Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ವಿಕೃತ ಮನಸ್ಕ ಸೃಜನಶೀಲರಿಗೊಂದು ಕಿವಿಮಾತು

Thursday, 23.11.2017, 3:06 AM       No Comments

ಐತಿಹಾಸಿಕ ಚಿತ್ರಗಳು ಹೇಗಿರಬೇಕು ಎಂಬುದಕ್ಕೆ 1953ರ ‘ಝಾನ್ಸಿ ಕೀ ರಾಣಿ’ ಒಂದು ಅತ್ಯುತ್ತಮ ಉದಾಹರಣೆ. ಮೂಲವಸ್ತುವಿಗೆ ಅಪಚಾರವಾಗದಂತೆ ಐತಿಹಾಸಿಕ ಚಿತ್ರ ನಿರ್ವಿುಸಿದವರಲ್ಲಿ ಬಿ.ಆರ್. ಪಂತುಲು ಅಗ್ರಗಣ್ಯರು. ಅವರ ಚಿತ್ರಗಳು ಇಂದಿಗೂ ಕ್ಲಾಸಿಕ್​ಗಳೆನಿಸಿವೆ. ಐತಿಹಾಸಿಕ/ಜೀವನಚರಿತ್ರೆ ಆಧಾರಿತ ಚಿತ್ರಗಳು ಹೇಗಿರಬೇಕೆಂಬುದಕ್ಕೆ ಮೇಲ್ಪಂಕ್ತಿಯಾಗಿವೆ.

ಭಾರತದಲ್ಲಿ ಶಾಲಾ ವಿದ್ಯಾರ್ಥಿಗಳಿಗೂ ಚಿರಪರಿಚಿತ ವಿಷಯ ‘ರಾಣಿ ಪದ್ಮಿನಿ ಮತ್ತು ಅವಳ ಜೋಹರ್’. ವಿಕೃತಕಾಮಿ ಮುಸ್ಲಿಂ ದೊರೆಗಳು ತಮ್ಮ ಶೀಲಭಂಗ ಮಾಡಲು ಬರುತ್ತಿರುವರೆಂಬ ಸುದ್ದಿ ಕೇಳಿದಾಕ್ಷಣ ರಜಪೂತ ಸ್ತ್ರೀಯರು ಬೇರೆ ದಾರಿ ಇಲ್ಲದಿದ್ದರೆ, ಸಾಮೂಹಿಕವಾಗಿ ಚಿತೆಗೆ ಹಾರಿ ಶೀಲರಕ್ಷಣೆಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದುದೇ ಈ ಜೋಹರ್ ಪದ್ಧತಿ. ಚಿತ್ತೋಡದ ರಾಣಿ ಪದ್ಮಿನಿ ಘಟನೆ ಇದಕ್ಕೆ ಉಜ್ಜ್ವಲ ಉದಾಹರಣೆ. ಅದು ಪಠ್ಯಪುಸ್ತಕಗಳಲ್ಲೂ ಇದ್ದ ವಿಷಯ.

‘ಪದ್ಮಾವತಿ’ ವಿವಾದ: ಈಗ ರಾಣಿ ಪದ್ಮಿನಿ ಪ್ರಸಂಗ ಕುರಿತು ಸಂಜಯ್ ಲೀಲಾ ಬನ್ಸಾಲಿ ‘ಪದ್ಮಾವತಿ’ ಎಂಬ ಅದ್ದೂರಿ ಚಿತ್ರ ನಿರ್ವಿುಸಿ ವಿವಾದದಲ್ಲಿ ಸಿಲುಕಿದ್ದಾರೆ. ಆಕೆಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸುವ ರಜಪೂತರು, ಈ ಚಿತ್ರದಲ್ಲಿ ಪದ್ಮಿನಿಯನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಆರೋಪಿಸಿ ನಿರ್ವಪಕ, ಪದ್ಮಿನಿ ಪಾತ್ರ ನಿರ್ವಹಿಸಿ ಬೇಜವಾಬ್ದಾರಿಯಿಂದ ಮಾತನಾಡಿದ ನಟಿಯ ಮೇಲೆ ಕತ್ತಿ ಝುಳಪಿಸುತ್ತಿದ್ದಾರೆ. ಪದ್ಮಿನಿ ಪಾತ್ರಧಾರಿಯ ನೃತ್ಯಭಂಗಿಗಳು ರಾಣಿ ಪದ್ಮಿನಿಯ ಹೆಸರಿಗೆ ಕಳಂಕ ತರುವಂತಿವೆ ಎಂಬುದೂ ಅವರ ಆರೋಪಗಳಲ್ಲೊಂದು. ಇಂಥ ಬುದ್ಧಿಜೀವಿಗಳು ಈವರೆಗೆ ಭಾರತೀಯ ಶ್ರದ್ಧಾಕೇಂದ್ರಗಳ, ಮಾನಬಿಂದುಗಳ ಕುಚೋದ್ಯಕ್ಕೇ ಕಲಾಮಾಧ್ಯಮವನ್ನು ಬಳಸಿಕೊಂಡಿದ್ದಾರೆ. ಚಿತ್ರಕಾರ ಎಂ.ಎಫ್. ಹುಸೇನ್ ಈ ನಿಟ್ಟಿನಲ್ಲಿ ಕುಪ್ರಸಿದ್ಧ!

