ವಿಐಎಸ್​ಎಲ್ ಹೋರಾಟಕ್ಕೆ ಬ್ರೇಕ್

ಭದ್ರಾವತಿ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ಹಿನ್ನೆಲೆಯಲ್ಲಿ ವಿಐಎಸ್​ಎಲ್ ಕಾರ್ಖಾನೆ ಎದುರು ಕಾರ್ವಿುಕ ಸಂಘಗಳು 79 ದಿನಗಳಿಂದ ನಡೆಸುತ್ತಿದ್ದ ಹೋರಾಟ ತಾತ್ಕಾಲಿಕ ಸ್ಥಗಿತಗೊಂಡಿದೆ.

ವಿಐಎಸ್​ಎಲ್ ಕಾರ್ಖಾನೆಯನ್ನು ಖಾಸಗೀಕರಣ ಪಟ್ಟಿಯಿಂದ ಕೈ ಬಿಡುವಂತೆ ಹಾಗೂ ಆಧುನೀಕರಣಕ್ಕೆ ಅಗತ್ಯ ಬಂಡವಾಳ ತೊಡಗಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪರಿಹಾರ ಕಂಡುಕೊಳ್ಳುವುದಾಗಿ ಬಿ.ವೈ.ರಾಘವೇಂದ್ರ ಅವರು ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ.

ಏಪ್ರಿಲ್ 5ರಿಂದ ಸೆಪ್ಟೆಂಬರ್ 21ರವರೆಗೆ ಕಾರ್ವಿುಕರು 79 ದಿನ ನಿರಂತರ ಧರಣಿ ನಡೆಸಿದ್ದಾರೆ. ರಾಜ್ಯ ರೈತಸಂಘ, ಬಿಎಂಎಸ್, ಸಿಐಟಿಯು ಸೇರಿ ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು, ಹಾಲಿ, ಮಾಜಿ ಶಾಸಕರು, ಶಾಲಾ ಮಕ್ಕಳು ಪ್ರತಿಭಟನೆಗೆ ಬೆಂಬಲಿಸಿದ್ದರು. ರಸ್ತೆ ತಡೆ, ಅರೆಬೆತ್ತಲೆ ಮೆರವಣಿಗೆ, ಬೈಕ್ ರ್ಯಾಲಿ, ಪಾದಯಾತ್ರೆ ಮೂಲಕ ತಹಸೀಲ್ದಾರ್​ಗೆ ಮನವಿ ಸಲ್ಲಿಸಿ ಕೇಂದ್ರ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದರು.

ಇದೀಗ ಗುತ್ತಿಗೆ ಕಾರ್ವಿುಕರು ಹಾಗೂ ಸಂಘಟನೆಗಳು ತುರ್ತಸಭೆ ನಡೆಸಿ, ಶಾಸಕ ಬಿ.ಕೆ.ಸಂಗಮೇಶ್ವರ್, ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಹಾಗೂ ಹಿರಿಯ ಕಾರ್ವಿುಕ ಮುಖಂಡರೊಂದಿಗೆ ರ್ಚಚಿಸಿದರು. ನಂತರ ಕಾರ್ಖಾನೆ ಅಭಿವೃದ್ಧಿಪಡಿಸುವಂತೆ ಲೋಕಸಭಾ ಸದಸ್ಯರಿಗೆ ಮನವಿ ಸಲ್ಲಿಸುವ ಮೂಲಕ ಹೋರಾಟವನ್ನು ತಾತ್ಕಾಲಿಕ ಹಿಂಪಡೆದು ಸಂಸದರ ಪ್ರಯತ್ನಕ್ಕೆ ತಾವೂ ಸಕೈಜೋಡಿಸಿ, ಹೋರಾಟದ ದಿಕ್ಕನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.

