ವಾರದೊಳಗೆ ರೈತರ ಗುರುತಿಸಿ

ಕೋಲಾರ: ಕೇಂದ್ರದ ರೈತ ಸಮ್ಮಾನ್ ಯೋಜನೆಯನ್ವಯ ಜಿಲ್ಲೆಯ ಎಲ್ಲ ವರ್ಗದ 3.03 ಲಕ್ಷ ರೈತರನ್ನು ಗುರುತಿಸಿ ಜೂ. 25ರೊಳಗೆ ಡಾಟಾ ಎಂಟ್ರಿ ಪೂರ್ಣಗೊಳಿಸುವಂತೆ ಜಿಪಂ ಸಿಇಒ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಗೀತಮ್ಮ ಆನಂದರೆಡ್ಡಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲ ವರ್ಗದ ರೈತರಿಗೂ ರೈತ ಸಮ್ಮಾನ್ ಯೋಜನೆ ವಿಸ್ತರಿಸಿದೆ. ಮೂರು ಹಂತದಲ್ಲಿ ಒಟ್ಟು 6000 ರೂ.ಗಳನ್ನು ರೈತರ ಖಾತೆಗೆ ನೇರ ಜಮಾ ಮಾಡಲಿದೆ. ನಮ್ಮಿಂದಾಗಿ ಯಾವೊಬ್ಬ ರೈತನೂ ಯೋಜನೆಯಿಂದ ವಂಚಿತರಾಗಬಾರದು ಎಂದರು.

ಕೃಷಿ, ತೋಟಗಾರಿಕೆ, ಗ್ರಾಪಂ, ರೈತ ಸಂಪರ್ಕ ಕೇಂದ್ರ, ಅಟಲ್​ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ನಮೂನೆ ಲಭ್ಯವಿದೆ. ಎಲ್ಲ ಪಿಡಿಒಗಳ ಮೂಲಕ ಎರಡ್ಮೂರು ದಿನಗಳಲ್ಲಿ ಪ್ರತಿ ರೈತನಿಗೂ ಮಾಹಿತಿ ನೀಡಿ ಅರ್ಜಿ ಸ್ವೀಕರಿಸಿ ಡಾಟಾ ಎಂಟ್ರಿ ಮಾಡಿಸಿ ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಸಿಎಂ ಸಭೆ ಹಾಗೂ ವಿಡಿಯೋ ಕಾನ್ಪರೆನ್ಸ್​ನಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದರು.

ಕ್ರಿಯಾಯೋಜನೆ ರೂಪಿಸಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗೆ 35 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಎಲ್ಲ ಗ್ರಾಪಂಗಳಿಂದ ಕ್ರಿಯಾಯೋಜನೆ ತರಿಸಿ ಸಮಿತಿ ಅನುಮೋದನೆ ಪಡೆದು ತಕ್ಷಣ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಂಗ್ಲ ಶಿಕ್ಷಣ: ದಾಖಲಾತಿ 60ಕ್ಕೆ ಏರಿಕೆ: 1ನೇ ತರಗತಿ ಆಂಗ್ಲ ಮಾಧ್ಯಮ ಬೋಧನೆಗೆ ದಾಖಲಾತಿ 30ರ ಮಿತಿಯನ್ನು 60ಕ್ಕೆ ಹೆಚ್ಚಿಸಲಾಗಿದೆ. ಆಯ್ಕೆಯಾದ 24 ಶಾಲೆಗಳಲ್ಲಿ ಎಷ್ಟೇ ಅರ್ಜಿ ಬಂದರೂ ಪ್ರವೇಶ ನಿರಾಕರಿಸಬೇಡಿ, ಸಿಎಸ್​ಆರ್ ಅನ್ವಯ ಕೊಠಡಿ ಇನ್ನಿತರ ಹೆಚ್ಚುವರಿ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ತೀರ್ವನಿಸಿದೆ. ಬಸ್ ಸೌಲಭ್ಯದ ಬೇಡಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ನಿರ್ವಹಣೆ ಹೊಣೆಯನ್ನು ಆಯಾ ಶಾಲೆಗಳಿಂದ ಭರಿಸಬೇಕಾದೀತು ಎಂದು ಡಿಡಿಪಿಐ ಕೆ.ರತ್ನಯ್ಯಗೆ ಸೂಚಿಸಿದರು.

ಬಯೋಮೆಟ್ರಿಕ್ ಹಾಜರಾತಿ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗಳಲ್ಲಿ ಮಕ್ಕಳ ಹಾಜರಾತಿ ಬಗ್ಗೆ ಸಿಎಂ ಜತೆಗಿನ ಸಭೆಯಲ್ಲಿ ಎಲ್ಲ ಜಿಲ್ಲೆಗಳ ಸಿಇಒಗಳು ವಿಷಯ ಪ್ರಸ್ತಾಪಿಸಲಾಗಿ ಬೆಳಗ್ಗೆ ಮತ್ತು ರಾತ್ರಿ ಬಯೋಮೆಟ್ರಿಕ್ ಹಾಜರಾತಿ ಪಡೆಯುವ ಬಗ್ಗೆ ಇಲಾಖೆ ಸಚಿವರು ಕ್ರಮದ ಭರವಸೆ ನೀಡಿದ್ದಾರೆ. ಅಂಗನವಾಡಿಗಳಲ್ಲಿನ ಮಕ್ಕಳ ಹಾಜರಾತಿ ಸುಧಾರಿಸದಿದ್ದರೆ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.

ವಿಶೇಷ ವರ್ಗಕ್ಕೆ ವಸತಿ: ವಸತಿ ಯೋಜನೆ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದ್ದರೂ ಅಂಗವಿಕಲರು, ವಿಧವೆ, ಕುಷ್ಠ, ಎಚ್​ಐವಿ ಸೋಂಕಿತರು, ಜೀತವಿಮುಕ್ತರು, ಸಫಾಯಿ ಕರ್ಮಚಾರಿಗಳು ಹೀಗೆ ವಿಶೇಷ 14 ವರ್ಗದ ಫಲಾನುಭವಿಗಳಿಗೆ 2017-18ನೇ ಸಾಲಿಗೆ ಮಂಜೂರಾದ 1824 ಮನೆಗಳಿಗೆ 1 ವಾರದಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷಕರಿಂದ ರಾಜಕೀಯ: ಜಿಲ್ಲೆಯ ಯಾರೂ ಮಾಡದಷ್ಟು ರಾಜಕೀಯವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಈ ಬಗ್ಗೆ ವಿಡಿಯೋ, ಫೋಟೋ ನೀಡುತ್ತೇನೆ. ಕ್ರಮ ಕೈಗೊಳ್ಳುವಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ದೂರಿದಾಗ ಜಿಪಂ ಅಧ್ಯಕ್ಷೆ ಗೀತಮ್ಮ ಧ್ವನಿಗೂಡಿಸಿದರು. ದಾಖಲೆ ಸಹಿತ ಮಾಹಿತಿ ನೀಡಿ, ಕ್ರಮ ಕೈಗೊಳ್ಳುವುದಾಗಿ ಸಿಇಒ ತಿಳಿಸಿದರು.

 

Leave a Reply

Your email address will not be published. Required fields are marked *