ಭಾರತದ ವಿವಿಧ ನಗರಗಳಲ್ಲಿ ಆಕ್ರೋಶಭರಿತ ಪ್ರತಿಭಟನೆಗಳಾಗಿವೆ. ಕ್ಷಾತ್ರತೇಜದ ರಜಪೂತರ ಸ್ವಾಭಿಮಾನದ ಪ್ರಶ್ನೆಯಾಗಿ ಈ ವಿವಾದ ಪರಿವರ್ತಿತವಾಗಿದೆ. ಪರ-ವಿರೋಧ ಅಭಿಪ್ರಾಯಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಪರವಾಗಿ ವಾದಿಸುವ ಬುದ್ಧಿಜೀವಿಗಳು, ಪದ್ಮಿನಿಯದು ಒಂದು ಕಟ್ಟುಕತೆ ಎಂದೂ, ಅದು ಯಾವ ಐತಿಹಾಸಿಕ ದಾಖಲೆಯಲ್ಲೂ ಕಾಣದೆಂದೂ, ಯಾವ ಮುಸ್ಲಿಂ ಇತಿಹಾಸಕಾರನೂ ಪದ್ಮಿನಿಯ ಹೆಸರನ್ನಾಗಲೀ ಅಲ್ಲಾವುದ್ದೀನ್ ಖಿಲ್ಜಿ ಅವಳನ್ನು ಬಯಸಿ ಚಿತ್ತೋಡನ್ನು ಆಕ್ರಮಿಸಿದನೆಂದಾಗಲೀ ಬರೆದಿಲ್ಲವೆಂದೂ ಒಂದೇ ಉಸಿರಿನಲ್ಲಿ ವಾದಿಸುತ್ತ ಅಬ್ಬರಿಸುತ್ತಿದ್ದಾರೆ.

ಇಲ್ಲಿ ಪ್ರಶ್ನೆ- ಇದು ಚರಿತ್ರೆಯೋ ಅಲ್ಲವೋ ಎಂಬುದಲ್ಲ; ಇದು ಭಾರತೀಯರ ನಂಬಿಕೆಗಳನ್ನು ಧೂಳೀಪಟ ಮಾಡುವ ಯತ್ನ ಎಂಬುದು. ಹೀಗಾಗೇ ರಜಪೂತರು ಸಿಡಿದೆದ್ದಿದ್ದಾರೆ. ಇಂಥ ವಿಷಯಗಳನ್ನು ಆಯ್ದುಕೊಂಡು ಚಿತ್ರ ನಿರ್ವಿುಸುವಾಗ ನಿರ್ವಪಕನ ದೃಷ್ಟಿಕೋನ ಹೇಗಿರಬೇಕೆಂಬುದು ಮುಖ್ಯ ಸಂಗತಿ. ಕೋಟ್ಯಂತರ ಜನ ಆರಾಧಿಸುವ ಕಥಾವಸ್ತುವನ್ನಾಗಲಿ ಚಾರಿತ್ರಿಕ ಪಾತ್ರವನ್ನಾಗಲಿ ದೃಶ್ಯಮಾಧ್ಯಮಕ್ಕೆ ಪರಿವರ್ತಿಸುವಾಗ ನಿರ್ವಪಕ ಪ್ರಬುದ್ಧತೆ, ಸಾಮಾಜಿಕ ಕಾಳಜಿಯನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಜನರ ಜೀವನಮೌಲ್ಯ, ಆಚಾರ-ವಿಚಾರಗಳನ್ನೂ ಗೌರವಿಸಬೇಕಾಗುತ್ತದೆ.

