ವಸಂತಕಾಲವಾಗಲಿ ಯೌವನ

| ಡಾ. ಪಾರ್ವತಿ ಜಿ. ಐತಾಳ್

ಮಕ್ಕಳು ಹೈಸ್ಕೂಲ್ ಮೆಟ್ಟಲು ಹತ್ತುವಷ್ಟರಲ್ಲಿ ಹದಿಹರೆಯಕ್ಕೆ ಬಂದಿರುತ್ತಾರೆ. ಹದಿಹರೆಯವೆಂದರೆ ಯೌವನದೊಳಕ್ಕೆ ಪ್ರವೇಶ ಪಡೆಯುವ ಹೊಸ್ತಿಲು. ಟೀನೇಜ್ ಇಸ್ ದಿ ಬೆಸ್ಟ್ ಏಜ್ ಅಥವಾ ಯೌವನವು ಜೀವನದ ವಸಂತ ಕಾಲ ಎಂದು ಹೇಳುತ್ತ ಹೇಳಿಕೆಯ ಒಳತಿರುಳನ್ನು ಅರ್ಥ ಮಾಡಿಕೊಳ್ಳದೆ ಜೀವನದಲ್ಲಿ ಪಡೆಯಬೇಕಾದ ಎಲ್ಲ ಸುಖಗಳನ್ನೂ ಯೌವನದಲ್ಲೇ ಸವಿಯಬೇಕು, ಯೌವನವನ್ನು ಬರಿದೆ ವ್ಯರ್ಥ ಮಾಡುವುದು ಮೂರ್ಖತನ ಎಂದು ಯುವಕ- ಯುವತಿಯರು ನಂಬುತ್ತಾರೆ. ಕ್ಷಣಿಕ ಸುಖಗಳ ಬೆನ್ನು ಹತ್ತಿ ಸವಿಯುವ ಧಾವಂತದಲ್ಲಿ ಎಂದಿಗೂ ತಿದ್ದಿಕೊಳ್ಳಲಾಗದ ಪ್ರಮಾದಗಳನ್ನು ಮಾಡಿ ಜೀವನವನ್ನು ನರಕಸದೃಶವಾಗಿ ಮಾಡುವವರು ಎಷ್ಟೋ ಮಂದಿ.

ಬಾಲ್ಯದಿಂದ ಹದಿಹರೆಯಕ್ಕೆ ದಾಟುವುದೆಂದರೆ ಏನು? ಪ್ರಮುಖ ಲಕ್ಷಣವೆಂದರೆ ದೇಹದ ಅಂಗಾಂಗಗಳು ನಿಧಾನವಾಗಿ ಬೆಳೆದು ಅರಳಿ ಕಾಂತಿಯುಕ್ತವಾಗಿ ವ್ಯಕ್ತಿಗೆ ಒಂದು ವಿಶಿಷ್ಟ ಬಗೆಯ ಸೌಂದರ್ಯವನ್ನು ನೀಡುತ್ತವೆ. ಅಲ್ಲದೆ ಮಾನಸಿಕವಾಗಿಯೂ ಬದಲಾವಣೆಗಳು ಅನುಭವಕ್ಕೆ ಬರುತ್ತವೆ. ಅದು ಅಸ್ಪಷ್ಟವಾದ ಲೈಂಗಿಕ ಬಯಕೆಗಳಿರಬಹುದು, ವಿರುದ್ಧ ಲಿಂಗದ ಸಾಂಗತ್ಯ ಬೇಕೆಂಬ ಆಸೆಯಿರಬಹುದು, ಅಥವಾ ಸಮಾಜದ ಭಯದಿಂದಾಗಿ ಅವನ್ನು ತೀರಿಸಿಕೊಳ್ಳಲಾಗದಂತಹ ಅಸಹಾಯಕತೆ ಹತಾಶೆಯಾಗಿ ಮಾರ್ಪಟ್ಟಿರಬಹುದು. ಇಂತಹ ಆಂತರಿಕ ಸಂಘರ್ಷಗಳಿಂದಾಗಿ ಬಾಹ್ಯ ಸ್ವಭಾವದಲ್ಲೂ ಕಾಣಿಸಿಕೊಳ್ಳುವ ಸಿಟ್ಟು- ಅಸಹನೆಗಳಿರಬಹುದು. ಒಟ್ಟಿನಲ್ಲಿ ಮಕ್ಕಳ ಬೆಳವಣಿಗೆಯ ಒಂದು ಸಂಕಷ್ಟದ ಹಂತ ಹದಿಹರೆಯ. ಈ ಕಷ್ಟಗಳನ್ನು ಒಂದು ಸವಾಲಾಗಿ ಸ್ವೀಕರಿಸಿ ಒಳ್ಳೆಯದನ್ನಷ್ಟೇ ಮೈಗೂಡಿಸಿಕೊಂಡರೆ ಮುಂದಿನ ಯೌವನದ ಹಂತದಲ್ಲಿ ಬದುಕು ಸುಂದರವಾಗಿ ಅರಳುವಂತೆ ಮಾಡಲು ಸಾಧ್ಯ.

