ವಿಕೋಪ ನಿರ್ವಹಣೆ ತರಬೇತಿ

ಬೀದರ್: ವಿಕೋಪ ನಿರ್ವಹಣೆ ಬಗ್ಗೆ ಜಿಲ್ಲೆಯ ವಿವಿಧ ಇಲಾಖೆಗಳ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ನಗರದ ನೌಬಾದ್ ಹತ್ತಿರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶುಕ್ರವಾರ ತರಬೇತಿ ನಡೆಯಿತು.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತದಿಂದ ಕಾರ್ಯಕ್ರಮ ನಡೆಯಿತು. ವಿಕೋಪ ನಿರ್ವಹಣೆಯ ವಿವಿಧ ಹಂತಗಳು, ಅಗ್ನಿಶಾಮಕ ಸುರಕ್ಷತೆ ನಿರ್ವಹಣೆ, ತುರ್ತು ಸ್ಥಿತಿಗಳಲ್ಲಿ ಸಾರ್ವಜನಿಕ ಆರೋಗ್ಯ ಯೋಜನೆ, ತೋಟಗಾರಿಕೆ ಮತ್ತು ಕೃಷಿ ವಿಪತ್ತುಗಳ ತಗ್ಗಿಸುವಿಕೆ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.
ಸಹಾಯಕ ಆಯುಕ್ತರಾದ ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಶಂಕರ ವಣಕ್ಯಾಳ ಉದ್ಘಾಟಿಸಿ, ವಿಪತ್ತು ಪ್ರಕರಣಗಳ ನಿರ್ವಹಣೆಗೆ ಮುಂಜಾಗ್ರತಾ ಕ್ರಮ ಅಗತ್ಯ. ಇದಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸಿಕೊಂಡಿರಬೇಕು ಎಂದು ಸಲಹೆ ಮಾಡಿದರು.
ಅಗ್ನಿಶಾಮಕ ಸುರಕ್ಷತೆ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಂ.ಡಿ.ಮುಜಾಮಿಲ್ ಪಟೇಲ್ ಮಾತನಾಡಿ, ಬೆಂಕಿ ನಮ್ಮನ್ನು ಕಿಲ್ ಮಾಡುವ ಮೊದಲೇ ನಾವು ಅದನ್ನು ಕಿಲ್ ಮಾಡಬೇಕು. ವಾತಾವರಣ ಬಿಸಿಯಾಗಿದ್ದಷ್ಟು ಬೆಂಕಿ ಸುತ್ತಮುತ್ತಲೂ ಆವರಿಸುತ್ತ್ತದೆ. ಆದ್ದರಿಂದ ಕೂಡಲೇ ಪಕ್ಕದಲ್ಲಿನ ವಸ್ತುಗಳಿಗೆ, ಕಟ್ಟಡಕ್ಕೆ ಬೆಂಕಿ ಆವರಿಸದಂತೆ ಅಲ್ಲಿನ ವಾತಾವರಣವನ್ನು ಆದಷ್ಟು ಬೇಗನೇ ತಂಪುಗೊಳಿಸಬೇಕು ಎಂದರು.
ಛಾಯಾಚಿತ್ರ, ವಿಡಿಯೋಗಳನ್ನು ತೋರಿಸುವ ಮೂಲಕ ಮತ್ತು ಬೆಂಕಿ ಅವಘಡದ ತುರ್ತು ಪರಿಸ್ಥಿತಿಯಲ್ಲಿ ಬೆಂಕಿ ನಂದಿಸುವ ಸಲಕರಣೆಗಳನ್ನು ಹೇಗೆ ಬಳಸಬೇಕು ಎಂದು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. ಬಸವಕಲ್ಯಾಣ ಎಸಿ ಗ್ಯಾನೇಂದ್ರಕುಮಾರ ಗಂಗವಾರ, ಜಿಪಂ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ನಿರ್ದೇಶಕ ಅಲೇಕ ಲೋಬೋ, ವಿವಿಧ ತಾಲೂಕುಗಳ ತಹಸೀಲ್ದಾರರು, ಅಧಿಕಾರಿಗಳು ಇದ್ದರು. ತರಬೇತಿ ಸಂಸ್ಥೆ ಉಪ ಪ್ರಾಚಾರ್ಯ ಮನೋಹರ ಸ್ವಾಮಿ ಸ್ವಾಗತಿಸಿದರು.

Leave a Reply

Your email address will not be published. Required fields are marked *