ವಾಹನ ಸಂಚಾರ ತಡೆದು ಪ್ರತಿಭಟನೆ

ಅಣ್ಣಿಗೇರಿ: ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಮಿತಿಮೀರಿ ಎಂ. ಸ್ಯಾಂಡ್ ತುಂಬಿಕೊಂಡು ಸಂಚರಿಸುವ ಟಿಪ್ಪರ್​ಗಳಿಂದಾಗಿ ರಸ್ತೆ ಹಾಳಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಗ್ರಾಮದಿಂದ 800 ಮೀಟರ್ ದೂರದಲ್ಲಿರುವ ಜಿ.ಸಿ. ಪಾಟೀಲ ಎಂಬುವವರಿಗೆ ಸೇರಿದ ಕಲ್ಮೇಶ್ವರ ಸ್ಟೋನ್​ಕ್ರಷರ್ ಘಟಕದಿಂದ ನಿತ್ಯ ಸಾಗುವ ಎಂ. ಸ್ಯಾಂಡ್ ತುಂಬಿದ ವಾಹನಗಳಿಂದಾಗಿ ಅಣ್ಣಿಗೇರಿ ಹಾಗೂ ಮಜ್ಜಿಗುಡ್ಡ ಗ್ರಾಮದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರತಿ ಟಿಪ್ಪರ್​ಗೆ 16 ಟನ್ ಎಂ. ಸ್ಯಾಂಡ್ ತುಂಬಲು ಪರವಾನಗಿ ನೀಡಿದೆ. ಆದರೆ, ಟಿಪ್ಪರ್ ಮಾಲೀಕರು 30ರಿಂದ 35 ಟನ್​ನಷ್ಟು ಎಂ. ಸ್ಯಾಂಡ್ ಸಾಗಿಸುತ್ತಿದ್ದಾರೆ. ಇದು ರಸ್ತೆಗಳು ಹಾಳಾಗಲು ಪ್ರಮುಖ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಲ್ಲು ಗಣಿಗಾರಿಕೆ ಘಟಕ ಗ್ರಾಮದ ಪಕ್ಕದಲ್ಲಿಯೇ ಇರುವುದರಿಂದ ಮನೆಗಳು ಬಿರುಕು ಬಿಟ್ಟಿವೆ. ಸಿಡಿ ಮದ್ದಿನಿಂದ ಶಬ್ದಮಾಲಿನ್ಯ ಮತ್ತು ವಾಯು ಮಾಲಿನ್ಯದಿಂದ ಗ್ರಾಮಸ್ಥರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಎಂ.ಜೆ. ಹೊಕ್ರಾಣಿ ಹಾಗೂ ಪಿಎಸ್​ಐ ವೈ.ಎಲ್. ಶೀಗಿಹಳ್ಳಿ ಭೇಟಿ ನೀಡಿ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ಕುರಿತು ಮಾಹಿತಿ ಪಡೆದು, ಮಿತಿಮೀರಿ ಎಂ. ಸ್ಯಾಂಡ್ ಸಾಗಾಟ ಮಾಡದಂತೆ ಟಿಪ್ಪರ್ ಚಾಲಕರಿಗೆ ಎಚ್ಚರಿಕೆ ನೀಡಿ ವಾಹನಗಳನ್ನು ಬಿಟ್ಟು ಕಳುಹಿಸಿದರು. ಗ್ರಾಮಸ್ಥರಾದ ಪ್ರಭು ಗುಡ್ಡದ, ಬಸವರಾಜ ಜಿಲೇಗಾರ, ವಿರೂಪಾಕ್ಷಯ್ಯ ದೊಡ್ಡಮನಿ, ಬಸಪ್ಪ ಶಿರೂರ, ಬಸವರಾಜ ಗುಡಿಸಾಗರ, ಈರಪ್ಪ ಅಂಗಡಿ,ವೀರಣ್ಣ ಅಂಗಡಿ, ಶೇಖಪ್ಪ ತುಪ್ಪದ, ಮಹಾದೇವ ಅಂಗಡಿ, ವೀರಣ್ಣ ಗುಡ್ಡದ, ಸುರೇಶ ಅಂಗಡಿ ಇತರರಿದ್ದರು.