ವಿದೇಶಕ್ಕೆ ಹಾರಿದ ಚಂಬಲ್

ಬೆಂಗಳೂರು: ನಟ ಸತೀಶ್ ‘ನೀನಾಸಂ’ ಅಭಿನಯದ ‘ಚಂಬಲ್’ ಚಿತ್ರ ಫೆ.22ರಂದು ತೆರೆಕಂಡಿತ್ತು. ಭ್ರಷ್ಟ ವ್ಯವಸ್ಥೆಯಲ್ಲಿ ಐಎಎಸ್ ಅಧಿಕಾರಿಯೊಬ್ಬನಿಗೆ ಏನೆಲ್ಲ ಸವಾಲುಗಳು, ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ‘ಚಂಬಲ್’ ಮೂಲಕ ನಿರ್ದೇಶಕ ಜೇಕಬ್ ವರ್ಗೀಸ್ ಹೇಳುವ ಪ್ರಯತ್ನ ಮಾಡಿದ್ದರು. ಸದ್ಯ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾವೀಗ ವಿದೇಶಕ್ಕೆ ಹಾರುವ ತಯಾರಿಯಲ್ಲಿದೆ. ಮಾ.8ರಂದು ಅಮೆರಿಕದ ವಿವಿಧ ಕಡೆಗಳಲ್ಲಿ ಪ್ರದರ್ಶನ ಆರಂಭಿಸಲಿದೆ. ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಬದುಕನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂಬ ಚರ್ಚೆ ಆರಂಭವಾಗಿತ್ತು. ಚಿತ್ರದ ಕಥಾನಾಯಕನ ಪಾತ್ರಕ್ಕೂ ಡಿ.ಕೆ. ರವಿ ವ್ಯಕ್ತಿತ್ವಕ್ಕೂ ಹೋಲಿಕೆಯಿದೆ ಎಂಬುದು ಸಿನಿಮಾ ತೆರೆಕಂಡ ಮೇಲೆ ಸ್ಟಷ್ಟವಾಗಿತ್ತು. ಆದರೆ, ಚಿತ್ರತಂಡ ಅಧಿಕೃತವಾಗಿ ಎಲ್ಲಿಯೂ ಆ ಬಗ್ಗೆ ಹೇಳಿಕೊಂಡಿಲ್ಲ. ‘ಸವಾರಿ’, ‘ಪೃಥ್ವಿ’ಯಂತಹ ಸಿನಿಮಾ ನಿರ್ದೇಶನ ಮಾಡಿದ್ದ ಜೇಕಬ್, ಬಹಳ ದಿನಗಳ ನಂತರ ‘ಚಂಬಲ್’ ಮೂಲಕ ಮರಳಿದ್ದಾರೆ. ಪೋಷಕ ಪಾತ್ರಗಳಲ್ಲಿ ಕಿಶೋರ್, ಅಚ್ಯುತ್​ಕುಮಾರ್, ರೋಜರ್ ನಾರಾಯಣ್, ಪವನ್​ಕುಮಾರ್, ಮಹಾಂತೇಶ್ ರಾಮದುರ್ಗ ಬಣ್ಣ ಹಚ್ಚಿದ್ದಾರೆ. ಸತೀಶ್​ಗೆ ಸೋನು ಗೌಡ ನಾಯಕಿಯಾಗಿದ್ದಾರೆ.