (ಟಿಬೆಟ್) ಮತ್ತು ಅರುಣಾಚಲ ಪ್ರದೇಶಗಳ ನಡುವೆ ಹಿಮಾಲಯ ಪರ್ವತವಿದ್ದು ಚಳಿಗಾಲದಲ್ಲಿ ಚೀನೀಯರಿಗೆ ಈ ಪ್ರದೇಶದ ಜತೆ ಸಂಪರ್ಕ ತಪ್ಪಿಹೋಗುತ್ತದೆ. ಹೀಗಾಗಿ, ಚೀನಿ ಸಲಹೆಯ ಪರಿಣಾಮವಾಗಿ ಭೌಗೋಳಿಕವಾಗಿ ಭಾರತದಿಂದ ಪ್ರತ್ಯೇಕವಾದ ಅಕ್ಸಾಯ್ ಚಿನ್ ಚೀನಾಕ್ಕೂ, ಚೀನಾದಿಂದ ಪ್ರತ್ಯೇಕವಾದ ಅರುಣಾಚಲ ಪ್ರದೇಶ ಭಾರತಕ್ಕೂ ದೊರಕುತ್ತಿತ್ತು ಮತ್ತು ಸಮಸ್ಯೆ ಪರಿಹಾರವಾಗುತ್ತಿತ್ತು. ಆದರೆ ನೆಹರೂ ಸರಕಾರ ಅದನ್ನು ತಿರಸ್ಕರಿಸಿ ಎರಡೂ ಪ್ರದೇಶಗಳು ಭಾರತಕ್ಕೆ ಸೇರಬೇಕು ಎಂದು ಪಟ್ಟು ಹಿಡಿಯಿತು. ಇದರ ಪರಿಣಾಮ- 1962ರ ಯುದ್ಧ, ಸೋಲು, ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಮಾನ. ನಂತರದ ಐದೂವರೆ ದಶಕಗಳಲ್ಲಿ ಈ ಸಮಸ್ಯೆ ಅದೆಷ್ಟು ಜಟಿಲವಾಗಿ ಬೆಳೆದಿದೆಯೆಂದರೆ ಇದನ್ನು ಪರಿಹರಿಸಲು ಯಾವ ಸರ್ಕಾರಕ್ಕೂ ಸಾಧ್ಯವಾಗಿಲ್ಲ.

ಗೊಂದಲಗಳ ಕಾಲ: ನೆಹರೂ ನೀತಿಗಳು ನಂತರದ ಸರ್ಕಾರಗಳನ್ನು ಅದೆಷ್ಟರ ಮಟ್ಟಿಗೆ ತಮ್ಮ ಬಂಧಿಗಳನ್ನಾಗಿಸಿದವೆಂದರೆ ಅವುಗಳಿಂದ ಹೊರಬರಲು ಅವು ಮಾಡಿದ್ದೆಲ್ಲ ಅರೆಬರೆ ಪ್ರಯತ್ನಗಳಂತೆ ಅಂದರೆ ಆ ಸರ್ಕಾರಗಳು ಸಮಸ್ಯೆಗಳ ಪರಿಹಾರ ಕುರಿತಂತೆ ಗೊಂದಲದಲ್ಲಿ ಮುಳುಗಿಹೋಗಿರುವಂತೆ ಕಾಣುತ್ತವೆ. ಕಾಶ್ಮೀರದ ಮೇಲೆ ದುರಾಕ್ರಮಣವೆಸಗಿದ ಪಾಕಿಸ್ತಾನಕ್ಕೆ ಪಾಠ ಕಲಿಸಲು ಲಾಲ್ ಬಹಾದುರ್ ಶಾಸ್ತ್ರಿಯವರು ಲಾಹೋರ್ ಮೇಲೆ ಆಕ್ರಮಣವೆಸಗಿ ವೈರಿಯ ಕೈಗಳನ್ನು ಕಟ್ಟಿಹಾಕಿದರೇನೋ ನಿಜ. ಆದರೆ ಯುದ್ಧದಲ್ಲಿ ಸಾಧಿಸಿದ ಯಶಸ್ಸನ್ನು ತಾಷ್ಕೆಂಟ್ ಸಂಧಾನದಲ್ಲಿ ಬಲಿಗೊಟ್ಟ ಶಾಸ್ತ್ರಿಯವರು ಪಾಕ್​ಗೆ ಸೂಕ್ತ ಪಾಠ ಕಲಿಸುವಲ್ಲಿ ವಿಫಲವಾದರು. ನಂತರ, ಇಂದಿರಾ ಗಾಂಧಿ ಪಾಕಿಸ್ತಾನವನ್ನು ಯುದ್ಧದಲ್ಲಿ ನಿರ್ಣಾಯಕವಾಗಿ ಸೋಲಿಸಿ ಪೂರ್ವ ಪಾಕಿಸ್ತಾನವನ್ನು ವಿಮೋಚನೆಗೊಳಿಸಿದರೇನೋ ನಿಜ. ಆದರೆ, ಉಳಿದ ಪಶ್ಚಿಮ ಪಾಕಿಸ್ತಾನ ನಮ್ಮ ವಿರುದ್ಧ ಪಂಜಾಬ್, ಕಾಶ್ಮೀರಗಳಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸಿ ನಮಗೆ ಮತ್ತಷ್ಟು ದೊಡ್ಡ ಹಾಗೂ ನಿರಂತರ ಕಂಟಕಗಳನ್ನು ಒಡ್ಡುವ ಮಟ್ಟಕ್ಕೆ ಬೆಳೆಯುವುದನ್ನು ತಡೆಯುವುದರಲ್ಲಿ ವಿಫಲವಾದರು.

