ವಾಲ್ಮೀಕಿ ಜೀವನ ಚರಿತ್ರೆ ಆದರ್ಶಪ್ರಾಯ

ಹಾವೇರಿ: ನಗರದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ವಾಲ್ಮೀಕಿ ವೃತ್ತ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಎಲ್.ಜಿ. ಹಾವನೂರ ಭವನ ನಿರ್ವಣಕ್ಕೆ 1 ಕೋಟಿ ರೂ. ಮಂಜೂರಾಗಿದ್ದು ಶೀಘ್ರದಲ್ಲಿಯೇ ಭವನ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ., ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾವೃದ್ಧಿ ಸಂಘದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಅವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಅವರು ರಚಿಸಿದ ರಾಮಾಯಣ ಗ್ರಂಥ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ವಾಲ್ಮೀಕಿ ಋಷಿಗಳು ಸಮಾಜದ ಅಂಕುಡೊಂಕು ತಿದ್ದುತ್ತ ಮಾನವ ಹೇಗೆ ಬಾಳಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಧರ್ಮ, ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗೋಣ. ಸಮಾಜ ಬಾಂಧವರು ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಮಾತನಾಡಿದರು. ಉಪನ್ಯಾಸಕ ಪ್ರಮೋದ ನಲವಾಗಲ ಉಪನ್ಯಾಸ ನೀಡಿದರು.

ಡಿಡಿಪಿಐ ಅಂದಾನೆಪ್ಪ ವಡಗೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಫೀರಜಾದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಿಕಟ್ಟಿ, ತಹಸೀಲ್ದಾರ್ ಶಿವಕುಮಾರ, ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಆನವಟ್ಟಿ, ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳಾದ ಅಶೋಕ ಹಳ್ಳಿಕೇರಿ, ವೀರಣ್ಣ ಸಂಗೂರ, ಮಂಜುನಾಥ, ಅಶೋಕ ತಳವಾರ, ನಾಗರಾಜ, ಶ್ರೀಕಾಂತ, ಬಸವರಾಜ ಹಾದಿಮನಿ, ಕಳ್ಳಿಮನಿ ಇತರರು ಉಪಸ್ಥಿತರಿದ್ದರು.

ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಂ.ಎಚ್. ಸುರೇಶ್​ರೆಡ್ಡಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ವಂದಿಸಿದರು.

ಆಕರ್ಷಕ ಮೆರವಣಿಗೆ…

ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆಗೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು. ಜಿ.ಪಂ. ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ಎಸ್.ಎಫ್.ಎನ್. ಗಾಜಿಗೌಡ್ರ ಇತರರು ಉಪಸ್ಥಿತರಿದ್ದರು.<

ಪ್ರತಿಭಾ ಪುರಸ್ಕಾರ

2017-18ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ದೀಪಾ ತಳವಾರ(ಶೇ. 93.83), ಪಲ್ಲವಿ (ಶೇ. 91.66), ಆಂಜನೇಯ ಬೆಳ್ಳಿಗಟ್ಟಿ (ಶೇ. 90.83), ಅಕ್ಕಮ್ಮ ಮಾಸಣ್ಣನವರ (ಶೇ. 90.33) ಹಾಗೂ ಸಂಗೀತಾ ಕೋಣನಕೇರಿ ಶೇ. 92 ಅವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.