ಧಾರವಾಡ: ಹುಬ್ಬಳ್ಳಿ ಶಹರ ಹೊರತುಪಡಿಸಿ ಜಿಲ್ಲೆಯ ಇತರ ತಾಲೂಕುಗಳಲ್ಲಿ ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ವಾರದಲ್ಲಿ ನಾಲ್ಕು ದಿನಗಳ ಅವಕಾಶ ನೀಡಲಾಗುವುದು. ಜನರು ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ಕೆಂಪು, ಹಳದಿ, ಹಸಿರು ವಲಯಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಸೂಕ್ತ ನಿರ್ಣಯ ಕೈಗೊಳ್ಳಲು ಸೂಚಿಸಿದ್ದರು. ಅದರಂತೆ ಕೆಲ ಸಡಿಲಿಕೆ ನೀಡಲು ತೀರ್ವನಿಸಲಾಗಿದೆ ಎಂದರು.
ಹುಬ್ಬಳ್ಳಿ ಶಹರದಲ್ಲಿ ಕರೊನಾ ಪ್ರಕರಣಗಳು ಹೆಚ್ಚಿರುವುದರಿಂದ ಕಂಟೈನ್ಮೆಂಟ್ ಪ್ರದೇಶ ಘೊಷಿಸಲಾಗಿದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಎಲ್ಲ ನಿರ್ಬಂಧಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಪಾಲಿಸಬೇಕಾದ ನಿಯಮ: ಉದ್ಯಮ ಸಂಸ್ಥೆಗಳ ಮಾಲೀಕರು ಶೇ.50 ರಷ್ಟು ಕಾರ್ವಿುಕರನ್ನು ಬಳಸಬಹುದು. ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಪೂರೈಸುವುದು ಹಾಗೂ ಸಾಮಾಜಿಕ ಅಂತರದ ನಿಯಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಕೈಗಾರಿಕಾ ಚಟುವಟಿಕೆಗಳಲ್ಲಿ ನಿಯಮಗಳ ಪಾಲನೆ ಬಗ್ಗೆ ನಿಗಾವಹಿಸಬೇಕು.
ಯಾವುದಕ್ಕೆ ವಿನಾಯಿತಿ?: ಸ್ಟೇಷನರಿ ಮತ್ತು ಬುಕ್ಸ್ಟಾಲ್, ಇಲೆಕ್ಟ್ರಿಕಲ್ ರಿಪೇರಿ, ಪ್ಲಬಿಂಗ್, ಪೇಂಟ್, ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಅಂಗಡಿಗಳು, ಮರಳು, ಇಟ್ಟಿಗೆ, ಸಿಮೆಂಟ್, ಕಬ್ಬಿಣ ಮೊದಲಾದ ನಿರ್ಮಾಣ ಕಾಮಗಾರಿಗಳ ವಹಿವಾಟುಗಳು. ರಿಪೇರಿ ಮತ್ತು ಸರ್ವಿಸ್ ಸೆಂಟರ್ಗಳು, ಟೈಲ್ಸ್ ಅಂಗಡಿಗಳು, ಜೆರಾಕ್ಸ್ ಮತ್ತು ಪ್ರಿಂಟಿಂಗ್, ಅಪ್ಟಿಕಲ್ಸ್, ಅಕ್ಕಿ, ಹಿಟ್ಟು, ಅಡುಗೆ ಎಣ್ಣೆ ಮಿಲ್ಗಳು ಮತ್ತು ಅಂಗಡಿಗಳು, ಟೈರ್ ಮತ್ತು ಟ್ಯೂಬ್ ಅಂಗಡಿಗಳು, ಮಿನರಲ್ ವಾಟರ್ ಮಾರಾಟ ಅಂಗಡಿಗಳು, ಮೊಬೈಲ್ ರಿಪೇರಿ ಅಂಗಡಿಗಳು. ಹೋಟೆಲ್ಗಳು ಪಾರ್ಸಲ್ ಮೂಲಕ ಮಾತ್ರ ಆಹಾರ ವಿತರಿಸಬಹುದು. ಆಹಾರ ಹೋಂ ಡೆಲಿವರಿಗೆ ಅನುಮತಿ, ಗ್ಯಾಸ್ ಮತ್ತು ಸ್ಟೌ ರಿಪೇರಿ, ಪ್ರತ್ಯೇಕವಾಗಿರುವ ಕಿರಾಣಿ ಅಂಗಡಿಗಳು, ನೀರು ಮತ್ತು ನೈರ್ಮಲ್ಯದ ಕಾಮಗಾರಿಗಳಿಗೆ ಸಂಬಂಧಿಸಿದ ಅಂಗಡಿಗಳಿಗೆ ಅವಕಾಶ.
