ವಿಜೃಂಭಣೆಯಿಂದ ನೆರವೇರಿದ ಮಲೇಶಂಕರ ತೇರು

ಶಿವಮೊಗ್ಗ: ತಾಲೂಕಿನ ಸಿರಿಗೆರೆ ಸಮೀಪದ ಶ್ರೀ ಮಲೇಶಂಕರ ದೇವರ ಮಹಾರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಶಿವಮೊಗ್ಗ ನಗರ, ಕುಂಸಿ, ಹಾರನಹಳ್ಳಿ ಜಿಪಂ ಹಾಗೂ ಸಿರಿಗೆರೆ, ತಮ್ಮಡಿಹಳ್ಳಿ, ಆಯನೂರು, ಮಂಡಗಟ್ಟ, ಪುರದಾಳು ಗ್ರಾಪಂ ವ್ಯಾಪ್ತಿ ಸೇರಿ ದಾವಣಗೆರೆ ಒಳಗೊಂಡಂತೆ ಹೊರ ಜಿಲ್ಲೆಗಳ ಭಕ್ತರು ಪಾಲ್ಗೊಳ್ಳುವ ಮೂಲಕ ರಥೋತ್ಸವಕ್ಕೆ ಮೆರಗು ನೀಡಿದರು.

ಆನಂದಪುರಂನ ಶ್ರೀಧರ ಭಟ್ಟ ಅವರ ನೇತೃತ್ವದಲ್ಲಿ ಬೆಳಗ್ಗೆ ಕಲಾತತ್ವ ಹವನ ನಡೆದರೆ, ಮಧ್ಯಾಹ್ನ ಕರ್ಕಾಟಕ ಲಗ್ನದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು. ತಾಲೂಕಿನ ಹುಣಸೋಡು ಗ್ರಾಮದ ರಂಗನಾಥಸ್ವಾಮಿ ಮತ್ತು ಆಂಜನೇಯ ಸ್ವಾಮಿಯನ್ನು ಟ್ರ್ಯಾಕ್ಟರ್ ಮೂಲಕ ಕರೆತಂದ ಬಳಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಭಕ್ತರು ಹೂವು, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ ಮಾಡಿದರು.

ಬಿಸಿಲಿನ ತಾಪವನ್ನು ಲೆಕ್ಕಿಸದೇ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ಬೈಕ್, ಎತ್ತಿನಗಾಡಿ, ಟಿಲ್ಲರ್, ಟ್ರ್ಯಾಕ್ಟರ್, ಲಾರಿ, ಕಾರು, ಬಸ್​ಗಳಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ತಹಸೀಲ್ದಾರ್ ಗಿರೀಶ್ ಸೇರಿ ಹಲವು ತಾಲೂಕು ಮಟ್ಟದ ಅಧಿಕಾರಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಭದ್ರತೆ ಕಲ್ಪಿಸಲಾಗಿತ್ತು.

ಬಿಸಿಲು ಹೆಚ್ಚಿದ್ದರಿಂದ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ರಥೋತ್ಸವ ಬಳಿಕ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಯುವಕ-ಯುವತಿಯರು ರಥದ ಮುಂದೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಅದ್ಧೂರಿ ಹೂವಿನ ರಥೋತ್ಸವ:ಏ.30ರಂದು ಬಲಿ ಚೂಣೋತ್ಸವ, ಅವಭೃತ ಸ್ನಾನ, ಸಂಧಾನ, ಪೂರ್ಣಾಹುತಿ ನೆರವೇರಲಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ಆನಂದಪುರಂನ ಶ್ರೀಧರ ಭಟ್ಟರು ನಡೆಸಿಕೊಡುವರು. ಅದಕ್ಕೂ ಮುನ್ನ ಭಾನುವಾರ ರಾತ್ರಿಯೇ ಹೂವಿನ ರಥೋತ್ಸವ ಅದ್ಧೂರಿಯಾಗಿ ನಡೆದರೆ, ಬೆಳಗ್ಗೆ ಶ್ರೀ ಗಣಪತಿ ಪೂಜೆ, ಪುಣ್ಯಾಹ, ನಂದಿಧ್ವಜಾರೋಹಣ, ರಾತ್ರಿ ಯಾಗಶಾಲಾ ಪ್ರವೇಶ, ಅಂಕುರಾರ್ಪಣೆ, ಕಂಕಣ ಬಂಧನ, ಬೇರಿತಾಡನ, ಬಲಿ ಪ್ರಾರಂಭೋತ್ಸವ ನೆರವೇರಿತು.