ವಾರದ ಸಂತೆ ಸ್ಥಳಾಂತರಕ್ಕೆ ವ್ಯಾಪಾರಿಗಳ ವಿರೋಧ

ಶಿವಮೊಗ್ಗ: ನಗರದ ಮುಖ್ಯ ಬಸ್ ನಿಲ್ದಾಣದ ಹಿಂಭಾಗ ನಡೆಯುತ್ತಿದ್ದ ವಾರದ ಸಂತೆಯನ್ನು ಕೆಎಸ್​ಆರ್​ಟಿಸಿ ಡಿಪೋ ಎದುರಿನ ಮೈದಾನಕ್ಕೆ ಸ್ಥಳಾಂತರ ಮಾಡಿರುವುದಕ್ಕೆ ವ್ಯಾಪಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ವಾರದ ಸಂತೆ ನಡೆಯಬೇಕಿದ್ದ ಸ್ಥಳದಲ್ಲಿ ವಹಿವಾಟು ಆರಂಭಿಸದ ವ್ಯಾಪಾರಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ನೂತನ ಸಂತೆ ಮೈದಾನದಲ್ಲಿ ಸುಮಾರು 150 ವ್ಯಾಪಾರಿಗಳಿಗೆ ಮಾತ್ರ ಅವಕಾಶವಿದೆ. ಉಳಿದವರು ಏನು ಮಾಡಬೇಕೆಂದು ಪ್ರಶ್ನಿಸಿದರು.

ನೂತನ ಸಂತೆ ಮೈದಾನದಲ್ಲಿ ಮೂಲ ಸೌಕರ್ಯದ ಕೊರತೆಯಿದೆ. ಮಹಿಳಾ ವ್ಯಾಪಾರಿಗಳಿಗೆ ಶೌಚಗೃಹದ ವ್ಯವಸ್ಥೆಯಿಲ್ಲ. ಈ ಎಲ್ಲ ಕಾರಣದಿಂದ ಈಗಿರುವ ಸ್ಥಳದಲ್ಲೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಡಾ. ಎಂ.ಅಶ್ವಿನಿ, ಇದು ಪಾಲಿಕೆ ವ್ಯಾಪ್ತಿಗೆ ಬರುವ ವಿಷಯವಾದ್ದರಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಪಾಲಿಕೆಗೆ ತೆರಳಿ ಪ್ರತಿಭಟನೆ ಮುಂದುವರಿಸಿದರು.

ಈ ಸಂದರ್ಭದಲ್ಲಿ ವ್ಯಾಪಾರಿಗಳ ಮನವಿ ಆಲಿಸಿದ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಬಸ್ ನಿಲ್ದಾಣದ ಹಿಂಭಾಗದಲ್ಲಿ ವಾರದ ಸಂತೆ ನಡೆಯುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಹಿಂದೆಯೇ ಸಂತೆಯನ್ನು ಕೆಎಸ್​ಆರ್​ಟಿಸಿ ಡಿಪೋ ಎದುರಿನ ಮೈದಾನಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.

ನೂತನ ಮೈದಾನದಲ್ಲಿ ಮೂಲ ಸೌಕರ್ಯದ ಕೊರತೆಯಿರುವ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಈಗಿರುವ ಸ್ಥಳದಲ್ಲೇ ಸಂತೆ ನಡೆಸಬಹುದು. ಆದರೆ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಮತ್ತೆ ದೂರುಗಳು ಬಂದರೆ ಕೂಡಲೆ ಸ್ಥಳಾಂತರ ಮಾಡಲಾಗುವುದು ಎಂದರು. ಬಳಿಕ ಪ್ರತಿಭಟನೆ ಹಿಂಪಡೆದ ವ್ಯಾಪಾರಿಗಳು ಸಂತೆಗೆ ಮರಳಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಮಂಜುನಾಥ್, ಸಚ್ಚಿದಾನಂದ, ಭದ್ರಾವತಿ ಶಂಕರ್ ರಾವ್, ಗೀತಾ, ಪದ್ಮಾವತಿ, ಭಾಷಾ, ಸಮರ್ಥ್, ಗೋವಿಂದಪ್ಪ ಇತರರಿದ್ದರು.