ವಿಂಬಲ್ಡನ್ ಪ್ರಶಸ್ತಿ ಸುತ್ತಿಗೇರಿದ ಸೆರೇನಾ, ಹಲೆಪ್

ಲಂಡನ್: ಮಾಜಿ ವಿಶ್ವ ನಂ.1 ಆಟಗಾರ್ತಿಯರಾದ ಸೆರೇನಾ ವಿಲಿಯಮ್್ಸ ಹಾಗೂ ಸಿಮೊನಾ ಹಲೆಪ್ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಮುಖಾಮುಖಿ ಆಗಲಿದ್ದಾರೆ. 2018ರ ಫ್ರೆಂಚ್ ಓಪನ್ ಚಾಂಪಿಯನ್ ಹಲೆಪ್ ಆಲ್ ಇಂಗ್ಲೆಂಡ್ ಕ್ಲಬ್​ನಲ್ಲಿ ಫೈನಲ್​ಗೇರಿದ ಮೊದಲ ರೊಮೆನಿಯಾ ಆಟಗಾರ್ತಿ ಎನಿಸಿಕೊಂಡರೆ, ಸೆರೇನಾ 8ನೇ ವಿಂಬಲ್ಡನ್ ಮತ್ತು ಒಟ್ಟಾರೆ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆಹಾಕಿದರು.

ಕಳೆದ 10 ವರ್ಷಗಳಿಂದ ಹುಲ್ಲಿನ ಅಂಕಣದಲ್ಲಿ ಸ್ಪರ್ಧೆಯಲ್ಲಿದ್ದರೂ 2ನೇ ಬಾರಿಗೆ ಸೆಮಿಫೈನಲ್​ನಲ್ಲಿ ಹೋರಾಡಿದ ವಿಶ್ವ ನಂ.7 ಸಿಮೊನಾ ಹಲೆಪ್ 6-1, 6-3 ನೇರ ಸೆಟ್​ಗಳಿಂದ ಉಕ್ರೇನ್​ನ ಎಲಿನಾ ಸ್ವಿಟೊಲಿನಾ ಎದುರು ಕೇವಲ 1 ಗಂಟೆ 13 ನಿಮಿಷಗಳ ಹೋರಾಟದಲ್ಲಿ ಸುಲಭ ಜಯ ದಾಖಲಿಸಿದರು. ಇದರೊಂದಿಗೆ ರೊಮೆನಿಯಾ ಆಟಗಾರ್ತಿ 5ನೇ ಬಾರಿಗೆ ಗ್ರಾಂಡ್ ಸ್ಲಾಂ ಫೈನಲ್​ಗೇರಿದರು. ಉಕ್ರೇನ್ ಆಟಗಾರ್ತಿ ಎದುರು ಕಳೆದ 4 ಮುಖಾಮುಖಿಯಲ್ಲಿ 3ರಲ್ಲಿ ಜಯ ದಾಖಲಿಸಿದ್ದ ಹಲೆಪ್ ಗೆಲುವಿನ ಅಂತರ ವಿಸ್ತರಿಸಿಕೊಂಡರು. 2014ರಲ್ಲಿ ಕಡೆಯ ಬಾರಿಗೆ ಹಲೆಪ್ ವಿಂಬಲ್ಡನ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.

11ನೇ ಫೈನಲ್​ಗೆ ಸೆರೇನಾ

ಏಪಕ್ಷೀಯವಾಗಿ ನಡೆದ 2ನೇ ಸೆಮಿಫೈನಲ್ ಹೋರಾಟದಲ್ಲಿ 7 ಬಾರಿಯ ಚಾಂಪಿಯನ್ ಹಾಗೂ ಹಾಲಿ ರನ್ನರ್​ಅಪ್ ಸೆರೇನಾ ವಿಲಿಯಮ್ಸ್​  6-1, 6-2 ನೇರ ಸೆಟ್​ಗಳಿಂದ ಚೆಕ್ ಗಣರಾಜ್ಯದ ಬಾರ್ಬರಾ ಸ್ಟ್ರೈಕೋವಾ ಎದುರು ಸುಲಭ ಜಯ ದಾಖಲಿಸಿ 11ನೇ ಬಾರಿಗೆ ಫೈನಲ್ ಗೇರಿದರು. 23 ಗ್ರಾಂಡ್ ಪ್ರಶಸ್ತಿ ಒಡತಿ ಸೆರೇನಾ ತಾಯಿಯಾದ ಬಳಿಕ ಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 2017ರ ಆಸ್ಟ್ರೇಲಿಯನ್ ಓಪನ್ ಬಳಿಕ ಗ್ರಾಂಡ್ ಸ್ಲಾಂ ಪ್ರಶಸ್ತಿಯಿಂದ ವಂಚಿತರಾಗಿರುವ 37 ವರ್ಷದ ಸೆರೇನಾ ಪ್ರಶಸ್ತಿ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

Leave a Reply

Your email address will not be published. Required fields are marked *