ಅಣ್ವಸ್ತ್ರಗಳ ವಿಷಯಕ್ಕೆ ಬಂದರೆ, 1974ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಇಂದಿರಾ ಅದನ್ನು ಜಗತ್ತಿಗೆ ಧೈರ್ಯದಿಂದ ಸಾರುವ ದಿಟ್ಟತನ ತೋರಲು ಹಿಂಜರಿದು ನಮ್ಮದು ‘ಶಾಂತಿಯುತ ಅಣ್ವಸ್ತ್ರ ಪರೀಕ್ಷೆ‘ ಎಂದರು. ಕೊನೆಗೂ, ತಾನೊಂದು ಅಣ್ವಸ್ತ್ರ ರಾಷ್ಟ್ರ ಎಂದು ಯಾವ ಹಿಂಜರಿಕೆಯೂ, ದ್ವಂದ್ವವೂ ಇಲ್ಲದೇ ಜಗತ್ತಿಗೆ ಸಾರುವ ಧೈರ್ಯವನ್ನು ಭಾರತ ತೋರಿದ್ದು ಇಪ್ಪತ್ತನಾಲ್ಕು ವರ್ಷಗಳ ನಂತರ, ವಾಜಪೇಯಿಯವರ ಕಾಲದಲ್ಲಿ. ಇಂದಿರಾರ ಮತ್ತೊಂದು ವೈಫಲ್ಯವೆಂದರೆ ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರವಾಗಲು ಅವಕಾಶವಿತ್ತು ಆ ದೇಶದ ವಿರುದ್ಧ ನಾವು ಸಾಧಿಸಿದ್ದ ಮೇಲುಗೈ ಅರ್ಥಹೀನವಾಗುವಂತೆ ಮಾಡಿದ್ದು. ಪಾಕಿಸ್ತಾನವಿರಲಿ, ಚೀನಾವಿರಲಿ, ಆ ದೇಶಗಳಿಗೆ ಸಂಬಂಧಿಸಿದಂತೆ ನೆಹರೂ ಹುಟ್ಟುಹಾಕಿದ ನೀತಿಗಳಿಂದ ಹೊರಬರಲಾಗದ ಭಾರತದ ಎಲ್ಲ ಸರ್ಕಾರಗಳೂ ಆ ವಿಷಯಗಳಲ್ಲಿ ಸ್ಪಷ್ಟ ಹಾಗೂ ನಿರ್ಣಾಯಕ ನಿಲುವುಗಳನ್ನು ತೆಗೆದುಕೊಳ್ಳುವುದರಲ್ಲಿ ವಿಫಲವಾಗಿವೆ.

ಸ್ಪಷ್ಟತೆಯ ಕಾಲ: 2013ರಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವಿದೇಶನೀತಿಗಳಿಗೆ ಸಂಬಂಧಿಸಿದಂತೆ ಭಾರತ ಗೊಂದಲಮಯ ಸ್ಥಿತಿಯಿಂದ ಹೊರಬರಲು ಸ್ಪಷ್ಟ ಹೆಜ್ಜೆಗಳನ್ನಿಡುತ್ತಿರುವಂತೆ ಕಾಣುತ್ತಿದೆ. ಅಣ್ವಸ್ತ್ರಗಳಿಂದಾಗಿ ಪಾಕಿಸ್ತಾನ ಗಳಿಸಿಕೊಂಡಿರುವ ಶಕ್ತಿ ಸಮಾನತೆಯನ್ನು ನಗಣ್ಯಗೊಳಿಸಲು ಹಾಗೂ ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನದ ಕೈಗಳನ್ನು ಪರೋಕ್ಷವಾಗಿ ಕಟ್ಟಿಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸುವ ಪ್ರಯತ್ನಗಳು ಗಮನಾರ್ಹ ಫಲ ನೀಡಿವೆ. ದಕ್ಷಿಣ ಏಷಿಯಾದಲ್ಲಿ ಪಾಕಿಸ್ತಾನ ಈಗಾಗಲೇ ಏಕಾಂಗಿಯಾಗಿರುವುದಲ್ಲದೇ, ವಿಶ್ವದ ಪ್ರಮುಖ ದೇಶಗಳೂ ಅದರಿಂದ ಅಚ್ಚರಿ ಹುಟ್ಟಿಸುವ ವೇಗದಲ್ಲಿ ದೂರಾಗುತ್ತಿವೆ. ಚೀನಾದ ಬಗ್ಗೆ ಹೇಳುವುದಾದರೆ, ಸೇನಾ ಹಾಗೂ ಸಾಮರಿಕವಾಗಿ ಆ ದೇಶ ಹೊಂದಿರುವ ಮೇಲುಗೈಯನ್ನು ಅರ್ಥಹೀನಗೊಳಿಸಲು ಮೋದಿ ಅಮೆರಿಕಾ, ಜಪಾನ್, ವಿಯೆಟ್ನಾಂ ಹಾಗೂ ಆಸ್ಟ್ರೇಲಿಯಾಗಳ ಜತೆ ಸಾಮರಿಕ ಸಹಯೋಗ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೇ, ಮೇಕ್ ಇನ್ ಇಂಡಿಯಾ ಕಾರ್ಯಯೋಜನೆಗಳ ಮೂಲಕ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಭಾರತವನ್ನು ಮುಂಚೂಣಿಗೆ ತಂದು ಆ ಕ್ಷೇತ್ರದಲ್ಲಿ ಚೀನಾದ ಮೇಲುಗೈಯನ್ನು ಕೊನೆಗೊಳಿಸಿದ್ದಾರೆ. ಚೀನಾವನ್ನು ಆರ್ಥಿಕವಾಗಿ ಮಣಿಸದೇ ರಾಜತಾಂತ್ರಿಕವಾಗಿ ಹಾಗೂ ಅಗತ್ಯ ಬಿದ್ದರೆ ಸಮರಾಂಗಣದಲ್ಲಿ ಮಣಿಸುವುದು ಅಸಾಧ್ಯ ಎಂಬ ಸತ್ಯವನ್ನು ಅವರು ಅರಿತಂತೆ ಕಾಣುತ್ತಿದೆ.

ಒಟ್ಟಿನಲ್ಲಿ ಅಮೆರಿಕಾ ಮತ್ತದರ ಸಾಮರಿಕ ಸಹಯೋಗಿಗಳ ಜತೆ ಕೈಗೂಡಿಸುವ, ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಹಾಗೂ ಚೀನಾವನ್ನು ಆರ್ಥಿಕ-ಸಾಮರಿಕವಾಗಿ ಕುಗ್ಗಿಸುವ ಮೋದಿಯವರ ಪ್ರಯತ್ನಗಳು ನೆಹರೂ ಸೃಷ್ಟಿಸಿದ ಬಂಧನಗಳಿಂದ ವಿದೇಶನೀತಿಗಳನ್ನು ಮುಕ್ತಗೊಳಿಸುವ ಸ್ಪಷ್ಟ ಪ್ರಯತ್ನ ಗಳಾಗಿವೆ. ಈ ಪ್ರಯತ್ನಗಳನ್ನು ಶ್ಲಾಘಿಸುತ್ತಲೇ ಅವುಗಳ ಖಚಿತ ಯಶಸ್ಸುಗಳ ಕುರುಹುಗಳಿಗಾಗಿ ಮತ್ತಷ್ಟು ಸಮಯ ಕಾದು ನೋಡುವುದು ವ್ಯಾವಹಾರಿಕ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top