ವಾರ್ನರ್ ಶತಕದಬ್ಬರಕ್ಕೆ ಬೆಚ್ಚಿದ ಪಾಕ್

ಟೌಂಟನ್: ಸ್ಪೋಟಕ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ (107 ರನ್, 111 ಎಸೆತ, 11 ಬೌಂಡರಿ, 1 ಸಿಕ್ಸರ್) ನಿಷೇಧ ಶಿಕ್ಷೆ ಮುಗಿಸಿ ರಾಷ್ಟ್ರೀಯ ತಂಡಕ್ಕೆ ವಾಪಸಾದ ಬಳಿಕ ಸಿಡಿಸಿದ ಮೊದಲ ಶತಕ ಹಾಗೂ ಬೌಲರ್​ಗಳ ಬಿಗಿ ಬೌಲಿಂಗ್ ದಾಳಿ ನೆರವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಹಳಿ ಏರಿತು. ಕೂಪರ್ ಅಸೋಸಿಯೇಟ್ಸ್ ಕೌಂಟಿ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆರನ್ ಫಿಂಚ್ ಪಡೆ 41 ರನ್​ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತು. ಜತೆಗೆ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನ ವಿರುದ್ಧ ಆಡಿದ 15ನೇ ಪಂದ್ಯದಲ್ಲಿ 14ನೇ ಜಯ ಮತ್ತು ಸತತ 9ನೇ ಜಯ ಕಂಡ ಸಾಧನೆ ಮಾಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ವಾರ್ನರ್ ಹಾಗೂ ನಾಯಕ ಆರನ್ ಫಿಂಚ್ (82 ರನ್, 84 ಎಸೆತ, 6 ಬೌಂಡರಿ, 4 ಸಿಕ್ಸರ್) ಮೊದಲ ವಿಕೆಟ್​ಗೆ ಪೇರಿಸಿದ 146 ರನ್ ಜತೆಯಾಟದ ನಡುವೆಯೂ ಪಾಕಿಸ್ತಾನದ ಮೊಹಮದ್ ಆಮೀರ್ (30ಕ್ಕೆ 5) ಮಾರಕ ದಾಳಿಯಿಂದಾಗಿ 49 ಓವರ್​ಗಳಲ್ಲಿ 307 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಪಾಕಿಸ್ತಾನ ತಂಡ 45.4 ಓವರ್​ಗಳಲ್ಲಿ 266 ರನ್​ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡ, ವೇಗಿಗಳಾದ ಪ್ಯಾಟ್ ಕಮ್ಮಿನ್ಸ್ (33ಕ್ಕೆ 3), ಮಿಚೆಲ್ ಸ್ಟಾರ್ಕ್ (43ಕ್ಕೆ2) ಹಾಗೂ ಕೇನ್ ರಿಚರ್ಡ್​ಸನ್ (62ಕ್ಕೆ 2) ಮಾರಕ ದಾಳಿಗೆ ನಲುಗಿತು. ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯ ನಡುವೆಯೂ ವಹಾಬ್ ರಿಯಾಜ್ (45) ಹಾಗೂ ಸರ್ಫ್ರಾಜ್ ಅಹ್ಮದ್ (40) 8ನೇ ವಿಕೆಟ್​ಗೆ 64 ರನ್ ಗಳಿಸಿದರೂ ಆಸೀಸ್ ವೇಗಿಗಳ ಆಘಾತದಿಂದ ತತ್ತರಿಸಿತು.

ವಾರ್ನರ್-ಫಿಂಚ್ ಬುನಾದಿ: ವಿಶ್ವ ಶ್ರೇಷ್ಠ ಆರಂಭಿಕ ಜೋಡಿ ಎನಿಸಿರುವ ಆರನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಬಿರುಸಿನ ಆರಂಭ ನೀಡಲು ಯಶಸ್ವಿಯಾಯಿತು. ಹಿಂದಿನ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ನಾಯಕ ಫಿಂಚ್ ಸ್ಪೋಟಕ ಬ್ಯಾಟಿಂಗ್ ಮೂಲಕ ರನ್​ವೇಗಕ್ಕೆ ಚಾಲನೆ ನೀಡಿದರು. ಕೊನೆಗೆ ಪಾಕಿಸ್ತಾನದ ಅನುಭವಿ ವೇಗಿ ಆಮೀರ್ ಈ ಜೋಡಿಗೆ ಬ್ರೇಕ್ ಹಾಕಲು ಯಶಸ್ವಿಯಾದರು.

ದಿಢೀರ್ ಕುಸಿದ ಆಸೀಸ್

ಫಿಂಚ್ ನಿರ್ಗಮನದೊಂದಿಗೆ ಆಸೀಸ್ ರನ್​ವೇಗಕ್ಕೂ ಬ್ರೇಕ್ ಬಿದ್ದಿತು. ಆರಂಭಿಕ ಜೋಡಿಯ ಭದ್ರ ಬುನಾದಿಯ ನಡುವೆಯೂ ಸ್ಟೀವನ್ ಸ್ಮಿತ್ (10) ಹಾಗೂ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಗ್ಲೆನ್ ಮ್ಯಾಕ್ಸ್​ವೆಲ್ (20) ನಿರಾಸೆ ಅನುಭವಿಸಿದರು. ಮತ್ತೊಂದೆಡೆ, ಬಿರುಸಿನ ಬ್ಯಾಟಿಂಗ್ ಮುಂದುವರಿಸಿದ ವಾರ್ನರ್ 15ನೇ ಶತಕ ಪೂರೈಸಿಕೊಂಡರು. ಬೆನ್ನಲ್ಲೇ ಶಹೀನ್ ಷಾ ಅಫ್ರಿದಿಗೆ ವಾರ್ನರ್ ಬಲಿಯಾದರು. ಇದರೊಂದಿಗೆ ಆಸ್ಟ್ರೇಲಿಯಾದ ಪತನ ಕೂಡ ಆರಂಭಗೊಂಡಿತು. ಆಮೀರ್ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕಕ್ಕೆ ಕಡಿವಾಣ ಹಾಕಿದರು. ಶಾನ್ ಮಾರ್ಷ್ (23), ಉಸ್ಮಾನ್ ಖವಾಜ (18), ಅಲೆಕ್ಸ್ ಕ್ಯಾರಿ (20) ನಿರಾಸೆ ಕಂಡರೆ, ಬಾಲಂಗೋಚಿಗಳು ಬಂದಷ್ಟೇ ವೇಗವಾಗಿ ವಾಪಸಾದರು. ಕಡೇ 19 ರನ್ ಪೇರಿಸುವಷ್ಟರಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.

Leave a Reply

Your email address will not be published. Required fields are marked *