ಹುಬ್ಬಳ್ಳಿ: ‘ಅವಸರವೇ ಅಪಘಾತಕ್ಕೆ ಕಾರಣ’ ಎಂಬ ಮಾತು ಸಾರ್ವಕಾಲಿಕ ಸತ್ಯ. ಈ ಮಾತು ಮರೆತು ವೇಗವಾಗಿ ವಾಹನ ಚಲಾಯಿಸುವ ಸವಾರರ ಮೇಲೆ ಕಣ್ಗಾವಲು ಇಡಲೆಂದೇ ಹುಬ್ಬಳ್ಳಿ- ಧಾರವಾಡ ಸಂಚಾರ ಪೊಲೀಸರು ವಿವಿಧೆಡೆ ‘ಸ್ಪೀಡ್ ರಡಾರ್ ಗನ್’ ಅಳವಡಿಸಲು ಮುಂದಾಗಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆ, ಕೊಪ್ಪಿಕರ ರಸ್ತೆ, ಧಾರವಾಡದ ಕೆಸಿಡಿ ರಸ್ತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಈ ಕ್ಯಾಮರಾ ಅಳವಡಿಸಲು ಕಮಿಷನರೇಟ್ ಚಿಂತನೆ ನಡೆಸಿದೆ. ಸದ್ಯ ಕೇಶ್ವಾಪುರ ರಸ್ತೆಯಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಲಾಗಿದೆ. ರಸ್ತೆಬದಿ ಟ್ರೖೆಪ್ಯಾಡ್ ಮೇಲೆ ಸ್ಪೀಡ್ ರಡಾರ್ ಗನ್ (ಡಿಸಿಟಲ್ ಕ್ಯಾಮರಾ) ಇಡಲಾಗುತ್ತದೆ. ಒಬ್ಬ ನೌಕರ ಅದನ್ನು ಮಾನಿಟರ್ ಮಾಡುತ್ತಾರೆ. ರಸ್ತೆಯಲ್ಲಿ ಬರುವ ವಾಹನಗಳನ್ನು ಕ್ಯಾಮರಾ ಮೂಲಕ ಚಿತ್ರೀಕರಿಸುತ್ತಾರೆ.
ಭಾರಿ ವಾಹನಗಳು 40 ಕಿ.ಮೀ.ಗಿಂತ ಹೆಚ್ಚು ವೇಗವಾಗಿ ಚಲಿಸಿದರೆ ಮತ್ತು ಲಘು ವಾಹನಗಳು (ಬೈಕ್, ಕಾರು, ಆಟೋ, ಇತರೆ) 40 ಕಿ.ಮೀ.ಗಿಂತ ಹೆಚ್ಚು ವೇಗವಾಗಿ ಚಲಿಸಿದರೆ ಅಂತಹ ವಾಹನವನ್ನು ನಂಬರ್ ಪ್ಲೇಟ್ ಸಮೇತ ಕ್ಯಾಮರಾ ಸ್ವಯಂಚಾಲಿತವಾಗಿ ಫೋಟೋ ಸೆರೆ ಹಿಡಿಯುತ್ತದೆ. ಆ ಫೋಟೋವನ್ನು ಸಿಬ್ಬಂದಿ ನೇರವಾಗಿ ಟ್ರಾಫಿಕ್ ಮ್ಯಾನೇಜ್ವೆುಂಟ್ ಕಂಟ್ರೋಲ್ ರೂಂಗೆ (ಟಿಎಂಸಿ)ರವಾನಿಸುತ್ತಾರೆ. ಅಲ್ಲಿಂದ ವಾಹನದ ಮಾಲೀಕರ ವಿಳಾಸ ಪತ್ತೆ ಹಚ್ಚಿ ಆ ವಿಳಾಸಕ್ಕೆ ದಂಡದ ನೋಟಿಸ್ ಕಳುಹಿಸಲಾಗುತ್ತದೆ.
ಸ್ಪೀಡ್ ರಡಾರ್ ಗನ್ಗಳು ಹೊಸದಾಗಿ ಖರೀದಿಸಿದ್ದೇನಲ್ಲ. 2018ರಲ್ಲೇ ಖರೀದಿಸಿದ್ದ ಕ್ಯಾಮರಾಗಳು ಮೂಲೆ ಸೇರಿದ್ದವು. ಇದೀಗ ಪೊಲೀಸ್ ಆಯುಕ್ತರ ಆಸಕ್ತಿಯಿಂದ ಮತ್ತೆ ಕೆಲಸ ಆರಂಭಿಸಿವೆ.
ಅಪಘಾತಗಳನ್ನು ತಡೆಗಟ್ಟಲು ಹು-ಧಾ ಅವಳಿನಗರದ ಪ್ರಮುಖ ರಸ್ತೆಗಳಲ್ಲಿ ‘ಸ್ಪೀಡ್ ರಡಾರ್ ಗನ್’ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಸದ್ಯ ಪ್ರಾಯೋಗಿಕವಾಗಿ ಕೆಲವೆಡೆ ಅಳವಡಿಸಲಾಗಿದೆ.
| ಎಂ.ಎಸ್. ಹೊಸಮನಿ, ಎಸಿಪಿ (ಹು-ಧಾ ಸಂಚಾರ ವಿಭಾಗ)
500 ಮೀ. ದೂರದಿಂದ ಸೆರೆ: ಹೆದ್ದಾರಿಗಳಲ್ಲಿ ದೂರದಿಂದ ವಾಹನಗಳ ವೇಗಮಿತಿ ಪತ್ತೆ ಹಚ್ಚಿ ದಂಡ ವಿಧಿಸುವ ಕೆಲಸವನ್ನು ಇಂಟರ್ಸೆಪ್ಟರ್ ವಾಹನದ ಸಿಬ್ಬಂದಿ ಮಾತ್ರ ಮಾಡುತ್ತಿದ್ದರು. ಇದೀಗ ‘ಸ್ಪೀಡ್ ರಡಾರ್ ಗನ್’ ಸಹಾಯದಿಂದ ನಗರದಲ್ಲಿ ವಾಹನ ಸವಾರರ ವೇಗಕ್ಕೆ ಬ್ರೇಕ್ ಹಾಕುವ ಕಾರ್ಯ ಆರಂಭವಾಗಿದೆ. ಸುಮಾರು 500 ಮೀ. ದೂರದಿಂದಲೇ ವೇಗ ಗುರುತಿಸಿ ಚಿತ್ರ ಸೆರೆ ಹಿಡಿಯುವ ಸಾಮರ್ಥ್ಯವನ್ನು ಸ್ಪೀಡ್ ರಡಾರ್ ಗನ್ ಹೊಂದಿದೆ. ಕೇಶ್ವಾಪುರ ರಸ್ತೆಯಲ್ಲಿ ನಿತ್ಯ ಮೂರ್ನಾಲ್ಕು ಸವಾರರನ್ನು ಗುರುತಿಸಿ ದಂಡ ವಿಧಿಸಲಾಗುತ್ತಿದೆ ಎನ್ನುತ್ತಾರೆ ಪೂರ್ವ ಸಂಚಾರ ಠಾಣೆ ಕಾನ್ಸ್ಟೇಬಲ್ ರಾಜು ಕೊರಗು.
1000 ರೂಪಾಯಿ ದಂಡ: ‘ಸ್ಪೀಡ್ ರಡಾರ್ ಗನ್’ ಕ್ಯಾಮರಾದಲ್ಲಿ ನಿಮ್ಮ ವಾಹನದ ಫೋಟೋ ಕ್ಲಿಕ್ ಆದರೆ 1,000 ರೂ. ದಂಡ ಕಟ್ಟಲು ಸಿದ್ಧರಾಗಬೇಕು. ಟಿಎಂಸಿ ಸಿಬ್ಬಂದಿ ನೇರವಾಗಿ ನಿಮ್ಮ ಮನೆ ವಿಳಾಸಕ್ಕೆ ದಂಡದ ನೋಟಿಸ್ ಕಳುಹಿಸುತ್ತಾರೆ. ಟಿಎಂಸಿ ಅಥವಾ ಸಮೀಪದ ಸಂಚಾರ ಠಾಣೆಗೆ ತೆರಳಿ ದಂಡ ಕಟ್ಟಬೇಕಾಗುತ್ತದೆ.