ಹದಿಹರೆಯದ ಆರಂಭದ ಹಪಾಹಪಿಗಳ ಬೆನ್ನಲ್ಲೇ ಶಾಲೆಯಲ್ಲಿ ಶಿಕ್ಷಣದ ಹೊರೆಯಲ್ಲೂ ಹೆಚ್ಚಳವಾಗುವುದು ಮಕ್ಕಳಿಗೆ ಗಾಯದ ಮೇಲೆ ಬರೆಯೆಳೆದಂತಾಗುತ್ತದೆ. ವಾಸ್ತವದಲ್ಲಿ ದೇಹದಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳಲು ಅವರಿಗೆ 2-3 ವರ್ಷಗಳೇ ಬೇಕಾಗುತ್ತದೆ. ಹೆಣ್ಣು ಮಕ್ಕಳಾದರೆ ಋತುಸ್ರಾವ-ಹೊಟ್ಟೆ ನೋವು, ಕಾಲುಗಳು ಜೋಮು ಹಿಡಿದಂತಾಗುವುದು. ಇವೆಲ್ಲವೂ ಅಸಹನೀಯ ಹಿಂಸೆಗಳು.

ಹುಡುಗರಿಗೆ ವೀರ್ಯೋತ್ಪಾದನೆ ಮತ್ತು ಅದನ್ನು ನಿಭಾಯಿಸುವ ವಿಚಾರದಲ್ಲಿ ತುಂಬಾ ಒದ್ದಾಡಬೇಕಾಗುತ್ತದೆ. ಪರಿಸ್ಥಿತಿಯ ವ್ಯಂಗ್ಯವೆಂದರೆ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ, ತಮ್ಮ ಈ ಹಂತದ ಕಷ್ಟಗಳನ್ನು ಯಾರ ಹತ್ತಿರವೂ ಹಂಚಿಕೊಳ್ಳಲಾರದ ಸ್ಥಿತಿಯೊಂದು ನಮ್ಮ ಸಮಾಜದಲ್ಲಿದೆ. ದೇಹದ ಜೈವಿಕತೆ ಮತ್ತು ಲೈಂಗಿಕತೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಆದ್ದರಿಂದ ಹೇಳಿಕೊಳ್ಳಲಾಗದ ಸಂಕಟದಲ್ಲಿ ಸಿಲುಕಿದ ಮಕ್ಕಳು ಇಂಥ ತೊಂದರೆಗಳಿಂದ ಬಿಡುಗಡೆ ಹೊಂದಲು ಕದ್ದು ಮುಚ್ಚಿ ಅಡ್ಡದಾರಿ ಹಿಡಿಯುತ್ತಾರೆ.

