ಮಾನವೀಯ ಮೌಲ್ಯಗಳುಳ್ಳ ಜನರನ್ನು ಸೇರಿಸುವ ವೇದಿಕೆಯೇ ಹಿಂದು ಆಧ್ಯಾತ್ಮಿಕ ಸೇವಾ ಮೇಳ | ಡಾ. ಕೆ. ಕಸ್ತೂರಿರಂಗನ್ ಅಭಿಮತ ಹಿಂದು ಆಧ್ಯಾತ್ಮಿಕ ಸಂಸ್ಥೆಗಳು ನಡೆಸುತ್ತಿರುವ ಸೇವಾ ಕಾರ್ಯಗಳನ್ನು ಬಿಂಬಿಸಲು ಬೆಂಗಳೂರಿನಲ್ಲಿ ಎರಡನೇ ವರ್ಷದ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ ಇಂದಿನಿಂದ(ಡಿ.13) ಐದು ದಿನಗಳ ಕಾಲ ಬಸವನ ಗುಡಿ
ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಮೇಳದಲ್ಲಿ 200ಕ್ಕೂ ಹೆಚ್ಚು ಸೇವಾ, ಶೈಕ್ಷಣಿಕ, ಆಧ್ಯಾತ್ಮಿಕ ಸಂಸ್ಥೆಗಳು ಭಾಗವಹಿಸಲಿವೆ. 3 ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ. ಮೇಳದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಜಿ ಅಧ್ಯಕ್ಷ ಡಾ. ಕೆ.ಕಸ್ತೂರಿ ರಂಗನ್ ಅವರು ಅಧ್ಯಾತ್ಮ, ವಿಜ್ಞಾನ ಸೇರಿ ಅನೇಕ ವಿಚಾರಗಳ ಕುರಿತು ವಿಜಯವಾಣಿಗೆ ಸಂದರ್ಶನ ನೀಡಿದ್ದು ಅದರ ವಿವರ ಇಲ್ಲಿದೆ.
ಸುಷ್ಮಾ ಚಕ್ರೆ ಬೆಂಗಳೂರು
- ವಿಜ್ಞಾನ ಮತ್ತು ಆಧ್ಯಾತ್ಮಿಕ ಒಂದಕ್ಕೊಂದು ಪೂರಕ ಎಂದು ಅನಿಸುತ್ತದೆಯೇ?
ವಿಜ್ಞಾನದ ಜತೆಗೆ ಆಧ್ಯಾತ್ಮಿಕವೂ ಮುಖ್ಯವಾಗುತ್ತದೆ. ಅಧ್ಯಾತ್ಮ ಕೆಲವೊಮ್ಮೆ ಘಟನೆಗಳು ಸಂಭವಿಸುವುದಕ್ಕೂ ಮೊದಲೇ ಆ ಬಗ್ಗೆ ಸುಳಿವು ಕೊಡುತ್ತದೆ. ವಿಜ್ಞಾನಕ್ಕೆ ಹೋಲಿಸಿ ನೋಡಿದರೆ ಮಾನವನ ಅಸ್ತಿತ್ವದಲ್ಲಿ ಆಧ್ಯಾತ್ಮಿಕವೇ ಮೂಲಭೂತ ಎನಿಸುತ್ತದೆ. ಆದರೆ, ಇತ್ತೀಚೆಗೆ ಶೇ.4 ನಿಜವಾದ ಅಧ್ಯಾತ್ಮ ಎಂದು ಗುರುತಿಸುವ ಪರಿಸ್ಥಿತಿ ಇದೆ. ಉಳಿದ ಶೇ.96 ಬ್ಲಾಕ್ವ್ಯಾಜಿಕ್ನಂತಹ ಕ್ಷುದ್ರ ಶಕ್ತಿಯ ಸುತ್ತ ಸುತ್ತುತ್ತಿದೆ ಎಂಬುದನ್ನು ಮರೆಯಬಾರದು.
- ಹಿಂದು ಆಧ್ಯಾತ್ಮಿಕ ಸೇವಾ ಮೇಳದ ಬಗ್ಗೆ ಏನನಿಸುತ್ತದೆ?
ಎಲ್ಲ ರೀತಿಯ ಮಾನವೀಯ ಮೌಲ್ಯಗಳುಳ್ಳ ಜನರನ್ನು ಒಂದೆಡೆ ಸೇರಿಸುವ ವೇದಿಕೆಯಾಗಿ ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳವನ್ನು ಪರಿಗಣಿಸಬಹುದು. ಇದು ಯಾವುದೋ ಒಂದು ಧರ್ಮಕ್ಕೆ ಸೀಮಿತವಲ್ಲ.
- ಆಧ್ಯಾತ್ಮಿಕವೂ ಒಂದು ವಿಜ್ಞಾನ ಎಂಬುದನ್ನು ನಂಬುತ್ತೀರಾ?
