ವಾರ್ಷಿಕ ಗುತ್ತಿಗೆಯಂತೆ ಪರಿಹಾರ ನೀಡಿ

ಗೌರಿಬಿದನೂರು: ಪವರ್​ಗ್ರಿಡ್ ವಿದ್ಯುತ್ ಮಾರ್ಗದಿಂದ ಅನನುಕೂಲವಾಗುವ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರೈತರು ಹಾಗೂ ತಾಲೂಕು ಆಡಳಿತ ನಡುವೆ ನಡೆದ ಸಭೆ ಯಾವುದೇ ಪರಿಹಾರ ಕಾಣದೆ ಗೊಂದಲದಲ್ಲೇ ಮುಕ್ತಾಯವಾಯಿತು.

ನಗರದ ಡಾ.ಎಚ್.ಎನ್.ಕಲಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆ ಆರಂಭದಲ್ಲಿ ಯೋಜನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಂತೆ ರೈತರಿಗೆ ಉಪವಿಭಾಗಾಧಿಕಾರಿ ಶಿವಸ್ವಾಮಿ ಕೋರಿದರು.

ಉಚ್ಚೋದನಹಳ್ಳಿ ರೈತ ರವಿಚಂದ್ರರೆಡ್ಡಿ ಮಾತನಾಡಿ, ನಮ್ಮ ಜಮೀನು ಕುಡುಮಲಕುಂಟೆ ಕೈಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಪ್ರಸ್ತುತ ಜಮೀನಿಗೆ ಲಕ್ಷಾಂತರ ರೂ. ಬೆಲೆಯಿದೆ. ನೀವು ನೀಡುವ ಅಲ್ಪ ಮೊತ್ತದ ಪರಿಹಾರ ಬೇಡ. ನೆರೆಯ ಪಾವಗಡ ತಾಲೂಕಿನಲ್ಲಿ ರೈತರಿಗೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಪರಿಹಾರ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಪರಿಹಾರ ನೀಡಬೇಕು. ಇಲ್ಲದಿದ್ದರೆ ವಿದ್ಯುತ್ ಮಾರ್ಗಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ತಾಪಂ ಮಾಜಿ ಸದಸ್ಯ ತೊಂಡೇಬಾವಿಯ ಕೆ.ವಿ.ಶ್ರೀನಿವಾಸ್ ಮಾತನಾಡಿ, ಪವರ್​ಗ್ರಿಡ್ ವಿದ್ಯುತ್ ಮಾರ್ಗದಲ್ಲಿ ಲಕ್ಷಾಂತರ ರೂಪಾಯಿ ವಾರ್ಷಿಕ ಆದಾಯ ತರುವ ಬೆಳೆಗಳಾದ ತೆಂಗು, ಅಡಕೆ, ಮಾವು ಮರಗಳಿದ್ದು, ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ನಿಗದಿಪಡಿಸಬೇಕು. ತೊಂಡೇಬಾವಿ ಭಾಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ರೈತರ ಒಂದು ಎಕರೆ ಜಮೀನಿಗೆ 80 ಸಾವಿರ ರೂ. ವಾರ್ಷಿಕ ಗುತ್ತಿಗೆಗಾಗಿ ನೀಡುತ್ತಿದ್ದಾರೆ. ಅದೇ ರೀತಿ ಸರ್ಕಾರ ರೈತರಿಗೆ ವಾರ್ಷಿಕ ಗುತ್ತಿಗೆ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ರೈತರ ಬೇಡಿಕೆಗಳನ್ನು ಆಲಿಸಿದ ಉಪವಿಭಾಗಾಧಿಕಾರಿ, ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ಜಮೀನಿನಲ್ಲಿ ಬಳಸಿಕೊಳ್ಳುವ ಜಾಗಕ್ಕೆ ಮಾತ್ರ ಪರಿಹಾರ ನೀಡಲಾಗುತ್ತದೆ. ರೈತರಿಗೆ ನೀಡಬೇಕಾದ ಪರಿಹಾರ ನಿಧಿಯನ್ನು ಎರಡು ಹಂತದಲ್ಲಿ ಪಾವತಿಸಲಾಗುತ್ತದೆ. ಯೋಜನೆ ಟಿಲಿಗ್ರಾಫ್ ಕಾಯ್ದೆ, ಕರ್ನಾಟಕ ವಿದ್ಯುತ್ ಶಕ್ತಿ ಕಾಯ್ದೆ ಅನ್ವಯ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಎಚ್.ಶ್ರೀನಿವಾಸ್ ಮಾತನಾಡಿ, ಸಭೆಯಲ್ಲಿ ರೈತರಿಂದ ಬಂದ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಮತ್ತೆ ರೈತರ ಸಭೆ ಕರೆದು ರ್ಚಚಿಸಿ ಮುಂದಿನ ತಿರ್ವನ ಕೈಗೊಳ್ಳುವುದಾಗಿ ಸಭೆ ಅಂತಿಮಗೊಳಿಸಿದರು. ಆದರೆ, ಸಭೆಯಲ್ಲಿ ಭಾಗವಹಿಸಿದ್ದ ರೈತರ ಆಕ್ರೋಶದ ಮಾತುಗಳು, ಏರುಧ್ವನಿ, ಅಧಿಕಾರಿಗಳ ಜತೆ ವಾಗ್ವಾದದಿಂದಾಗಿ ಯಾವುದೇ ತೀರ್ವನವಾಗದೆ ಸಭೆ ಗೊಂದಲದಲ್ಲೇ ಮುಗಿಯಿತು.

ಪವರ್​ಗ್ರಿಡ್ ಅಧಿಕಾರಿ ಸೋಮಶೇಖರ್, ಕಡಬೂರು , ಹುಚ್ಚೋದನಹಳ್ಳಿ, ರಾಯರೇಕಲಹಳ್ಳಿ, ಸಿದ್ದೇನಹಳ್ಳಿ, ದ್ವಾರಗಾನಹಳ್ಳಿ ಗ್ರಾಮಗಳ ರೈತರು ಉಪಸ್ಥಿತರಿದ್ದರು.