ವಿಜ್ಞಾನ-ತಂತ್ರಜ್ಞಾನಗಳು ವಿಪರೀತ ಮುಂದುವರಿದ ಇಂದಿನ ದಿನಗಳಲ್ಲಿ ಹದಿಹರೆಯದ ಮಕ್ಕಳನ್ನು ಲೈಂಗಿಕ ವಿಚಾರವಾಗಿ ಅಡ್ಡದಾರಿಗೆಳೆದು ದುಡ್ಡು ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡ ಹದ್ದಿನ ಕಣ್ಣಿನ ದುಷ್ಟ ಮಂದಿ ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಅಜೆಂಡಾಗಳಲ್ಲಿ ಮುಖ್ಯವಾದವು ಮದ್ಯಪಾನ, ಧೂಮಪಾನ, ಜೂಜು, ಹೆಣ್ಣಿನ ಸಂಗ, ಮಾದಕ ದ್ರವ್ಯಗಳು ಇತ್ಯಾದಿಗಳ ವಿಷವರ್ತಲದಲ್ಲಿ ಹದಿಹರೆಯದ ಮಕ್ಕಳು ಸಿಲುಕುವಂತೆ ಮಾಡುವುದು. ಇತ್ತೀಚೆಗೆ ಈ ಪಟ್ಟಿಗೆ ಸೇರಿಕೊಂಡ ಇನ್ನೊಂದು ಭಯಾನಕ ಆಟ ಬ್ಲೂ ವೇಲ್. ಒಳ್ಳೆಯ ಮನೆತನದಿಂದ ಬಂದ ಮಕ್ಕಳನ್ನೂ ಈ ಬಲೆಯಲ್ಲಿ ಕೆಡಹಿ ತಮ್ಮ ಸ್ವಾರ್ಥವನ್ನ ಇಂಥ ಕ್ರೂರ ಮನಸ್ಸಿನವರು ಸಾಧಿಸಿಕೊಳ್ಳುತ್ತಾರೆೆ. ಸಂಪರ್ಕ-ಸಾಂಗತ್ಯಗಳ ಮೂಲಕ ಈ ಜಾಲ ಸಾಂಕ್ರಾಮಿಕವಾಗುತ್ತದೆ. ತಿಳಿಯದೆ ಮಾಡಿದ ತಪ್ಪಿನಿಂದಾಗಿ ಎಷ್ಟೋ ಯುವಜನತೆ ತಮಗರಿವಿಲ್ಲದೆಯೇ ಏಡ್ಸ್​ನಂಥ ಮಾರಕ ಕಾಯಿಲೆಗಳಿಗೆ ತುತ್ತಾಗಿಯೋ ಮಾದಕ ದ್ರವ್ಯ ಸೇವನೆ ಬಿಡಲಾರದ ಸ್ಥಿತಿಗೋ ಹೊಗುವುದಿದೆ. ಮಕ್ಕಳ ಜೀವಹಾನಿಯ ತನಕ ಹೋಗುವ ಈ ವಿಷವರ್ತಲದ ಬಗ್ಗೆ ಹಿರಿಯರು ಎಚ್ಚರವಹಿಸ ಬೇಕಾಗುತ್ತದೆ.

ಖಿನ್ನರಾಗದಿರಿ: ಹದಿಹರೆಯದವರಿಗೆ ಸುಂದರವಾಗಿ ಕಾಣಿಸಿಕೊಳ್ಳಬೇಕು, ಎಲ್ಲರ ಮೆಚ್ಚುಗೆ ಸಂಪಾದಿಸಬೇಕು, ಒಳ್ಳೆಯ ಬಟ್ಟೆಬರೆ, ಆಭರಣಗಳನ್ನು ಹಾಕಿಕೊಳ್ಳಬೇಕೆಂಬ ಆಸೆಯಿರುತ್ತದೆ. ಆಸೆ ಕೈಗೂಡದಿದ್ದರೆ ಅವರು ಹತಾಶರಾಗುತ್ತಾರೆ. ಪಾಲಕರು ತಮ್ಮ ಆಸೆಗೆ ಅಡ್ಡಿ ಬಂದರೆ ಅವರ ಮೇಲೆ ಸಿಟ್ಟು ಬರುತ್ತದೆ. ಅವರ ಮನಸ್ಸನ್ನು ಖಿನ್ನತೆ ಆವರಿಸಿಕೊಳ್ಳುತ್ತದೆ. ಈ ಖಿನ್ನತೆ ಯಾವ ಸ್ಥಿತಿಗೂ ಹೋಗಬಹುದು.

ಎಷ್ಟೋ ಬಾರಿ ಕಾಲೇಜಿನ ಬದುಕೂ ಹದಿಹರೆಯದ ಯುವಕರ ದುಸ್ಥಿತಿಗೆ ಕಾರಣವಾಗಬಹುದು. ಮನೆಯಲ್ಲಿ ಕೆಲವು ಮಕ್ಕಳ ಶ್ರೀಮಂತ ಪಾಲಕರು ಅವರು ಕೇಳಿದಂತೆ ಹಣ ಕೊಟ್ಟು ಕಳುಹಿಸುವವರಿದ್ದಾರೆ. ಹಾಗೆ ನೋಡಿದರೆ ಅಂಥ ತಾಯ್ತಂದೆಯರಿಗೆ ಮಕ್ಕಳಿರುವುದೇ ಒಂದು ದೊಡ್ಡ ಹೊರೆ. ಅವರು ಮಕ್ಕಳಿಗೆ ಬೇಕಾದಂತೆ ಹಣ ಕೊಟ್ಟು ಅವರು ಅದನ್ನು ಹೇಗೆ ಖರ್ಚು ಮಾಡುತ್ತಾರೆಂಬುದನ್ನೂ ಗಮನಿಸದೆ ತಮ್ಮ ಸುಖವನ್ನಷ್ಟೇ ಕಂಡುಕೊಳ್ಳುತ್ತಾರೆ. ಹಿರಿಯರ ಯಾವ ರೀತಿಯ ಮಾರ್ಗದರ್ಶನವೂ ಇಲ್ಲದ ಅಂಥ ಮಕ್ಕಳು ಆರಂಭದಲ್ಲಿ ಅರಿವಿಲ್ಲದೆ ಕ್ಷಣಿಕ ಸುಖದ ಹಿಂದೆ ಬೀಳುತ್ತಾರೆ.

ಇಂದಿನ ಸಮೂಹ ಮಾಧ್ಯಮಗಳಲ್ಲಿ ಸಿಗುವ ಸುಖಸಾಧನಗಳು-ಇವೆಲ್ಲವೂ ಮಕ್ಕಳು ಲಂಗುಲಗಾಮಿಲ್ಲದೆ ಕಾಮಕೇಳಿಯಲ್ಲಿ ಮುಳುಗುವಂತೆ ಮಾಡುತ್ತವೆ. ಹೀಗೆ ಹಾಳಾದ ಮಕ್ಕಳು ಉತ್ತಮ ಸಂಸ್ಕಾರ ಹೊಂದಿದ ಕುಟುಂಬಗಳಿಂದ ಬಂದ ಇತರ ಮುಗ್ಧ ಮಕ್ಕಳನ್ನೂ ಸುಖದ ಆಮಿಷ ತೋರಿಸಿ ಸೆಳೆಯುತ್ತಾರೆ. ಮುಗ್ಧರನ್ನು ಹಾಳು ಮಾಡುವ ಮೂಲಕವೇ ಏನೋ ಕೆಟ್ಟ ಸುಖ ಪಡುತ್ತಾರೆ.

ಇರಲಿ ಸಜ್ಜನರ ಸಹವಾಸ: ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಹೇಳುವ ‘ಯೌವನದಲ್ಲಿ ಬೆಳೆಸಿಕೊಂಡ ಹವ್ಯಾಸಗಳು ಬದುಕನ್ನೇ ಭಿನ್ನವಾಗಿಸುತ್ತವೆ’ ಎಂಬ ಮಾತನ್ನು ನಾವು ಇಂದಿನ ಯುವಜನತೆಗೆ ಮತ್ತೆ ಮತ್ತೆ ನೆನಪಿಸಬೇಕಿದೆ.