ಯಾವುದಕ್ಕೆ ಅನುಮತಿ ಇರುವುದಿಲ್ಲ?: ಎಲ್ಲ ಶಿಕ್ಷಣ ತರಬೇತಿ, ಕೋಚಿಂಗ್ ಕ್ಲಾಸ್ಗಳು ತೆರೆಯಲು ಅವಕಾಶವಿಲ್ಲ. ಆಟೋರಿಕ್ಷಾ, ಸೈಕಲ್ ರಿಕ್ಷಾ ಸೇರಿದಂತೆ ಟ್ಯಾಕ್ಸಿ, ಕ್ಯಾಬ್ ಸೇವೆಗಳು ಇಲ್ಲ. ಸಿನಿಮಾ ಟಾಕೀಸ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಈಜುಗೋಳ, ಮನರಂಜನಾ ಪಾರ್ಕ್, ಬಾರ್ಗಳು, ಸಭಾಂಗಣಗಳಲ್ಲಿ ಚಟುವಟಿಕೆಗಳ ನಿರ್ಬಂಧ ಮುಂದುವರಿಯಲಿದೆ. ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ ಕಾರ್ಯಕ್ರಮಗಳಿಗೆ ನಿಷೇಧ ಮುಂದುವರಿಯಲಿದೆ. ಎಲ್ಲ ಧರ್ಮಗಳ ಪ್ರಾರ್ಥನಾ ಮಂದಿರಗಳಲ್ಲಿ ಅದರ ಅನುಯಾಯಿಗಳು ಸೇರುವುದನ್ನು ನಿರ್ಬಂಧಿಸಲಾಗಿದೆ. ಎಲ್ಲ ಮಾರ್ಕೆಟ್ ಕಾಂಪ್ಲೆಕ್ಸ್ಗಳು, ಮಲ್ಟಿಬ್ರ್ಯಾಂಡ್ ಹಾಗೂ ಸಿಂಗಲ್ ಬ್ರ್ಯಾಂಡ್ಗಳ ಮಾಲ್ಗಳು ಮುಚ್ಚಿರಬೇಕು.
ಮದ್ಯ ಮಾರಾಟ ನಿಷೇಧ ಮುಂದುವರಿಯಲಿ: ಲಾಕ್ಡೌನ್ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಿರುವುದು ಭಗವಂತನ ದಯೆಯಿಂದ ಹೀಗೆ ಮುಂದುವರಿಯಲಿ. ಇದರಿಂದ ಸಾಕಷ್ಟು ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಬಹುದು ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸಚಿವ ಶೆಟ್ಟರ್, ಹಾಗೆ ಮಾಡಿದರೆ ಸರ್ಕಾರಕ್ಕೆ 20 ಸಾವಿರ ಕೋಟಿ ರೂ. ನಷ್ಟವಾಗುತ್ತದೆ ಎಂದರು.
ಸಂಯಮದಿಂದ ವರ್ತಿಸಿ: ಮುಂಗಾರು ಪ್ರಾರಂಭವಾಗುವುದರಿಂದ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಆಸ್ಪತ್ರೆ, ಕಟ್ಟಡ ನಿರ್ಮಾಣ ಕಾರ್ಯ ಸೇರಿ ವಿವಿಧ ಕಾರಣಗಳಿಗೆ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ಬರುವ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಜನ, ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಪೊಲೀಸರೊಂದಿಗೆ ಸಂಯಮದಿಂದ ವರ್ತಿಸಿ ಸಹಕಾರ ನೀಡಿ.
ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವರು