ವಾಚನಾಲಯ ಸ್ಥಿತಿ ಶೋಚನೀಯ

ಬ್ಯಾಡಗಿ: ಪಟ್ಟಣದ ಪುರಸಭೆ ಆವರಣದಲ್ಲಿ ಶ್ರೀ ಲಿಂಗರಾಜ ವಾಚನಾಲಯವು ಮೂಲಸೌಲಭ್ಯ ಹಾಗೂ ಸಿಬ್ಬಂದಿ ಕೊರತೆಯಿಂದ ಹಾಳು ಬಿದ್ದಿದೆ.

35 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಕೇವಲ 2 ಗ್ರಂಥಾಲಯಗಳಿವೆ. ನೆಹರು ನಗರದ ಸಾರ್ವಜನಿಕರ ಗ್ರಂಥಾಲಯ ಸುಸಜ್ಜಿತವಾದ ಕಟ್ಟಡ, ಸಿಬ್ಬಂದಿ ಹಾಗೂ ಬೃಹತ್ ಪ್ರಮಾಣದಲ್ಲಿ ಪುಸ್ತಕ ಭಂಡಾರ ಹೊಂದಿದೆ. ಆದರೆ, 6 ದಶಕಗಳ ಹಿಂದೆ ಆರಂಭವಾದ ಪುರಸಭೆ ವಾಚನಾಲಯವು ಕಾಯಂ ಸಿಬ್ಬಂದಿ, ಪುಸ್ತಕಗಳಿಲ್ಲದೆ ಸೊರಗುತ್ತಿದೆ. ಬೆಳಗ್ಗೆ 6ರಿಂದ 9 ಗಂಟೆಯವರೆಗೆ ನೀರು ನಿರ್ವಹಣೆ ಸಿಬ್ಬಂದಿ ತೆರದಿಡುತ್ತಾರೆ. 3 ತಾಸಿನ ಬಳಿಕ ಬಾಗಿಲು ಮುಚ್ಚುತ್ತಾರೆ. ನಂತರ ಇದನ್ನು ಪುರಸಭೆ ಶುಲ್ಕ ವಸೂಲಾತಿ ಇತರೆ ಕಾರ್ಯಗಳಿಗೆ ಸಿಬ್ಬಂದಿ ಬಳಸುತ್ತಿದ್ದಾರೆ. ಸಾರ್ವಜನಿಕರಿಗೆ ಪತ್ರಿಕೆ ಸೇರಿ ಪುಸ್ತಕ ಓದಲು ಅವಕಾಶವಿಲ್ಲದಂತಾಗಿದ್ದು, ಹೆಸರಿಗಷ್ಟೇ ವಾಚನಾಲಯವಾಗಿದೆ.

ವಾಚನಾಲಯ ಇತಿಹಾಸ: ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆ.ಹನುಮಂತಯ್ಯನವರು 1954ರಲ್ಲಿ ವಾಚನಾಲಯವನ್ನು ಉದ್ಘಾಟಿಸಿದ್ದರು. ಪುರಸಭೆ ಪ್ರಥಮ ಅಧ್ಯಕ್ಷರಾಗಿದ್ದ ಪಿ.ಪಿ. ಮಾದಾಪುರಮಠ ಅವರು ಮೂಲಸೌಲಭ್ಯ ಕಲ್ಪಿಸಿದ್ದರು. ಹೀಗಾಗಿ ದೊಡ್ಡಪ್ರಮಾಣದಲ್ಲಿ ಬೆಳೆದು ಸಾವಿರಾರು ಓದುಗರಿಗೆ ಜ್ಞಾನದ ಬೆಳಕು ನೀಡಿತ್ತು. ಈಗ ಗ್ರಂಥ ಭಂಡಾರದಲ್ಲಿ ನೋಡಲು ಪುಸ್ತಕಗಳೇ ಸಿಗುತ್ತಿಲ್ಲ. ಧೂಳು ಹಾಗೂ ಹೊಲಸಿನಿಂದ ತುಂಬಿರುವ ಕೊಠಡಿಗಳು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಚೇರಿ ಕಾಗದಪತ್ರಗಳು, ಗುಜರಿ ಸಾಮಗ್ರಿಗಳಿಂದ ತುಂಬಿಕೊಂಡಿದೆ.

ಸೊಳ್ಳೆಗಳ ಸಾಮ್ರಾಜ್ಯ: ಕಟ್ಟಡದ ಸುತ್ತಲೂ ಸಾಕಷ್ಟು ತ್ಯಾಜ್ಯ ಇರುವ ಹಿನ್ನೆಲೆಯಲ್ಲಿ ಹಗಲು ಹೊತ್ತಿನಲ್ಲಿ ಸೊಳ್ಳೆಗಳು ಗುಂಯ್ಗುಡುತ್ತವೆ. ಮಂಜಾವಿನಲ್ಲಿ ಬಹುತೇಕ ನಿವೃತ್ತ ನೌಕರರು ಪತ್ರಿಕೆ ಓದಲು 10 ಗಂಟೆಯ ಬಳಿಕ ಬರುತ್ತಿದ್ದು, ಅಲ್ಲಿ ಪತ್ರಿಕೆಗಳು ಇಲ್ಲದಿರುವುದನ್ನು ಕಂಡು ಬೇಸರದಿಂದ ಮರಳುವಂತಾಗಿದೆ.

ಹಳೆಯ ಕಟ್ಟಡದಲ್ಲಿರುವ ವಾಚನಾಲಯಕ್ಕೆ ಕಾಯಂ ಸಿಬ್ಬಂದಿ ಇಲ್ಲದ ಕಾರಣ ನೀರು ನಿರ್ವಹಣೆ ಮಾಡುವ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ. ಹೊಸ ಪುಸ್ತಕ, ಪತ್ರಿಕೆಗಳನ್ನು ತರಿಸುವುದು, ಕಾಯಂ ಸಿಬ್ಬಂದಿ ನೇಮಕ, ಹೊಸ ಕಟ್ಟಡ ನಿರ್ವಿುಸುವ ಕುರಿತು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವೆ.

| ಎಲ್. ಶಂಕರ ಪುರಸಭೆ ವ್ಯವಸ್ಥಾಪಕ

ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಂದ ಲಿಂಗರಾಜ ವಾಚನಾಲಯ ಉದ್ಘಾಟನೆ ಕಂಡಿತು. ಬಳಿಕ ಐದು ದಶಕಗಳ ಕಾಲ ಸುಸ್ಥಿತಿಯಲ್ಲಿತ್ತು. ಹತ್ತಾರು ವರ್ಷಗಳಿಂದ ಕೇಳುವರೆ ಇಲ್ಲದಂತಾಗಿದೆ. ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿ, ಉಪಯುಕ್ತ ಪುಸ್ತಕಗಳನ್ನು ಓದುಗರಿಗೆ ನೀಡಬೇಕು.

| ಚನ್ನಬಸಪ್ಪ ಶೆಟ್ಟರ ವೀರಕನ್ನಡಿಗ ವೇದಿಕೆ ರಾಜ್ಯಾಧ್ಯಕ್ಷ

Leave a Reply

Your email address will not be published. Required fields are marked *