ಆದರೆ, ಬಹುಸಂಖ್ಯಾತರ ಚಿಂತನೆ-ನಂಬಿಕೆ-ಆಚರಣೆಗಳ ಕುಚೋದ್ಯವೇ ತಮ್ಮ ಕಲಾಮಾಧ್ಯಮದ ಏಕೈಕ ಹಾಗೂ ಮುಖ್ಯಗುರಿಯೆಂದು ವಿಕ್ಷಿಪ್ತಮನಸ್ಕ ನಿರ್ವಪಕರು, ನಿರ್ದೇಶಕರು, ಲೇಖಕರೂ ಈಚೀಚೆಗೆ ಭಾವಿಸಿರುವುದು ಖೇದಕರ. ಇದೊಂದು ಸಮಾಜವಿರೋಧಿ ಚಿಂತನೆ.

ಅಭಿಪ್ರಾಯ ಸ್ವಾತಂತ್ರ್ಯವೆಂದರೆ ಸ್ವೇಚ್ಛಾವರ್ತನೆಯಲ್ಲ: ಇವರು ಮಾತೆತ್ತಿದರೆ ಅಭಿಪ್ರಾಯ ಸ್ವಾತಂತ್ರ್ಯ, ಅಸಹಿಷ್ಣುತೆ ಮುಂತಾದ ಎಡಪಂಥೀಯ ಪದಪುಂಜಗಳನ್ನು ಬಳಸಿ ವಾದ ಮಂಡಿಸುತ್ತಾರೆ. ಅದಕ್ಕೆ ಕೆಲವು ರಾಜಕೀಯ ಪಕ್ಷಗಳ, ಸಾಂಸ್ಕೃತಿಕ ಸಂಘಟನೆಗಳ ನಂಟು ಹಾಕಿ ರಾಜಕೀಯ ವಿವಾದ ಸೃಷ್ಟಿಸಲು ಯತ್ನಿಸುತ್ತಾರೆ. ತಂತ್ರಜ್ಞಾನದ ಪ್ರಗತಿಯಿಂದಾಗಿ ದಕ್ಕಿರುವ ಅನೇಕ ಸಲಕರಣೆಗಳನ್ನು ಉಪಯೋಗಿಸಿಕೊಂಡು, ಭವ್ಯ ಸೆಟ್ಟುಗಳು, ಅದ್ಭುತ ಚಿತ್ರೀಕರಣ, ತಾರಾಮೌಲ್ಯವಿರುವ ಕಲಾವಿದರ ಹೆಸರುಗಳನ್ನು ಬಳಸಿಕೊಂಡು ತಮ್ಮ ದುರುದ್ದೇಶಭರಿತ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದಾರೆ. ಬಾಲಿವುಡ್ ನಿರ್ವಪಕರಿಗೆ ಕೊಲ್ಲಿ ರಾಷ್ಟ್ರಗಳಿಂದ ಹಣದ ಹೊಳೆಯೇ ಹರಿದುಬರುತ್ತಿದೆ ಎಂಬುದು ರಹಸ್ಯವೇನಲ್ಲ. ಕೊಲ್ಲಿಯ ಹಣ ಹೂಡುವ ದಾವೂದ್ ಇಬ್ರಾಹಿಂ ಸಂತತಿಯ ಮಾಫಿಯಾಗಳ ಮೂಲೋದ್ದೇಶವೇ ಭಾರತೀಯ ಸಂಸ್ಕೃತಿಯನ್ನು ಹಳಿಯುವುದು. ಹಿಂದೂ ಸ್ತ್ರೀಯರ ಪಾತ್ರಗಳನ್ನು ಅಶ್ಲೀಲವಾಗಿ ಚಿತ್ರೀಕರಿಸುವಂತೆ ನಿರ್ವಪಕರಿಗೆ ಈ ಮಾಫಿಯಾ ದೊರೆಗಳು ಕರಾರು ಮಾಡುತ್ತಾರೆಂದು ಇತ್ತೀಚೆಗೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ತಿಳಿಸಿರುವುದನ್ನು ಇಲ್ಲಿ ನೆನೆಯಬಹುದು.

