ಶಿರಸಿ: ಜಾಗೃತ ಶಕ್ತಿಪೀಠ ಶಿರಸಿಯ ಮಾರಿಕಾಂಬಾ ದೇವಿ ದ್ವೈವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಹಾಗೂ ವಾಹನ ದಟ್ಟಣೆಗೆ ಪೊಲೀಸ್ ಇಲಾಖೆ ಅವಕಾಶ ನೀಡಬಾರದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.
ಮಾರಿಕಾಂಬಾ ಜಾತ್ರೆ ಪ್ರಯುಕ್ತ ನಗರದ ಮಿನಿ ವಿಧಾನಸೌಧದಲ್ಲಿ ಗುರುವಾರ ಸಭೆ ಆಯೋಜಿಸಿ ಮಾತನಾಡಿದ ಕಾಗೇರಿ, ಜಾತ್ರೆಗೆ 15ರಿಂದ 20 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸಾಕಷ್ಟು ಭದ್ರತೆಯ ಅಗತ್ಯವಿದೆ. ಈ ವೇಳೆ ಅಕ್ರಮ ಚಟುವಟಿಕೆಗಳು, ಜೂಜು ಇತ್ಯಾದಿ ಹೆಚ್ಚುವ ಸಾಧ್ಯತೆಯಿದ್ದು, ಪೊಲೀಸ್ ಇಲಾಖೆ ಕಠಿಣ ನಿಲುವು ಪ್ರದರ್ಶಿಸಬೇಕು ಎಂದರು.
ಜನರು ತಿನ್ನುವ ಆಹಾರ, ತಿಂಡಿಗಳ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ಇಂಥ ಮಳಿಗೆಗಳು ತಲೆ ಎತ್ತಿದರೆ ಅಂತಹ ಮಳಿಗೆ ಸ್ಥಗಿತಗೊಳಿಸಬೇಕು. ನಗರಾದ್ಯಂತ ಇರುವ ಸಿಸಿ ಕ್ಯಾಮರಾಗಳ ದುರಸ್ತಿ ಕಾರ್ಯ ತಕ್ಷಣ ಮಾಡಬೇಕು. ಪೊಲೀಸ್ ಇಲಾಖೆ ನಿರಾಕರಿಸಿದ ಕಡೆ ಮಳಿಗೆ ನಿರ್ವಿುಸಲು ನಗರಸಭೆ ಅವಕಾಶ ನೀಡಬಾರದು. ಪ್ರಮುಖ ಮಾರ್ಗಗಳ ಅಕ್ಕಪಕ್ಕ ಬೃಹತ್ ವಾಹನ ನಿಲುಗಡೆ ತಪ್ಪಿಸಬೇಕು. ಕೋಟೆಕೆರೆ ರಸ್ತೆಯಲ್ಲಿ ಯಾವುದೇ ಮಳಿಗೆಗಳಿಗೆ ಅವಕಾಶ ನೀಡಬಾರದು. ಬಸ್ ನಿಲುಗಡೆ ನಿಗದಿತ ಜಾಗದಲ್ಲಿ ಮಾಡಬೇಕು. ಒಂದೊಮ್ಮೆ ಬಸ್ ನಿಲುಗಡೆ ಅವ್ಯವಸ್ಥೆಯಾದರೆ ಸಂಬಂಧಪಟ್ಟ ನಿಗಮದ ಡಿಸಿ ಮೇಲೆ ಪ್ರಕರಣ ದಾಖಲಿಸಬೇಕು. ಜನಾನುಕೂಲಿ ಜಾತ್ರ ಆಗಬೇಕು ಎಂದರು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ದರ್ಶನಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಬಿಡ್ಕಿಬೈಲ್ ಗದ್ದುಗೆ ಬಳಿ ಅಂಗಡಿ ಕಡಿಮೆ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಹರೀಶಕುಮಾರ ಮಾತನಾಡಿ, ಈ ಬಾರಿ ಜಾತ್ರೆಯಲ್ಲಿ ಸಂಚಾರ ದಟ್ಟಣೆ ವಿಚಾರದಲ್ಲಿ ಹೊಂದಾಣಿಕೆ ಇಲ್ಲ. ಗದ್ದುಗೆ ಬಳಿ ಪ್ರತಿ ವರ್ಷ ಇರುವ ಒತ್ತಡ ಕಡಿಮೆ ಮಾಡಬೇಕು ಎಂದು ಹೇಳಿದರು.
ಎಸ್ಪಿ ಶಿವಪ್ರಕಾಶ ದೇವರಾಜ ಮಾತನಾಡಿ, ಜಾತ್ರೆಗೆ ಬರುವ ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸಬೇಕು. ಕುಡಿದು ವಾಹನ ಚಲಾಯಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಭದ್ರತೆ ವಿಚಾರದಲ್ಲಿ ತೀರಾ ಜಾಗರೂಕರಾಗಿರಬೇಕು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಡಬೇಕು ಎಂದರು.
ಎನ್ಡಬ್ಲು್ಯಕೆಆರ್ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಮಾತನಾಡಿ, ಕಳೆದ ಜಾತ್ರೆಯಲ್ಲಿ 120 ಹೆಚ್ಚುವರಿ ಬಸ್ ಓಡಿಸಿದ್ದು, ಈ ಬಾರಿ ಕಳೆದ ಜಾತ್ರೆಗಿಂತ ಹೆಚ್ಚು ಬಸ್ ಬಳಸಿಕೊಳ್ಳಲಾಗುವುದು. ಜಾತ್ರಾ ವಿಶೇಷ ಬಸ್ಗಳಿಗೆ ಮಾತ್ರ ಶೇ.10 ಪ್ರಯಾಣದರ ಹೆಚ್ಚಿಸಲಾಗುತ್ತದೆ ಎಂದರು.
ಡಿವೈಎಸ್ಪಿ ಜಿ.ಟಿ.ನಾಯಕ ಮಾತನಾಡಿ, ಒಟ್ಟು 19 ಕಡೆ ರ್ಪಾಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಜಾತ್ರಾ ಗದ್ದು ಸಮೀಪ ಹೆಚ್ಚುವರಿ 20 ಸಿಸಿ ಕ್ಯಾಮರಾ ಅಳವಡಿಸಲಾಗುವುದು. ನಾಲ್ಕು ವಾಚ್ ಟವರ್ ಅಗತ್ಯವಿದೆ. ದೇವಸ್ಥಾನದ ವತಿಯಿಂದ ಸ್ವಯಂಸೇವಕರನ್ನು ನೀಡುವ ಕಾರ್ಯವಾಗಬೇಕು ಎಂದರು.
ಸಭೆಯಲ್ಲಿ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಾಂತಾರಾಮ ಹೆಗಡೆ, ಶಶಿಕಲಾ ಚಂದ್ರಾಪಟ್ಟಣ, ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ನಗರಸಭೆ ಪೌರಾಯುಕ್ತ ರಮೇಶ ನಾಯಕ ಮತ್ತಿತರರು ಉಪಸ್ಥಿತರಿದ್ದರು.
ಮಾರಿಕಾಂಬಾ ಜಾತ್ರಾ ವಿಶೇಷ ಅನುದಾನವಾಗಿ ರಾಜ್ಯ ಸರ್ಕಾರ ಈ ಬಾರಿ 2 ಕೋಟಿ ರೂ. ಅನುದಾನ ನೀಡಿದ್ದು, ಕಳೆದ ಜಾತ್ರೆಯ 1.50 ಕೋಟಿ ಬಾಕಿ ಅನುದಾನ ಕೂಡ ಬರಲಿದೆ. | ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾಧ್ಯಕ್ಷ