Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ವರ್ಷ ಕಳೆದರೂ ಕೆಡದ ಪ್ರಸಾದ!

Thursday, 07.12.2017, 3:02 AM       No Comments

| ಪ್ರಶಾಂತ ರಿಪ್ಪನ್​ಪೇಟೆ

ವಿಜ್ಞಾನ ಮತ್ತು ಪ್ರಕೃತಿಯನ್ನು ಮೀರಿದ ಕೆಲವು ಸನ್ನಿವೇಶಗಳು ಆಗಾಗ ಅಗೋಚರ ಶಕ್ತಿಯ ಬಗ್ಗೆ ನಂಬಿಕೆ ಮೂಡಿಸುತ್ತವೆ. ಆಸ್ತಿಕರು ಅದನ್ನು ದೈವಕೃಪೆ ಎಂದು ಕರೆದರೆ, ನಾಸ್ತಿಕರಿಗೆ ಮೌನದ ಮೊರೆಹೋಗದೆ ಬೇರೆ ದಾರಿ ಇಲ್ಲ. ಅಂತಹದೊಂದು ದೈವಕೃಪೆಯ ವಿಶಿಷ್ಟ ಕ್ಷೇತ್ರ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಾವರೆಕೆರೆ.

ಮನುಷ್ಯ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಲವಾರು ಯಂತ್ರಗಳನ್ನು ಕಂಡುಹಿಡಿದಿದ್ದಾನೆ. ಅಂತಹವುಗಳಲ್ಲಿ ಬಹುತೇಕ ಎಲ್ಲರ ಮನೆಗಳಲ್ಲಿ ಇರುವ ಯಂತ್ರ ಫ್ರಿಜ್. ತರಕಾರಿ, ಹಣ್ಣು, ಕೆಲವು ಆಹಾರಪದಾರ್ಥಗಳನ್ನು ಫ್ರಿಜ್​ನಲ್ಲಿ ಮೂರು-ನಾಲ್ಕು ದಿನ ಅಥವಾ ಹೆಚ್ಚೆಂದರೆ ಒಂದು ವಾರ ಕಾಲ ರಕ್ಷಿಸಿಡಬಹುದು. ಆದರೆ ತಾವರೆಕೆರೆ ಶಿಲಾಮಠದಲ್ಲಿ ಒಂದು ವರ್ಷವಾದರೂ ಆಹಾರಪದಾರ್ಥ ಕೆಡದಿರುವುದು ಮಾತ್ರ ಅಚ್ಚರಿಯ ಸಂಗತಿ. ತಾವರೆಕೆರೆ ಶಿಲಾಮಠದ ಮೂಲ ದೈವವಾದ ಬಸವಾರೂಢ ಉಮಾಮಹೇಶ್ವರನಿಗೆ ನಿತ್ಯ ವಿಶೇಷ ಪೂಜೆ ನಡೆಯುತ್ತದೆ. ವರ್ಷಕ್ಕೆ ಒಮ್ಮೆ ಮಾರ್ಗಶಿರ ಮಾಸದಲ್ಲಿ ವಿಜೃಂಭಣೆಯಿಂದ ಮಹೇಶ್ವರಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಬೇರೆಲ್ಲ ಉತ್ಸವ, ಆಚರಣೆಗಳಿಗಿಂತ ಹೆಚ್ಚು ಗಮನ ಸೆಳೆಯುವುದು; ವರ್ಷ ಕಳೆದರೂ ಕೆಡದೆ ಹಾಗೆ ಇರುವ ಪ್ರಸಾದ.

ಮಹೇಶ್ವರ ಜಾತ್ರೆ ಧಾರ್ವಿುಕ ಪರಂಪರೆಯ ಜೊತೆಗೆ ವೈಜ್ಞಾನಿಕ ಹಿನ್ನೆಲೆ ಹೊಂದಿದೆ. ಸಾತ್ವಿಕ ಆಹಾರದ ಮೂಲಕ ದೈಹಿಕ ಆರೋಗ್ಯವನ್ನು ಪಡೆಯುವ ವಿಧಾನ. ಬಾಳೆಯಹಣ್ಣು, ಹೆಸರುಕಾಳು ಪುಡಿ, ಬೆಲ್ಲ, ಹಾಲನ್ನು ಬೆರೆಸಿ ಜಾತ್ರೆಗೆ ಬರುವ ಪುರುಷರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ನಂತರ ಉಳಿದ ಪ್ರಸಾದವನ್ನು ಪದ್ಧತಿಯಂತೆ ನಿಗದಿತ ಗುಂಡಿಯೊಂದರಲ್ಲಿ ಹಾಕಿ ಮುಚ್ಚಲಾಗುತ್ತದೆ. ಮುಂದಿನ ವರ್ಷದ ಜಾತ್ರೆಯಂದು ಆ ಗುಂಡಿಯನ್ನು ತೆರೆದು ನೋಡಿದರೆ ಕಳೆದ ವರ್ಷದ ಆಹಾರಪದಾರ್ಥ ಕೆಡದೆ ಹಾಗೆಯೇ ಇರುತ್ತದೆ. ಊಟಕ್ಕೆ ಬಳಸಿದ ಬಾಳೆಎಲೆ ಕೂಡ ಹಸಿರಾಗಿರುತ್ತದೆ. ಜಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಜನರು ಇದನ್ನು ಕಣ್ಣಾರೆ ಕಂಡು ಅಚ್ಚರಿಗೊಳಗಾಗುತ್ತಾರೆ.

ಇದೇ ಡಿ. 11ರಿಂದ 13ರವರೆಗೆ ಜಾತ್ರೆ ನಡೆಯಲಿದ್ದು, ಜಗದ್ಗುರು ರೇಣುಕಾಚಾರ್ಯರಿಗೆ ರುದ್ರಾಭಿಷೇಕ, ಉಮಾಮಹೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವ, ವೀರಭದ್ರಸ್ವಾಮಿಗೆ ಗುಗ್ಗುಳಸೇವೆ ಸೇರಿದಂತೆ ಹಲವು ಧಾರ್ವಿುಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಬೇಡಿಕೆಗಳಿಗಾಗಿ ಹರಕೆ ಹೊತ್ತ ಸಾವಿರಾರು ಭಕ್ತರು ಜಾತ್ರೆ ವೇಳೆಯಲ್ಲಿ ಹರಕೆ ತೀರಿಸುತ್ತಾರೆ.

16 ಕೆರೆಗಳ ನಡುವಿನ ಗ್ರಾಮ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯ ಹಿಂದಿನ ಹೆಸರು ಕಮಲಾವತಿ ಪಟ್ಟಣ. ಈ ಗ್ರಾಮದ ಸುತ್ತ ಸರಿಸುಮಾರು 16 ಕೆರೆಗಳಿರುವ ಉಲ್ಲೇಖವಿದೆ. ಬೃಹತ್ ಕೆರೆಗಳಲ್ಲಿ ಹೇರಳವಾಗಿ ಕಮಲದ ಹೂವುಗಳು ಇದ್ದುದ್ದರಿಂದ ಈ ಗ್ರಾಮಕ್ಕೆ ಕಮಲಾವತಿ ಪಟ್ಟಣ ಎಂತಲೂ, ಅದೇ ಹೆಸರು ಆಡುಮಾತಿನಲ್ಲಿ ತಾವರೆಕೆರೆ ಎಂತಲೂ ಪ್ರಸಿದ್ಧವಾಗಿದೆ. ಕೆಳದಿ ಅರಸರ ಆಳ್ವಿಕೆಗೊಳಪಟ್ಟಿದ್ದ ಈ ಪ್ರದೇಶದಲ್ಲಿ ಉಂಬ್ರಾಣಿ ಕೋಟೆ ಇದೆ. ಹಿಂದೆ ವೀರಬಲ್ಲಾಳನೆಂಬ ಸಾಮಂತರಾಜ ಆಳ್ವಿಕೆ ನಡೆಸಿದ್ದು, ಆತನ ಕಾಲದಲ್ಲಿಯೇ ಇಲ್ಲಿ ಶಿಲಾಮಠವನ್ನು ನಿರ್ವಿುಸಲಾಗಿದೆ ಎನ್ನಲಾಗುತ್ತದೆ. ಮಠವನ್ನು ಬೃಹತ್ ಕಲ್ಲಿನ ಹಾಸುಗಳು, ಕಲ್ಲಿನ ಕಂಬ ಮತ್ತು ಕಲ್ಲಿನ ಗೋಡೆಗಳಿಂದ ನಿರ್ವಿುಸಿರುವುದರಿಂದ ಶಿಲಾಮಠವೆಂದೇ ಪ್ರಸಿದ್ಧಿಯಾಗಿದೆ. ಶ್ರೀಮಠವು ಸುಮಾರು 12-13ನೇ ಶತಮಾನದಿಂದಲೂ ಧಾರ್ವಿುಕ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದೆ.