ಭ ಯಮ ಯುಧಿಷ್ಟಿರನ ಬಳಿ ಯಾವ ವಸ್ತು ಅತ್ಯಂತ ವೇಗವಾಗಿ ಚಲಿಸುತ್ತದೆ? ಎಂದು ಕೇಳಿದಾಗ ಆತ ‘ಮನಸ್ಸು’ ಎಂದು ಹೇಳುತ್ತಾನೆ. ವೈಜ್ಞಾನಿಕವಾಗಿ ಹೇಳುವುದಾದರೆ ಅದಕ್ಕೆ ಉತ್ತರ ‘ಬೆಳಕು’. ಆದರೆ, ಅಧ್ಯಾತ್ಮದ ನೆಲೆಯಲ್ಲಿ ನೋಡುವಾಗ ಬೆಳಕಿಗಿಂತ ವೇಗವಾಗಿ ಮನಸ್ಸು ಚಲಿಸಬಲ್ಲದು. ಈ ರೀತಿ ವಿಜ್ಞಾನ ಮತು ಅಧ್ಯಾತ್ಮದ ನಡುವೆ ಸ್ಪರ್ಧೆ, ತಕರಾರುಗಳು ಇದ್ದೇ ಇದೆ.
- ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಆಧ್ಯಾತ್ಮಿಕವಾಗಿ ಯಾವುದಾದರೂ ಪರಿಣಾಮ ಬೀರಿದ ಸಂದರ್ಭ ಇದೆಯಾ?
ಅದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಬಾಹ್ಯಾಕಾಶದಲ್ಲಿ ಕೆಲಸ ಮಾಡುವಾಗಲೂ ಹಲವು ವಿಜ್ಞಾನಿಗಳು ದೇವರ ಮೇಲೆ ಭಾರ ಹಾಕಿಯೇ ಕೆಲಸ ಮಾಡುತ್ತಾರೆ. ದೇವರಿದ್ದಾನೆ ಎಂಬ ನಂಬಿಕೆ ನಮ್ಮೊಳಗಿನ ಆತ್ಮವಿಶ್ವಾಸಕ್ಕೆ ಇನ್ನಷ್ಟು ಪುಷ್ಠಿ ನೀಡುತ್ತದೆ. ಬಾಹ್ಯಾಕಾಶದಲ್ಲಿದ್ದಾಗ ನಾವೆಷ್ಟೇ ಅಂಕಿ-ಅಂಶಗಳ ವಿಶ್ಲೇಷಣೆ ಮಾಡಿ ಪ್ರಯೋಗಕ್ಕೆ ಮುಂದಾದರೂ ಅದರಾಚೆ ಒಂದು ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತೇವೆ.
ಮೇಳ ಆರಂಭ ಇಂದು
ಮಧ್ಯಾಹ್ನ 2ಕ್ಕೆ ಬಸವಣ್ಣನ ದೇವಸ್ಥಾನದಿಂದ ನ್ಯಾಷನಲ್ ಸ್ಕೂಲ್ ಮೈದಾನದವರೆಗೆ ಶೋಭಾಯಾತ್ರೆ ನಡೆಯಲಿದೆ. ರಾಮಕೃಷ್ಣ ಆಶ್ರಮದ ಶ್ರೀ ಭಗವದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶೋಭಾಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಸಂಶೋಧಕ ಡಾ. ಚಿದಾನಂದಮೂರ್ತಿ, ಸಾಹಿತಿ ಡಾ. ದೊಡ್ಡರಂಗೇಗೌಡ, ನಟ ಅಜಯ್ರಾವ್, ನಿರ್ದೇಶಕ ಶಶಾಂಕ್ ಪಾಲ್ಗೊಳ್ಳುವರು. ಸಂಜೆ 5ಕ್ಕೆ ಮೇಳದ ಉದ್ಘಾಟನೆಯಾಗಲಿದ್ದು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ, ಬೀದರ್ನ ಧಮ್ಮ ದರ್ಶನ ಭೂಮಿಯ ಶ್ರೀ ಭಂತೆ ವರಜ್ಯೋತಿ ಸ್ವಾಮೀಜಿ, ಗುರುದ್ವಾರ ನಾನಕ್ ಝಿರಾ ಸಾಹೇಬ ಮಂದಿರದ ಗ್ಯಾನಿ ದರ್ಬಾರ್ಸಿಂಗ್ ಉಪಸ್ಥಿತರಿರುವರು. ಇಸ್ರೋ ಮಾಜಿ ಅಧ್ಯಕ್ಷ ಡಾ. ಕಸ್ತೂರಿ ರಂಗನ್ ಅಧ್ಯಕ್ಷತೆ ವಹಿಸುವರು. ಸಂಜೆ 7ಕ್ಕೆ ಜಗದೀಶ ಜಾಲ ಸಂಯೋಜನೆಯಲ್ಲಿ ಜಾನಪದ ವೈಭವ ಇರಲಿದೆ.