ಈ ‘ಬುದ್ಧಿಜೀವಿ ಬ್ರಾಂಡ್’ ನಿರ್ವಪಕರೂ ಲೇಖಕರೂ ಮಾತೆತ್ತಿದರೆ, ಇದು ಇತಿಹಾಸದಲ್ಲಿಲ್ಲ. ಇದು ಮೊದಲಿಗೆ 1540ರಲ್ಲಿ ಅವಧ್​ನಲ್ಲಿ ನೆಲೆಸಿದ್ದ ಮಾಲಿಕ್ ಮುಹಮ್ಮದ್ ಜಾಯಸಿ ಎಂಬ ಸೂಫಿ ಕವಿಯ ಕಾವ್ಯದಲ್ಲಿದೆಯೆಂದೂ, ಆದ್ದರಿಂದ ಅದು ಫಿಕ್ಷನ್ ಎಂದೂ ಪ್ರತಿಪಾದಿಸುತ್ತಾರೆ. ಹೀಗಾಗಿ ಅದನ್ನು ಇಷ್ಟ ಬಂದಂತೆ ಬಳಸಿಕೊಳ್ಳಬಹುದು ಎಂಬ ವಿತಂಡವಾದ ಹೂಡುತ್ತಾರೆ. ಇವರ ಪ್ರಕಾರ ಮೊಘಲರು, ಬ್ರಿಟಿಷರು ಬರೆದಿದ್ದೇ ಇತಿಹಾಸ. ಇತಿಹಾಸದಲ್ಲಿ ಬಾಯಿಂದ ಬಾಯಿಗೆ ಹರಿದುಬಂದಿರುವ ಘಟನಾವಳಿಗೂ ಪ್ರಾಮುಖ್ಯವಿದೆ. ಕಾವ್ಯ, ಜಾನಪದ ಗೀತೆ, ಲಾವಣಿಗಳಿಗೂ ಸ್ಥಾನವಿದೆ. ಆದ್ದರಿಂದಲೇ ರಾಮಾಯಣ, ಮಹಾಭಾರತದ ಪಾತ್ರಗಳಿಂದ ಹಿಡಿದು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡವೀರರು, ಕೆಂಪೇಗೌಡರು ಜನಮಾನಸದಲ್ಲಿ ಇಂದಿಗೂ ಜೀವಂತವಾಗಿರುವುದು, ಜನರ ಗೌರವಾದರಗಳಿಗೆ ಪಾತ್ರರಾಗಿರುವುದು. ರಾಮಾಯಣ, ಭಾರತಗಳೂ ಇತಿಹಾಸವೇ; ‘ಇತಿ’ ಎಂದರೆ ಹೀಗೆ, ‘ಹಾಸ’ ಎಂದರೆ ಇತ್ತು ಎಂಬ ಅರ್ಥ ಇತಿಹಾಸಕ್ಕಿದೆ. ಇದು ಚರಿತ್ರೆ ಬಗೆಗಿನ ಭಾರತೀಯ ದೃಷ್ಟಿಕೋನ.

ಈ ಹಿನ್ನೆಲೆಯಲ್ಲಿ ರಾಣಿ ಪದ್ಮಿನಿಯೂ ಐತಿಹಾಸಿಕ ವ್ಯಕ್ತಿಯೇ, ಅವಳ ಕತೆಯೂ ಐತಿಹಾಸಿಕವೇ. ಅವಳು ಮೊಘಲ್ ಆಸ್ಥಾನ ಚರಿತ್ರೆಕಾರರ ಪುಸ್ತಕಗಳಲ್ಲಿಲ್ಲದಿರಬಹುದು; ಆದರೆ ನೂರಾರು ವರ್ಷಗಳಿಂದ ಜನರ ಹೃದಯದಲ್ಲಿ ಜೀವಂತವಾಗಿರುವ ಸ್ತ್ರೀರತ್ನ! ಶೀಲಕ್ಕೆ ಕವಡೆಯಷ್ಟೂ ಬೆಲೆ ಕೊಡದ ಬುದ್ಧಿಜೀವಿ ನಿರ್ವಪಕರಿಗೆ, ಲೇಖಕರಿಗೆ ಏನು ಗೊತ್ತು ರಜಪೂತ ಸ್ತ್ರೀಯರ ಜೀವನ ಮೌಲ್ಯಗಳು?

