More

    ವಸ್ತುಪ್ರದರ್ಶನ ಮೈದಾನದಲ್ಲಿ ವರ್ಷಪೂರ್ತಿ ಕಾರ್ಯಕ್ರಮಕ್ಕೆ ಯೋಜನೆ: ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾಹಿತಿ

    ಮೈಸೂರು: ಕರ್ನಾಟಕ ವಸ್ತುಪ್ರದರ್ಶನದ ಪ್ರದರ್ಶನಗಳು ದಸರಾ ಸಂದರ್ಭದ ಮೂರ್ನಾಲ್ಕು ತಿಂಗಳಿಗೆ ಸೀಮಿತವಾಗಿದ್ದು, ವರ್ಷಪೂರ್ತಿ ಚಟುವಟಿಕೆಯಿಂದಿರಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾಹಿತಿ ನೀಡಿದರು.
    ಇನ್ನು ಮುಂದೆ ಮೈಸೂರಿನ ಇತರ ಸ್ಥಳಗಳಲ್ಲಿ ನಡೆಯುವ ವಸ್ತುಪ್ರದರ್ಶನಗಳು ಪ್ರಾಧಿಕಾರದ ಆವರಣದಲ್ಲಿಯೇ ಆಯೋಜಿಸಲು ನಿಯಮ ರೂಪಿಸಬೇಕು, ನಗರದ ಬೇರೆ, ಬೇರೆ ಮೈದಾನಗಳಲ್ಲಿ ವಸ್ತುಪ್ರದರ್ಶನ ನಡೆಸಲು ಪರವಾನಗಿ ನೀಡಬಾರದು ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಲಾಗಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಯಾರೇ ವಸ್ತುಪ್ರದರ್ಶನದ ಮಾಡಲು ಮುಂದೆ ಬಂದರೆ ನಮ್ಮ ಪ್ರಾಧಿಕಾರದ ಆವರಣದಲ್ಲಿಯೇ ಇಡಬೇಕು. ಅದಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಪ್ರಾಧಿಕಾರದ್ದಾಗಿದೆ. ಈ ರೀತಿಯಾಗಿ ಬೇರೆ ಬೇರೆ ಸ್ಥಳಗಳಲ್ಲಿ ಆಟದ ಮೈದಾನಗಳನ್ನು ಬಳಸಿಕೊಂಡು ಪ್ರದರ್ಶನ ಆಯೋಜಿಸುವುದರಿಂದ ಕ್ರೀಡಾಪಟುಗಳಿಗೆ, ಪಾರ್ಕಿಂಗ್ ವ್ಯವಸ್ಥೆಗೆ, ಕುಡಿಯುವ ನೀರು, ಟ್ರಾಫಿಕ್ ಇತ್ಯಾದಿ ಮೂಲ ಸಮಸ್ಯೆಗಳು ಎದುರಾಗುತ್ತವೆ ಎಂದು ಸಮಜಾಯಷಿ ನೀಡಿದರು.
    ವಸ್ತುಪ್ರದರ್ಶನದ ’ಎ’ ಬ್ಲಾಕ್‌ಅನ್ನು ಹೆರಿಟೇಜ್ ವಿನ್ಯಾಸ ಮಾಡಿ, ಪ್ರಸ್ತುತ ಇರುವ ಫೌಂಟೆನ್‌ಅನ್ನು ಮ್ಯೂಸಿಕಲ್ ಫೌಂಟೆನ್ ಅನ್ನಾಗಿ ಮಾಡಿ ಸಾರ್ವಜನಿಕರನ್ನು ಆಕರ್ಷಿಸಲಾಗುವುದು. ಇದರಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಲು ಸಹಕಾರಿಯಾಗಲಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದ್ದು, ಆಸಕ್ತರಿಂದ ಅರ್ಜಿಗಳು ದಾಖಲಾಗುತ್ತಿವೆ ಎಂದು ತಿಳಿಸಿದರು.
    ಮೈಸೂರಿನಲ್ಲಿ ಯೂನಿಟಿ ಮಾಲ್:
    ದೇಶಾದ್ಯಂತ ಯೂನಿಟಿ ಮಾಲ್ ಸ್ಥಾಪಿಸಲು ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜ್ಯಕ್ಕೆ 193 ಕೋಟಿ ರೂ. ಬಿಡುಗಡೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ಯೂನಿಟಿ ಮಾಲ್ ಸ್ಥಾಪಿಸಬೇಕು ಎಂಬ ಚಿಂತನೆ ಇತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ನಗರದ ವಸ್ತುಪ್ರದರ್ಶನ ಮೈದಾನದಲ್ಲಿ ಯೂನಿಟಿ ಮಾಲ್ ಸ್ಥಾಪಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗದು. ಇದರಲ್ಲಿ ಸಂಸದ ಪ್ರತಾಪ್‌ಸಿಂಹ ಅವರು ಪ್ರಚಾರಕ್ಕಾಗಿ ನಾನೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
    ಯೂನಿಟಿ ಮಾಲ್ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಮಳಿಗೆ ಇರಲಿದ್ದು, ಪ್ರಮುಖ ವಸ್ತುಗಳು, ದೇಶದ ಎಲ್ಲ ರಾಜ್ಯಗಳ ಪ್ರಮುಖ ಉತ್ಪನ್ನಗಳ ಪ್ರದರ್ಶನ ಮಾಡಲು ಮಳಿಗೆ ನಿರ್ಮಿಸಲಾಗುವುದು. ಈ ಮೂಲಕ ವರ್ಷಪೂರ್ತಿ ವಸ್ತುಪ್ರದರ್ಶನ ಇರಲಿದೆ. ಅಲ್ಲದೆ ಮ್ಯೂಸಿಕಲ್ ಫೌಂಟೆನ್, ಶಾಶ್ವತ ಕಟ್ಟಡಗಳನ್ನು ನಿರ್ಮಿಸಲು ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
    ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಜಿ.ಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts