ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗೆ ಕಂಟಕ?

ಕಾರವಾರ: ಇಲ್ಲಿನ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗೆ ಕಂಟಕ ಬಂದೊದಗುವ ಲಕ್ಷಣ ಕಾಣುತ್ತಿದೆ.

ಬಂದರಿನ ವಿಸ್ತರಣೆ ಸಮಗ್ರ ಯೋಜನೆಗೆ ನೀಡಿದ್ದ ಪರಿಸರ ಪರವಾನಗಿಯನ್ನು ಮರು ಪರಿಶೀಲಿಸುವಂತೆ ರಾಜ್ಯ ಪರಿಸರ ಪರಿಣಾಮ, ಅಂದಾಜೀಕರಣ ಪ್ರಾಧಿಕಾರಕ್ಕೆ (ಎಸ್​ಸಿಐಎಎ)ಕೇಂದ್ರ ಪರಿಸರ ಮಂತ್ರಾಲಯ ಪತ್ರ ಬರೆದಿದೆ.

ಉತ್ತರ ಕನ್ನಡ ಜಿಲ್ಲಾ ಮೀನುಗಾರರ ವಿವಿಧ ಸಂಘಟನೆಗಳ ವೇದಿಕೆ ಕೇಂದ್ರ ಪರಿಸರ ಮಂತ್ರಾಲಯಕ್ಕೆ ಈ ಸಂಬಂಧ ಆಕ್ಷೇಪಣೆ ಸಲ್ಲಿಸಿತ್ತು. ಬಂದರಿನ ವಿಸ್ತರಣೆಯ ಸಮಗ್ರ ಯೋಜನೆಗೆ 2019ರ ಜನವರಿಯಲ್ಲಿ ನೀಡಲಾದ ಪರಿಸರ ಪರವಾನಗಿಯನ್ನು ರದ್ದು ಮಾಡುವಂತೆ ಮನವಿ ಮಾಡಿತ್ತು.

2017ರ ಏಪ್ರೀಲ್​ನಲ್ಲಿ ಬಂದರು ವಿಸ್ತರಣೆ ಸಂಬಂಧ ಸಾರ್ವಜನಿಕ ಅಹವಾಲು ಸಭೆಯಲ್ಲಿ ಮೀನುಗಾರರ ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ. ಮಾತ್ರವಲ್ಲ, 2006ರ ಪರಿಸರ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರ ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿತ್ತು. ಕೇಂದ್ರ ಪರಿಸರ ಮಂತ್ರಾಲಯದ ವಿಜ್ಞಾನಿ ಡಾ. ವಿನೋದ ಕೆ.ಸಿಂಗ್ ಅವರು ಎಸ್​ಸಿಐಎಎ ಸದಸ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಮೊದಲೇ ಟೆಂಡರ್: ಬಂದರಿನ ಎರಡನೇ ಹಂತದ ವಿಸ್ತರಣೆಗೆ ಆಗಲೇ ಟೆಂಡರ್ ಕರೆಯಲಾಗಿದೆ. ಟ್ಯಾಗೋರ್ ಕಡಲ ತೀರದ ಉದ್ಯಾನ ಸಮೀಪದಿಂದ ತಡೆಗೋಡೆ ನಿರ್ವಣಕ್ಕೆ ಹಣ ಮಂಜೂರಾಗಿದ್ದು, ಅದಕ್ಕೂ ಸಿದ್ಧತೆ ನಡೆದಿದೆ. ಈ ಹಂತದಲ್ಲಿ ಪರಿಸರ ಪರವಾನಗಿಯ ಬಗ್ಗೆಯೇ ಆಕ್ಷೇಪಣೆಗಳು ಕೇಳಿ ಬಂದಿದ್ದು, ಬಂದರು ವಿಸ್ತರಣೆಗೆ ಹಿನ್ನಡೆಯಾಗಿದೆ.

ಕಾರವಾರ ಬಂದರಿನ ಮೊದಲ ಹಂತದ ವಿಸ್ತರಣೆಗೆ ನೀಡಿದ ಪರಿಹಾರ ಕಾರ್ಯವೇ ಇನ್ನೂ ಮುಕ್ತಾಯವಾಗಿಲ್ಲ. ಎರಡನೇ ಹಂತದ ವಿಸ್ತರಣೆಯಿಂದ ಕಡಲ ತೀರ, ಮೀನುಗಾರಿಕೆ, ಬಂದರು ಎಲ್ಲವೂ ನಾಶವಾಗಲಿದೆ. ಇದರಿಂದ ಬಂದರು ವಿಸ್ತರಣೆಗೆ ನಮ್ಮ ವಿರೋಧವಿದೆ.

ವಿನಾಯಕ ಹರಿಕಂತ್ರ, ಮೀನುಗಾರ

Leave a Reply

Your email address will not be published. Required fields are marked *