ಈ ಬಗೆಯವರು ಬಹುಸಂಖ್ಯಾತರ ಭಾವನೆಗಳನ್ನಷ್ಟೇ ಅಲ್ಲದೆ ಕ್ರೈಸ್ತ ಮತ್ತು ಮಹಮ್ಮದೀಯ ನಂಬಿಕೆಗಳ ಮೇಲೂ ಪ್ರಹಾರಕ್ಕೆ ಯತ್ನಿಸಿ ತೀವ್ರ ಪ್ರತಿಭಟನೆಗಳನ್ನು ಎದುರಿಸಬೇಕಾಗಿ ಬಂದಿದ್ದನ್ನು ಇತ್ತೀಚಿನ ಘಟನಾವಳಿಗಳಿಂದ ತಿಳಿಯಬಹುದು. ನಿಕೋಸ್ ಕಜಾನ್​ಟ್ಸಕೀ ಎಂಬ ಗ್ರೀಕ್ ನಾಟಕಕಾರ 1986ರಲ್ಲಿ ರಚಿಸಿದ ‘ದಿ ಲಾಸ್ಟ್ ಟೆಂಪ್ಟೇಷನ್ ಆಫ್ ಕ್ರೈಸ್ಟ್’ ಎಂಬ ನಾಟಕ ಆಧರಿಸಿ ಮಲಯಾಳಂನಲ್ಲಿ ಬಂದ ‘ಕ್ರಿಸ್ತು ವಿಂಟೆ ಆರಾಂ ತಿರುಮರಿವು’ ಎಂಬ ನಾಟಕದ ವಿರುದ್ಧ ಕೇರಳದಲ್ಲಿ ಜನ ಭುಗಿಲೆದ್ದಿದ್ದು ಮರೆಯಲಾಗದ ಘಟನೆ. ಡ್ಯಾನಿಷ್ ಪತ್ರಿಕೆಯೊಂದು ಪ್ರವಾದಿ ಮಹಮ್ಮದರನ್ನು ಕುರಿತ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದಾಗ ವಿಶ್ವದ ಮುಸ್ಲಿಂ ಸಮುದಾಯ ಕ್ಷಣಾರ್ಧದಲ್ಲಿ ಹೇಗೆ ಉಗ್ರ ಪ್ರತಿಕ್ರಿಯೆ ತೋರಿತು ಎಂಬುದೂ ನೆನಪಿಡಬೇಕಾದ್ದೇ.

ಒಟ್ಟಿನಲ್ಲಿ ಯಾವುದೇ ಸಮುದಾಯದ ಶ್ರದ್ಧೆ, ನಂಬಿಕೆಗಳನ್ನು ಕುಚೇಷ್ಟೆ ಮಾಡುವ ಕುಟಿಲಬುದ್ಧಿಯನ್ನು ಬಿಡಬೇಕೆಂಬ ಪಾಠವನ್ನು ಈ ವಿಕ್ಷಿಪ್ತ ಸೃಜನಶೀಲರು ಮೊದಲು ಕಲಿಯಬೇಕಿದೆ. ಜನರ ಮನಸ್ಸುಗಳಿಗೆ ನೋವುಂಟುಮಾಡುವ ಹಕ್ಕು ಯಾವ ಸೃಜನಶೀಲನಿಗೂ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾದ್ದು ಸಮಾಜದ ಕರ್ತವ್ಯವೇ. ರಜಪೂತರು ಈಗ ಮಾಡ ಹೊರಟಿರುವುದು ಅದನ್ನೇ…

ಐತಿಹಾಸಿಕ ಚಿತ್ರಗಳೆಂದರೆ ಹೀಗಿರಬೇಕು: ಐತಿಹಾಸಿಕ ಚಿತ್ರಗಳು ಹೇಗಿರಬೇಕು ಎಂಬುದಕ್ಕೆ ಸ್ವಾತಂತ್ರಾ್ಯನಂತರ ಬಂದ ನಮ್ಮ ಕೆಲವು ಚಿತ್ರಗಳನ್ನು ನೆನಪಿಸಿಕೊಳ್ಳಬೇಕು. 1953ರ ‘ಝಾನ್ಸಿ ಕೀ ರಾಣಿ’ ಇಂದಿಗೂ ಒಂದು ಅತ್ಯುತ್ತಮ ಐತಿಹಾಸಿಕ ಚಿತ್ರ. ನಿರ್ವಪಕ, ನಿರ್ದೇಶಕ, ನಟ ಸೊಹ್ರಾಬ್ ಮೋದಿ ಅಂದಿಗೇ ಅದ್ದೂರಿಯಾಗಿ ನಿರ್ವಿುಸಿದ ಈ ಚಿತ್ರ ಇತಿಹಾಸದ ಘಟನಾವಳಿಗಳಿಗೆ ಅನ್ಯಾಯವೆಸಗದಂತೆ ಲಕ್ಷ್ಮೀಬಾಯಿಯ ಕತೆಯನ್ನು ಪ್ರಸ್ತುತಪಡಿಸಿತು, ಗಲ್ಲಾಪೆಟ್ಟಿಗೆಯಲ್ಲೂ ಗೆದ್ದಿತು. ಆಗಲೇ ಬಂದ ಇದೇ ವಿಷಯದ ಹಾಲಿವುಡ್ ಚಿತ್ರದಲ್ಲಿ ವಿಧವೆ ಲಕ್ಷ್ಮೀಬಾಯಿಯ ಕೆಲವು ಪ್ರಣಯ ದೃಶ್ಯಗಳಿವೆ ಎಂದು ಗದ್ದಲವೆದ್ದು ಭಾರತದಲ್ಲಿ ಅದರ ಪ್ರದರ್ಶನಕ್ಕೆ ಅನುಮತಿಸಲಿಲ್ಲ ಎಂಬುದು ನನ್ನ ನೆನಪು. ಆ ದಿನಗಳಲ್ಲೇ ಹಾಲಿವುಡ್ ಚಿತ್ರವೊಂದರಲ್ಲಿ ನೀಗ್ರೋಗಳನ್ನು ಅವಮಾನಿಸಲಾಗಿದೆ ಎಂದು ಬೆಂಗಳೂರು ಟಾಟಾ ಇನ್​ಸ್ಟಿಟ್ಯೂಟ್​ನ ಕೆಲ ನೀಗ್ರೋ ವಿದ್ಯಾರ್ಥಿಗಳು ಪ್ರತಿಭಟಿಸಿ ಪ್ರಧಾನಮಂತ್ರಿ ನೆಹರುರಿಗೆ ಪತ್ರ ಬರೆದರು. ಕೂಡಲೇ ಆ ಚಿತ್ರದ ಪ್ರದರ್ಶನ ನಿಲ್ಲಿಸುವಂತೆ ಪ್ರಧಾನಿ ಕಾರ್ಯಾಲಯ ಸೂಚಿಸಿತು.

ಮೂಲವಸ್ತುವಿಗೆ ಅಪಚಾರವಾಗದಂತೆ ಐತಿಹಾಸಿಕ ಚಿತ್ರ ನಿರ್ವಿುಸಿದವರಲ್ಲಿ ಬಿ.ಆರ್. ಪಂತುಲು ಅಗ್ರಗಣ್ಯರು. ಅವರ ‘ಕಿತ್ತೂರು ಚೆನ್ನಮ್ಮ’, ‘ಶ್ರೀಕೃಷ್ಣದೇವರಾಯ’ ಕನ್ನಡ ಚಿತ್ರಗಳು ಇಂದಿಗೂ ಕ್ಲಾಸಿಕ್​ಗಳೆನಿಸಿವೆ. ಪಂತುಲು ನಿರ್ವಿುಸಿದ ‘ವೀರಪಾಂಡ್ಯ ಕಟ್ಟಬೊಮ್ಮನ್’, ‘ಕಪ್ಪಲೋಟ್ಟಿಯ ತಮಿಳನ್’ ತಮಿಳು ಚಿತ್ರಗಳು ಅದ್ಭುತ ಯಶಸ್ಸು ಕಂಡಿದ್ದರ ಜತೆಗೆ ಐತಿಹಾಸಿಕ/ಜೀವನಚರಿತ್ರೆ ಆಧಾರಿತ ಚಿತ್ರಗಳು ಹೇಗಿರಬೇಕೆಂಬುದಕ್ಕೆ ಮೇಲ್ಪಂಕ್ತಿಯಾಗಿವೆ.

