ವಿಜಯ ಮಾಲೆಯಲ್ಲಿ ಕೋಲಾರದ ಕಮಲವಿರಲಿ

ಶ್ರೀನಿವಾಸಪುರ: ಒಬ್ಬ ವ್ಯಕ್ತಿ 7 ಬಾರಿ ಸತತ ಸಂಸದನಾದರೆ ಆ ಕ್ಷೇತ್ರ ಬಂಗಾರವನ್ನಾಗಿಸುವಷ್ಟು ಅಭಿವೃದ್ಧಿಗೊಳಿಸಬಹುದು. ಆದರೆ, ಈ ಕ್ಷೇತ್ರದ ಜನರಿಗೆ ಕುಡಿಯುವ ನೀರನ್ನೂ ನೀಡಲಾಗದಂತಹ ಪರಿಸ್ಥಿತಿಯಲ್ಲಿರುವುದು ಶೋಚನೀಯ ಎಂದು ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ರಾಮಕೃಷ್ಣ ಬಡಾವಣೆಯಲ್ಲಿ ಶನಿವಾರ ಟೀಮ್ ಮೋದಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ, 2019ರ ಚುನಾವಣೆಯಲ್ಲಿ ಭಾರತ ಮಾತೆಯ ಕೊರಳಿಗೆ ಹಾಕುವ ವಿಜಯ ಕಮಲದ ಮಾಲೆಯಲ್ಲಿ ಕೋಲಾರದ ಕಮಲವೂ ಇರುತ್ತದೆ ಎಂಬುದನ್ನು ಈ ಕ್ಷೇತ್ರದ ಜನರು ತೋರಿಸಬೇಕಿದೆ. ಕಾಂಗ್ರೆಸ್ ಸರ್ಕಾರದ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡ ಜೆಡಿಎಸ್ ರಾಜ್ಯದಲ್ಲಿ ದಕ್ಕಿರುವುದು ಕೇವಲ 7 ಸ್ಥಾನಗಳು ಮಾತ್ರ. ಆದರೆ ಅವರ ಲೆಕ್ಕಾಚಾರ ಹೇಗಿದೆ ಎಂದರೆ 37 ಸ್ಥಾನ ಗಳಿಸಿ ರಾಜ್ಯದ ಮುಖ್ಯಮಂತ್ರಿಯಾಗಬಹುದಾದರೆ 7 ಸ್ಥಾನ ಗಳಿಸಿ ದೇಶದ ಪ್ರಧಾನಮಂತ್ರಿ ಯಾಕೆ ಆಗಬಾರದು ಎಂದು ಹಗಲಗನಸು ಕಾಣುತ್ತಿದ್ದಾರೆ ಎಂದರು.

ಶ್ರೇಷ್ಠ ಭಾರತ ನಿರ್ಮಾಣ ಮಾಡಲು 5 ವರ್ಷಗಳಿಂದ ದುಡಿಯುತ್ತಿರುವ ನರೇಂದ್ರಮೋದಿ ಈ ದೇಶದ ಪ್ರಧಾನ ಸೇವಕ ಎಂದು ಹೇಳಿಕೊಳ್ಳುತ್ತಿರುವಾಗ ವಿರೋಧ ಪಕ್ಷದವರು ಕಾವಲುಗಾರ ಕಳ್ಳ ಎಂದು ಕರೆಯುತ್ತಾರಲ್ಲ ಅವರಿಗೆ ನಾಚಿಕೆಯಾಗಬೇಕು. 7 ದಶಕ ಭಾರತದಲ್ಲಿ ಆಡಳಿತ ನಡೆಸಿ ಕಾಂಗ್ರೆಸ್ ದೇಶದ ಸಂಪತ್ತು ಲೂಟಿ ಮಾಡಿದೆ. ಮೋದಿಯನ್ನು ಕಳ್ಳ ಎಂದು ಬಿಂಬಿಸಲು ಹೊರಟವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಎಂ.ವೇಮಣ್ಣ ಇದ್ದರು.

ರಾಜ್ಯದ ಜನರು ಸಾಮರಸ್ಯದಿಂದ ಬದಕುತ್ತಿರುವಾಗ ಮುಸಲ್ಮಾನರಿಗೆ ಬೇಡವಾದ ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ವಿರೋಧದ ನಡುವೆಯೂ ಹಠಕ್ಕೆ ಬಿದ್ದು ಮಾಡಿದರು. ಆದರೆ ದೇಶದ ಸ್ವಾಭಿಮಾನ ಹಾಗೂ ಸಾಂಸ್ಕೃತಿಕ ಪರಂಪರೆಯ ಗತವೈಭವವನ್ನು ಸಾರಿದ ವಿಜಯನಗರ ಅರಸರ ಹಂಪಿ ಉತ್ಸವಕ್ಕೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿಕೆ ನೀಡಿದವರಿಗೆ ಜನರೇ ಬುದ್ಧಿ ಕಲಿಸಬೇಕು.

| ಚಕ್ರವರ್ತಿ ಸೂಲಿಬೆಲೆ, ಟೀಮ್ ಮೋದಿ ಸಂಸ್ಥಾಪಕ