‘ಬೆಳೆದು ದೊಡ್ಡವರಾಗಿ ನೀವು ನಿಜವಾಗಿ ಏನೆಂಬುದನ್ನು ಸಾಬೀತು ಪಡಿಸಲು ದಿಟ್ಟತನ ಬೇಕು’ ಎಂಬ ಮಾತನ್ನು ಇಂಗ್ಲಿಷ್ ಕವಿ ಇ.ಇ.ಕಮಿಂಗ್ಸ್ ಯುವಕರನ್ನುದ್ದೇಶಿಸಿ ಹೇಳುತ್ತಾನೆ. ಯೌವನ ಜೀವನದ ವಸಂತಕಾಲವೆನ್ನುವುದು ಖಂಡಿತ ಸುಳ್ಳಲ್ಲ. ಆದರೆ ಅದು ಸರಿಯಾದ ದಾರಿಯ ಅರಿವು ಮೂಡಿದಾಗ ಮಾತ್ರ. ದಾರಿ ತಪ್ಪಿಸುವವರ ಸಂಗ ಮಾಡಿ ಜಾರುವ ದಾರಿಯಲ್ಲಿ ಸಾಗಿದರೆ ಯೌವನ ನರಕದ ದಾರಿ ತೋರಿಸುತ್ತದೆ. ಅರಿವು ಮೂಡಿದರೆ ಅದು ವಸಂತ ಕಾಲವೇ. ಹದಿಹರೆಯದ ಶಕ್ತಿಯೇ ಅಂಥದ್ದು. ‘ನಮ್ಮ ಯುವಕರು ಉದ್ಯೋಗಕ್ಕಾಗಿ ಅಲೆಯುವವರಾಗ ಬಾರದು, ಬದಲಾಗಿ ಉದ್ಯೋಗ ಸೃಷ್ಟಿಸುವವರಾಗಬೇಕು’ ಎಂದು ಎ.ಪಿ.ಜೆ. ಅಬ್ದುಲ್ ಕಲಾಮ್ ಹೇಳಿದ್ದು ಇಂಥ ಯುವಕರ ಬಗ್ಗೆ. ಮನಸ್ಸೆಂಬ ಹುಚ್ಚು ಕುದುರೆಯ ಮೇಲೆ ಅಂಕೆಯನ್ನಿಟ್ಟುಕೊಂಡು ಮುಂದಿನ ಜೀವನದ ಗುರಿಯತ್ತ ಏಕಾಗ್ರತೆಯಿಂದ ಸಾಗಿ, ಗುರಿಯನ್ನು ಸಾಧಿಸುವ ದೃಢಚಿತ್ತದ ಯುವಕರ ಪಾಲಿಗೆ ಹದಿಹರೆಯವೆಂಬುದು ವಸಂತಕಾಲವಾಗಿಯೇ ಪರಿಣಮಿಸುತ್ತದೆ.

ಕಲುಷಿತ ಸಂಸ್ಕೃತಿ

ಸಾಂಸ್ಕೃತಿಕವಾಗಿ ಕಲುಷಿತಗೊಂಡ ಇಂದಿನ ಮಾಧ್ಯಮಗಳಿಂದಾಗಿ ದಿನೇದಿನೇ ನಮ್ಮ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಬಗೆಗಿನ ಪ್ರೀತಿ ಕಡಿಮೆಯಾಗುತ್ತಿದೆ. ಆಂಗ್ಲ ಭಾಷೆಯ ಮೇಲಿನ ಮೋಹ- ಆಂಗ್ಲ ಸಂಸ್ಕೃತಿಯ ಬಗೆಗಿನ ಭ್ರಮೆ ನಮ್ಮ ಮಕ್ಕಳ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತಿದೆ. ಸಂಗೀತವೆಂದರೆ ನರನಾಡಿಗಳಿಗೆ ಮತ್ತೇರಿಸುವ ಪಾಶ್ಚಾತ್ಯ ಪಾಪ್ ಸಂಗೀತ ಮತ್ತು ನೃತ್ಯವೆಂದರೆ ನಖಶಿಖಾಂತ ಮೈ ಕುಲುಕಾಡಿಸುವ ಬ್ರೇಕ್ ಡ್ಯಾನ್ಸ್ ಮಾತ್ರ ಎಂಬ ಭ್ರಮೆಯಲ್ಲಿ ಇಂದು ನಮ್ಮ ಯುವಜನಾಂಗವಿದೆ. ಭಾರತೀಯ ಶೈಲಿಯ ನೃತ್ಯ ಸಂಗೀತಗಳನ್ನು ನೆಚ್ಚಿಕೊಳ್ಳುವವರು ಅನಾಗರಿಕರೆಂಬ ಭಾವನೆ ಅವರಲ್ಲಿ ಬೆಳೆಯುತ್ತಿದೆ. ಮೈಮನಸ್ಸುಗಳ ಸ್ವಾಸ್ಥ್ಯ ಕಾಪಾಡುವ ಭಾರತೀಯ ನೃತ್ಯಗಳನ್ನು ಬಿಟ್ಟು ಕಾಮಪ್ರಚೋದಕವಾದ ಇಂಥ ಸಂಗೀತ ನೃತ್ಯಗಳನ್ನು ಪ್ರೀತಿಸುವ ಯುವಜನಾಂಗಕ್ಕೆ ತಾವು ಏನನ್ನು ಕಳೆದುಕೊಳ್ಳುತ್ತಿದ್ದೇವೆ ಅನ್ನುವುದೇ ಗೊತ್ತಿರುವುದಿಲ್ಲ. ಇಂಥ ಅಜ್ಞಾನವೇ ಇವತ್ತು ಯುವಜನಾಂಗದಲ್ಲಿ ತುಂಬಿಕೊಳ್ಳುತ್ತಿರುವುದು ವಿಷಾದನೀಯ.