ಇದೇ ಸಂದರ್ಭದಲ್ಲಿ ಕಮಲ್​ಹಾಸನ್​ರ ‘ದಶಾವತಾರಂ’ ನೆನಪಿಸಿಕೊಳ್ಳುವುದು ಸೂಕ್ತ. ಚೋಳರ ಕಾಲದಲ್ಲಿ ಶೈವ-ವೈಷ್ಣವರ ನಡುವೆ ತಿಕ್ಕಾಟವಿತ್ತೆಂಬ ಕಲ್ಪನೆಯನ್ನು ಆಧರಿಸಿ ಈ ನಟ ಚಿತ್ರಿಸಿರುವ ‘ರಂಗರಾಜ ನಂಬಿ’ ಪಾತ್ರದ ಚಿತ್ರೀಕರಣದ ಹಿಂದೆಯೂ ಮತೀಯ ವೈಷಮ್ಯ ಕೆರಳಿಸುವ ದುಷ್ಟಯತ್ನವಿದೆ ಎಂಬುದು ನಿಚ್ಚಳ; ಕಮಲ್ ಈ ಬುದ್ಧಿಜೀವಿ ಗುಂಪಿಗೆ ಸೇರಿದವರೆ!

ಕಳೆದ ಶತಮಾನದ 5ನೇ ದಶಕದಲ್ಲಿ ಬೆಂಗಳೂರಿಗೆ ಬಂದ ಹಲವಾರು ಐತಿಹಾಸಿಕ ಚಿತ್ರಗಳನ್ನು ನೋಡಿರುವೆ. ಮರಾಠಾ ಇತಿಹಾಸಕ್ಕೆ ಸಂಬಂಧಿಸಿದ ‘ಗಢ್ ಆಲಾ ಪಣ್ ಸಿಂಹ್ ಗೇಲಾ’, ‘ನರವೀರ್ ತಾನಾಜಿ’ (ಇವೆರಡೂ ತಾನಾಜಿ ಮಾಲಸುರೆಯ ಘಟನೆಯಾಧರಿಸಿದ ಮರಾಠಿ ಚಿತ್ರಗಳು), ‘ಪಾವನ್​ಖಂಡಿ’ (ಬಾಜಿಪ್ರಭು ದೇಶಪಾಂಡೆ ಎಂಬ ಯೋಧನ ಕತೆ), ‘ಪ್ರತಾಪ್​ಗಢ್’ (ಶಿವಾಜಿ ಪ್ರತಾಪ್​ಗಢವನ್ನು ಗೆದ್ದ ಕತೆ), ‘ಅಮರ ಭೂಪಾಳಿ’ (ಘನಶ್ಯಾಮ್ ಸುಂದರಾ.. ಹಾಡಿಗೆ ಪ್ರಸಿದ್ಧ), ‘ರಾಮ್ಾಸ್ತ್ರಿ’ (ರಾಮ್ಾಸ್ತ್ರೀ ಪ್ರಭುಣೆ ಎಂಬ ಪೇಶ್ವೆಯರ ನ್ಯಾಯಾಧೀಶನ ಕತೆ. ಪೇಶ್ವೆ ನಾರಾಯಣರಾವ್ ಕೊಲೆ ಪ್ರಸಂಗ) ಹೀಗೆ ಪಟ್ಟಿ ಬೆಳೆಯುತ್ತದೆ. ಇವೆಲ್ಲ ಕಪ್ಪು-ಬಿಳುಪು ಚಿತ್ರಗಳಾದರೂ ನಿರ್ದೇಶಕನ ಚಾಕಚಕ್ಯತೆ ಮತ್ತು ಕಥಾವಸ್ತುವನ್ನು ಪ್ರಾಮಾಣಿಕವಾಗಿ ಪರಿಚಯಿಸುವ, ಇತಿಹಾಸಕ್ಕೆ ಅಪಚಾರವಾಗಬಾರದೆಂಬ ಕಳಕಳಿ ಅವನ್ನು ಉತ್ತಮ ಕಲಾಕೃತಿಗಳನ್ನಾಗಿಸಿದವು.

