ವಸತಿ ಫಲಾನುಭವಿಗಳ ಆಯ್ಕೆ ವಿಳಂಬ

ಕೋಲಾರ: ವಿವಿಧ ವಸತಿ ಯೋಜನೆಯನ್ವಯ ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಿಂಗಳ ಅಂತ್ಯದೊಳಗೆ ಸಲ್ಲಿಸದಿದ್ದಲ್ಲಿ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧವೂ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ ಎಂದು ಜಿಪಂ ಸಿಇಒ ಜಿ. ಜಗದೀಶ್ ಎಚ್ಚಸಿದರು.

ಜಿಪಂ ಕಚೇರಿಯಲ್ಲಿ ಮಂಗಳವಾರ ಪಿಡಿಒಗಳ ಜತೆ ವಿಡಿಯೋ ಕಾನ್ಪರೆನ್ಸ್ ಮೂಲಕ ವಸತಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಶ್ರೀನಿವಾಸಪುರ ತಾಲೂಕಿಗೆ 577, ಕೋಲಾರ 830, ಮಾಲೂರು 637, ಮುಳಬಾಗಿಲು 690 ಸೇರಿ ಒಟ್ಟು 4456 ಮನೆಗಳನ್ನು ಪಂಚಾಯಿತಿವಾರು ಹಂಚಿಕೆ ಮಾಡಿ ಎರಡು ತಿಂಗಳಾಗಿದೆ. ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ 1,700 ಮನೆ ಮಂಜೂರಾಗಿದ್ದು, ಫಲಾನುಭವಿಗಳ ಆಯ್ಕೆ ಇನ್ನೂ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಸತಿ, ನಿವೇಶನ ರಹಿತರ ಪಟ್ಟಿ ಸಿದ್ಧವಿದ್ದರೂ ಅರ್ಹರನ್ನು ಗುರುತಿಸಲು ಏನು ಕಷ್ಟ? ನೀತಿ ಸಂಹಿತೆ ಮುಗಿದ ಮೇಲೆ ಬೇರೇನು ಕೆಲಸ ಇತ್ತು ಎಂದು ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಉದಾಸೀನತೆಯು ಬಡವರಿಗೆ ಮನೆ ನಿರ್ವಿುಸಿಕೊಡುವಲ್ಲಿ ನಿಮಗೆ ಆಸಕ್ತಿ ಇಲ್ಲ ಎಂಬುದನ್ನು ತೋರಿಸುತ್ತದೆ. ಇದಕ್ಕೆ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರು ಹೊಣೆಗಾರರಾಗುತ್ತಾರೆ. ತಿಂಗಳ ಅಂತ್ಯದೊಳಗೆ ಪಟ್ಟಿ ಸಲ್ಲಿಸದಿದ್ದಲ್ಲಿ ಸರ್ಕಾರಕ್ಕೆ ವರದಿ ಮಾಡುತ್ತೇನೆ. ಅದರ ಪರಿಣಾಮ ಏನಾದೀತು ಎಂದು ಗೊತ್ತಿಲ್ಲ ಎಂದು ಎಚ್ಚರಿಸಿದರು.

ಹಿಂದೆ ಪಟ್ಟಿ ತಯಾರಿಸುವಾಗ ಬಿಟ್ಟುಹೋದವರ ಹೆಸರು ಸೇರ್ಪಡೆಗೆ ಗ್ರಾಪಂ ಸದಸ್ಯರಿಂದ ಒತ್ತಡವಿರುವ ಬಗ್ಗೆ ಬೆಳ್ಳೂರು ಗ್ರಾಪಂ ಪಿಡಿಒ ವೈ.ಸಂಪರಾಜ್ ನೀಡಿದ ಸಮಜಾಯಷಿಗೆ ಸಿಡಿಮಿಡಿಗೊಂಡ ಸಿಇಒ, ಹಿಂದೆಯೂ ನೀವೇ ಪಟ್ಟಿ ತಯಾರಿಸಿದ್ದು. ಬಿಟ್ಟು ಹೋಗಿದೆ ಎಂದರೆ ಅವರೇನು ಆಕಾಶದಿಂದ ಬಂದಿದ್ದಾರೆಯೇ? ಹೊಸದಾಗಿ ಯಾರ ಹೆಸರನ್ನೂ ಸೇರಿಸಬೇಡಿ ಎಂದು ತಾಕೀತು ಮಾಡಿದರು.

ನರೇಗಾದನ್ವಯ ಪಂಚಾಯಿತಿಗಳಿಗೆ ನಿಗದಿಪಡಿಸಿದ್ದ ಮಾನವದಿನ ಸೃಜನೆಯಲ್ಲಿ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ. ತೆರಿಗೆ ಪರಿಷ್ಕರಣೆಯಂತೆ ವಸೂಲಾತಿ ವಿಳಂಬವಾಗುತ್ತಿದೆ. ಕೆಲವೆಡೆ ವಸೂಲಾದ ಹಣ ಅಂದೇ ಬ್ಯಾಂಕ್ ಖಾತೆಗೆ ಜಮಾ ಮಾಡದಿರುವ ಬಗ್ಗೆ ದೂರು ಬಂದಿದ್ದು, ಹಣ ದುರುಪಯೋಗವಾದರೆ ಪಿಡಿಒಗಳೇ ಹೊಣೆಗಾರರು ಎಂದರು.

ಜಿಲ್ಲೆಯ 13 ಗ್ರಾಪಂ ವ್ಯಾಪ್ತಿಯಲ್ಲಿ ಘನ, ದ್ರವ ತ್ಯಾಜ್ಯ ಘಟಕ ಮಂಜೂರಾಗಿದ್ದು, ಸ್ಥಾಪನೆಗೆ ಜಾಗ ಸಿಕ್ಕಿಲ್ಲ ಎಂದು ನೆಪ ಹೇಳದೆ ತಹಸೀಲ್ದಾರ್ ಸಹಕಾರ ಪಡೆದು ಜಾಗ ಗುರುತಿಸುವಂತೆ ಸೂಚಿಸಿದ ಅವರು, ಹಾಸ್ಟೆಲ್​ಗಳಿಗೆ ನೋಡಲ್ ಅಧಿಕಾರಿಗಳಾಗಿ ನೇಮಕಗೊಂಡಿರುವ ಪಿಡಿಒಗಳು ಪ್ರತಿವಾರ ಭೇಟಿ ನೀಡಿ ಮಕ್ಕಳೊಂದಿಗೆ ರ್ಚಚಿಸಿ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.

ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಯೋಜನಾ ನಿರ್ದೇಶಕ ಮುನಿಕೃಷ್ಣ, ಸಹಾಯಕ ಯೋಜನಾ ನಿರ್ದೇಶಕ ವಸಂತ್ ಕುಮಾರ್ ಹಾಜರಿದ್ದರು.

Leave a Reply

Your email address will not be published. Required fields are marked *