ಪಾಲಕರು ಉದಾಸೀನ ತೋರದಿರಲಿ

ಮಕ್ಕಳ ಹದಿಹರೆಯದ ಆರಂಭದಲ್ಲಿ ಹಿರಿಯರು ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯದಿದ್ದರೆ ಮುಂದಿನ ಹಂತದಲ್ಲಿ ಕಾಲೇಜು ವಿದ್ಯಾಭ್ಯಾಸಕ್ಕೆಂದು ಅವರು ಹೋದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು. ಹೈಸ್ಕೂಲಿನಲ್ಲಾದರೆ ಸ್ವಲ್ಪಮಟ್ಟಿಗಾದರೂ ಅಧ್ಯಾಪಕರು ಮಕ್ಕಳ ವೈಯಕ್ತಿಕ ಸ್ವಭಾವ, ಚಲನ-ವಲನಗಳ ಕಡೆಗೆ ಗಮನವಿಡುತ್ತಾರೆ. ಆದರೆ ಕಾಲೇಜು ಹಂತದಲ್ಲಿ ಅದು ಸಾಧ್ಯವಾಗುವುದಿಲ್ಲ. ಅಲ್ಲಿ ಉಪನ್ಯಾಸಕರು ಅವರಷ್ಟಕ್ಕಿರುತ್ತಾರೆ. ಮಕ್ಕಳು ತರಗತಿಗೆ ಬಂದಿದ್ದಾರೆಯೇ, ಬಾರದಿದ್ದರೆ ಯಾಕೆ ಬಂದಿಲ್ಲ, ಅವರು ಮನೆಯಿಂದ ಹೊರಟು ಬಂದು ಬೇರೆಲ್ಲಾದರೂ ಹೋಗಿದ್ದಾರೆಯೇ ಮುಂತಾದ ವಿಚಾರಗಳ ಕಡೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ದೊಡ್ಡ ದೊಡ್ಡ ತರಗತಿಗಳಲ್ಲಿ ಹಾಗೆ ಮಾಡುವುದು ಸಾಧ್ಯವಾಗುವುದೂ ಇಲ್ಲ. ಇದರಿಂದಾಗಿ ಮಕ್ಕಳು ದುರಭ್ಯಾಸಗಳನ್ನು ಬೆಳೆಸಿಕೊಂಡರೆ ಅವರನ್ನು ತಡೆಯುವವರಿಲ್ಲ. ಹಿರಿಯರ ಗಮನಕ್ಕೆ ಬರುವಾಗ ಕಾಲ ಮಿಂಚಿ ಹೋಗಿರುತ್ತದೆ.

Leave a Reply

Your email address will not be published. Required fields are marked *