ಕಾರ್ಖಾನೆ ಖಾಸಗೀಕರಣವೂ ಫೇಲ್: ಕೇಂದ್ರದ ನೀತಿ ಆಯೋಗವು ಸೈಲ್ ಆಡಳಿತದ ವಿಐಎಸ್​ಎಲ್​ನ್ನು ಖಾಸಗೀಕರಣ ಮಾಡಲು ಕರೆದಿದ್ದ ಜಾಗತಿಕ ಟೆಂಡರ್ ಪ್ರಕ್ರಿಯೆ ಸೆ.10ಕ್ಕೆ ಕೊನೆಗೊಂಡಿದೆ. ಕಾರ್ಖಾನೆಯನ್ನು ಮುನ್ನಡೆಸಲು ಯಾವುದೇ ಖಾಸಗಿ ಕಂಪನಿಗಳು ಇಲ್ಲವೇ ಮಾಲೀಕರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದ ಕಾರಣ ಖಾಸಗೀಕರಣ ಪ್ರಕ್ರಿಯೆ ಯಶಸ್ವಿಯಾಗಿಲ್ಲ. ಯಾವುದಾದರೊಂದು ಕಂಪನಿಯವರು ಈ ಕಾರ್ಖಾನೆಯನ್ನು ಖರೀದಿಸಿ, ಬಂಡವಾಳ ತೊಡಗಿಸಿ ಕಾರ್ವಿುಕರಿಗೆ ಉದ್ಯೋಗ ನೀಡುವರೆಂಬ ಭರವಸೆ ಕೂಡ ಸದ್ಯಕ್ಕೆ ಇಲ್ಲ. ಸರ್ಕಾರಗಳೇ ಈಗ ಬಂಡವಾಳ ತೊಡಗಿಸಿ ಕಾರ್ಖಾನೆ ಅಭಿವೃದ್ಧಿ ಹಾಗೂ ಕಾರ್ವಿುಕರಿಗೆ ಕೆಲಸ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಕಾರ್ವಿುಕರು ಒಟ್ಟಾಗಿ ಸಭೆ ನಡೆಸುವ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಂಸದ ಬಿ.ವೈ.ರಾಘವೇಂದ್ರ ಅವರ ಮೊರೆ ಹೋಗಿದ್ದಾರೆ.

ಕಾರ್ವಿುಕರಿಗೆ ಸಂಸದರೇ ಅಸ್ತ್ರ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರದ ಉಕ್ಕು ಸಚಿವರು ಹಾಗೂ ಹಣಕಾಸು ಸಚಿವರು ಮತ್ತು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಕಾರ್ಖಾನೆ ವಸ್ತು ಸ್ಥಿತಿ ಕುರಿತು ಅರಿವು ಮಾಡಿಸುವ ಮೂಲಕ ಕಾರ್ಖಾನೆಗೆ ಬಂಡವಾಳ ತೊಡಗಿಸಿ ಕಾರ್ವಿುಕರ ಬದುಕನ್ನು ಸರಿಪಡಿಸಿಕೊಳ್ಳಲು ಕಾರ್ವಿುಕ ಸಂಘಟನೆಗಳ ಮುಖಂಡರು ಮುಂದಾಗಿದ್ದಾರೆ.

ಇದಕ್ಕೆ ಪೂರಕವಾಗಿ ಸಂಸದರು ಕೂಡ ಕ್ಷೇತ್ರದಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವಿಐಎಸ್​ಎಲ್ ಕಾರ್ಖಾನೆಗೆ ಕರೆದಿರುವ ಜಾಗತಿಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಟೆಂಡರ್​ನಲ್ಲಿ ಯಾರೂ ಪಾಲ್ಗೊಳ್ಳದಿದ್ದಾಗ ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಬಂಡವಾಳ ತೊಡಗಿಸುವ ಭರವಸೆ ಮಾತುಗಳನ್ನಾಡಿದ್ದರು. ಅದರಂತೆ ಇದೀಗ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಟೆಂಡರ್​ನಲ್ಲಿ ಯಾರೂ ಭಾಗವಹಿಸದಿರುವ ಕಾರಣ ಕಾರ್ಖಾನೆಯನ್ನು ಸಾರ್ವಜನಿಕ ಉದ್ಯಮವಾಗಿಯೇ ಉಳಿಸಿಕೊಡುವಲ್ಲಿ ಬಿ.ವೈ.ರಾಘವೇಂದ್ರ ಜವಾಬ್ದಾರಿ ಕೂಡ ಹೆಚ್ಚಿದೆ.

Leave a Reply

Your email address will not be published. Required fields are marked *