ಇತ್ತೀಚೆಗೆ ಜೀವನ ಚರಿತ್ರೆ ಆಧಾರಿತ ಭಗತ್ ಸಿಂಗ್ ಕುರಿತ ಚಿತ್ರಗಳಾಗಲೀ, ರಿಚರ್ಡ್ ಆಟಿನ್​ಬರೋನ ‘ಗಾಂಧಿ’ ಚಿತ್ರವಾಗಲೀ ಗೊತ್ತಿರುವ ಇತಿಹಾಸದ ಘಟನೆಗಳಿಗೆ ಲೋಪ ಉಂಟುಮಾಡಿಲ್ಲ.

ಸಂಜಯ್ ಲೀಲಾ ಬನ್ಸಾಲಿ ಮತ್ತು ಅವನ ಜಾತಿಯ ಅಧಿಕಪ್ರಸಂಗಿ ನಿರ್ವಪಕರು ಕೇವಲ ಬಾಕ್ಸಾಫೀಸನ್ನೋ ಅಥವಾ ಸತ್ತು ಗೋರಿ ಸೇರಿರುವ ಐಡಿಯಾಲಜಿಗಳನ್ನೋ ಅವಲಂಬಿಸಿ ಚಿತ್ರ ಮಾಡಿ ಜನರಲ್ಲಿ ದ್ವೇಷ ಬಿತ್ತಿ ದಾರಿ ತಪ್ಪಿಸುವ ಚಾಳಿಯನ್ನು ಕೈಬಿಟ್ಟು ಸೊಹ್ರಾಬ್ ಮೋದಿ, ಬಿ.ಆರ್. ಪಂತಲು, ವಿ. ಶಾಂತಾರಾಮ್ ಬಾಲ್​ಜಿ ಪೆಂಡಾರ್ಕರ್​ರಂತಹ ದಿಗ್ಗಜರನ್ನು ಅನುಸರಿಸುವುದು ಆರೋಗ್ಯಕರ. ಇಂದಿನ ಅದ್ದೂರಿ ಚಿತ್ರಗಳ ಯುಗದಲ್ಲಿ ಉತ್ತಮ ಕಥಾವಸ್ತುಗಳನ್ನು ಬಳಸಿ ಚಿತ್ರ ನಿರ್ವಿುಸಿ ಸತ್ಕೀರ್ತಿ ಗಳಿಸಲಿ.

ಬಹುಸಂಖ್ಯಾತರನ್ನುಳಿದು ಮಿಕ್ಕ ಧರ್ವಿುಯರನ್ನು ಮುಟ್ಟಲು ಇವರಿಗೆ ಭಯ. ಈ ಬಹುಸಂಖ್ಯಾತರು ಏನು ಮಾಡಿದರೂ ತೆಪ್ಪಗಿರುತ್ತಾರೆ ಎಂಬ ಧೈರ್ಯ. ನಮ್ಮಲ್ಲಿ ‘ಜಾಣನಿಗೆ ಮಾತಿನಪೆಟ್ಟು ಸಾಕು, ದಡ್ಡನಿಗೆ ದೊಣ್ಣೆಪೆಟ್ಟೇ ಬೇಕು’ ಎಂಬ ಗಾದೆಯುಂಟು. ಸೂಕ್ಷ್ಮಮತಿಗೆ ಹಿತನುಡಿಗಳನ್ನು ಹೇಳಿದರೆ ಸರಿಪಡಿಸಿಕೊಳ್ಳುತ್ತಾನೆ. ಪುಂಡರಿಗೆ ನಿಯಂತ್ರಣ ಬೇಕು. ಬಹುಶಃ ಈಗ ರಜಪೂತರು ಮಾಡುತ್ತಿರುವುದು ಈ ಕೆಲಸವೇ ಇರಬೇಕು…

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top