ವಸತಿರಹಿತರಿಗೆ ಮನೆ, ಬಡ ಮಹಿಳೆಯರಿಗೆ ಉದ್ಯೋಗ

ರಾಮನಗರ: ನಗರದಲ್ಲಿ ಬೃಹತ್ ಗಾರ್ವೆಂಟ್ ಸ್ಥಾಪಿಸಿ ಬಡ ಮಹಿಳೆಯರಿಗೆ ಉದ್ಯೋಗ, ವಸತಿರಹಿತರಿಗೆ 3 ಸಾವಿರ ನಿವೇಶನ, ನಾಲ್ಕೈದು ಸಾವಿರ ಮನೆ ಕಟ್ಟಿಸಿಕೊಡಲು ಕ್ರಮ ಕೈಗೊಂಡಿದ್ದೇನೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಭರವಸೆ ನೀಡಿದರು.

ನಗರದ ಬೀಡಿ ಕಾರ್ವಿುಕರ ಕಾಲನಿಯಲ್ಲಿ 1 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಡ ಮಹಿಳೆಯರ ಕಲ್ಯಾಣಕ್ಕಾಗಿ ಅಭಿವೃದ್ಧಿ ಯೋಜನೆ ರೂಪಿಸಬೇಕೆಂಬ ಹಂಬಲವಿದೆ. ಆ ನಿಟ್ಟಿನಲ್ಲಿ ನಗರ ಪ್ರದೇಶದಲ್ಲಿ ಬೃಹತ್ ಗಾರ್ವೆಂಟ್ ಸ್ಥಾಪಿಸಿ, ಸಾವಿರಾರು ಬಡ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಿದ್ದೇನೆ. ಈ ಸಂಬಂಧ ಹೆಸರಾಂತ ಗಾರ್ವೆಂಟ್ ಸಂಸ್ಥೆ ಮುಖ್ಯಸ್ಥರೊಂದಿಗೆ ರ್ಚಚಿಸಿದ್ದೇನೆ. ಅವರು ಕೂಡ ಒಪ್ಪಿಕೊಂಡಿದ್ದಾರೆ. ಸರ್ಕಾರಿ ಜಾಗ ಗುರುತಿಸಿ, ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಬೃಹತ್ ಗಾರ್ವೆಂಟ್ ಕಾರ್ಖಾನೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಿವೇಶನರಹಿತ ಕೂಲಿ ಕಾರ್ವಿುಕರು, ದಲಿತರು, ಹಿಂದುಳಿದ ವರ್ಗಗಳ ಬಡವರಿಗೆ ನಿವೇಶನ ಕಲ್ಪಿಸುವ ಮತ್ತು ಅರ್ಹರಿಗೆ ಮನೆ ಕಟ್ಟಿಸಿಕೊಡುವ ಪ್ರಯತ್ನ ಕೂಡ ಸಾಗಿದೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಎಸ್​ಎಫ್​ಸಿಯಿಂದ ತಲಾ 10 ಕೋಟಿ ರೂ. ಮಂಜೂರು ಮಾಡಿಸಿದ್ದು, ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ. ಬೀಡಿ ಕಾಲನಿ ನಿವಾಸಿಗಳ ಬೇಡಿಕೆಯಂತೆ ಉದ್ಯಾನ, ಫಲಾನುಭವಿಗಳ ಹೆಸರಿಗೆ ಜಮೀನು ಖಾತೆ ಮಾಡಿಸಿಕೊಡುವುದು, ಕಲ್ಯಾಣ ಮಂಟಪ ಅಭಿವೃದ್ಧಿಗೆ ಅನುದಾನ ಸೇರಿ ಮೂಲಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ, ಕ್ರಿಯಾಯೋಜನೆ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಸೈಯದ್ ಜಿಯಾಉಲ್ಲಾ ಮಾತನಾಡಿ, ಬೀಡಿ ಕಾಲನಿಯಲ್ಲಿ 489 ಮನೆಗಳಿದ್ದು, ಈಗಲೂ ಈ ಮನೆಗಳು ರಾಜೀವ್​ಗಾಂಧಿ ವಸತಿ ನಿಗಮದ ಹೆಸರಿನಲ್ಲಿದೆ. ಅದನ್ನು ನಗರಸಭೆ ಹೆಸರಿಗೆ ಖಾತೆ ಮಾಡಿಸಿ, ಫಲಾನುಭವಿಗಳ ಹೆಸರಿಗೆ ಮಾಡಿಸುವ ಕಾರ್ಯವಾಗಬೇಕು. ಕಾಲನಿಯಲ್ಲಿ ನಿರ್ವಿುಸಲಾಗುತ್ತಿರುವ ಕಲ್ಯಾಣ ಮಂಟಪದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು. ಕುಡಿಯುವ ನೀರು ಇನ್ನಿತರ ಮೂಲಸೌಕರ್ಯ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಎಪಿಎಂಸಿ ಕಾರ್ಯಕ್ರಮ: ನಗರದ ಎಪಿಎಂಸಿಯ ರೈತ ಭವನ ಉದ್ಘಾಟನೆ ಮತ್ತು ಆರ್​ಕೆವಿವೈ ಯೋಜನೆಯಡಿ ನಿರ್ವಿುಸಿರುವ ಹರಾಜು ಮಾರುಕಟ್ಟೆ ಉದ್ಘಾಟನೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ನಂತರ ಮಾತನಾಡಿದ ಅನಿತಾ ಕುಮಾರಸ್ವಾಮಿ, ರೈತರ ಬಾಳು ಹಸನಾಗಲು ಬೆಳೆಗೆ ಯೋಗ್ಯ ಬೆಲೆ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ವಿಶೇಷ ಯೋಜನೆ ರೂಪಿಸಲು ಚಿಂತನೆ ನಡೆಸಿದ್ದಾರೆ ಎಂದರು.

ರಾಮನಗರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ವಿುಸಿ, ಮಾವು ಮತ್ತು ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ಮತ್ತು ಅಲ್ಲಿಯೇ ವರ್ತಕರಿಗೆ ವಹಿವಾಟು ಮಾಡಲು ಮತ್ತು ವಸತಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ ನೇತೃತ್ವದಲ್ಲಿ ನಿರ್ದೇಶಕರು ಎಪಿಎಂಸಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಎಪಿಎಂಸಿ ಉಪಾಧ್ಯಕ್ಷ ಮಲ್ಲೇಶ, ಮಾಜಿ ಅಧ್ಯಕ್ಷ ಪುಟ್ಟರಾಮಯ್ಯ, ನಿರ್ದೇಶಕರಾದ ಶಿವಕುಮಾರ, ವೆಂಕಟರಂಗಯ್ಯ, ಪುಟ್ಟಮಾರೇಗೌಡ, ರಮೇಶ ಇತರರು ಇದ್ದರು.

ರೇಷ್ಮೆಗೂಡು ಡಿಡಿ ವಿರುದ್ಧ ದೂರು: ಎಪಿಎಂಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಕೆಲ ರೈತರು ಭೇಟಿಯಾಗಿ ಸರ್ಕಾರಿ ರೇಷ್ಮೆ ಗೂಡುಗಳ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಬಗ್ಗೆ ದೂರಿದರು. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ದರ್ಬಾರು ಜಾಸ್ತಿಯಾಗಿದೆ. ಅಧಿಕಾರಿಗಳೇ ದಲ್ಲಾಳಿಗಳೊಂದಿಗೆ ಸೇರಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಇತ್ತೀಚೆಗೆ ಪಾಸ್​ಬುಕ್ ತರದ ರೈತನಿಗೆ ರೇಷ್ಮೆ ಹರಾಜಿಗೆ ಅವಕಾಶ ಕೊಡದೆ ಆತನಿಗೆ ನಷ್ಟ ಉಂಟಾಗುವಂತೆ ಮಾಡಿದ್ದಾರೆ. ಇದಕ್ಕೆ ರೇಷ್ಮೆ ಇಲಾಖೆ ಉಪ ನಿರ್ದೇಶಕರ ನಿರ್ಲಕ್ಷ್ಯವೇ ಕಾರಣ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಶಿವಕುಮಾರ ತುಂಬೇಹಳ್ಳಿ ನೇತೃತ್ವದಲ್ಲಿ ರೈತರು ಶಾಸಕರನ್ನು ಒತ್ತಾಯಿಸಿದರು.

ನಿರಾಶ್ರಿತರ ಭೇಟಿ: ನಗರದ ರೈಲ್ವೆ ಹಳಿ ಬಳಿ ಮನೆ ಕಳೆದುಕೊಂಡ ನಿರಾಶ್ರಿತರನ್ನು ಭೇಟಿ ಮಾಡಿದ ಶಾಸಕರು,ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದರು. ನಿರಾಶ್ರಿತರಿಗೆ ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಮಧ್ಯಾಹ್ನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Leave a Reply

Your email address will not be published. Required fields are marked *