ಕ್ಷೇತ್ರದ ಇತಿಹಾಸ

ತಾವರೆಕೆರೆ ಶಿಲಾಮಠವು ಧಾರ್ವಿುಕವಾಗಿ, ಸಾಮಾಜಿಕವಾಗಿ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಲ್ಲಿ ಆಗಿಹೋಗಿರುವ ಸ್ವಾಮಿಗಳು ಮಹಾ ತಪಸ್ವಿಗಳಾಗಿ, ಅಧ್ಯಾತ್ಮಸಾಧಕರಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಎಂಟು ಜನ ಸ್ವಾಮಿಗಳ ಜೀವಂತ ಸಮಾಧಿ ಮಠದಲ್ಲಿದೆ. ಶಿಲಾಮಠದ ಗುರುಪರಂಪರೆಯಲ್ಲಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಅದ್ವಿತೀಯರು. 1918ರಿಂದ 1971ರವರೆಗೆ 53 ವರ್ಷ ಮಠವನ್ನು ಮುನ್ನಡೆಸಿದ ಪೂಜ್ಯರು ಮಹಾತಪಸ್ವಿಗಳಾಗಿದ್ದರು. ವಿಶೇಷವಾಗಿ ಅಥರ್ವಣವೇದ ಪಾರಂಗತರಾಗಿದ್ದ ಪೂಜ್ಯರು ಆ ಕಾಲದಲ್ಲಿದ್ದ ಮಾಟಮಂತ್ರಗಳನ್ನು ಬಯಲಿಗೆಳೆದು ಮುಗ್ಧರಿಗೆ ಧರ್ಮಮಾರ್ಗವನ್ನು ಬೋಧಿಸುವುದರ ಜೊತೆಗೆ ಹಲವು ಸಾಂಕ್ರಮಿಕ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದರು.

ಇವರ ಉತ್ತರಾಧಿಕಾರಿಯಾಗಿ ಶ್ರೀಮಠಕ್ಕೆ ಆಯ್ಕೆಯಾದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು ನಾಡಿನ ಸಾವಿರಾರು ಶಿವಾಚಾರ್ಯರಿಗೆ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಡಿಕೆ, ತೆಂಗು, ಬಾಳೆ ತೋಟಗಳನ್ನು ಬೆಳೆಸಿ ಶಿಲಾಮಠವನ್ನು ಕೃಷಿಯತ್ತ ಕೊಂಡೊಯ್ದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಇವರ ಸೇವೆ ಅಪಾರ. ಇವರು ಯಡಿಯೂರು ಮಠಕ್ಕೆ ಅಧ್ಯಕ್ಷರಾಗಿ ಹೋದ ನಂತರ ಕಿರಿಯ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಠವನ್ನು ಮುನ್ನಡೆಸುತ್ತಿದ್ದಾರೆ.

ಹೋಗುವ ಮಾರ್ಗ

ಮಠವು ಬೆಂಗಳೂರಿನಿಂದ 260 ಕಿ.ಮೀ. ದೂರವಿದ್ದು, ಬಿಎಚ್ ರಸ್ತೆಯ ಮೂಲಕ ಬೀರೂರು ಮಾರ್ಗವಾಗಿ ಅಜ್ಜಂಪುರಕ್ಕೆ ಹೋಗಿ ಅಲ್ಲಿಂದ 18 ಕಿ.ಮೀ. ಕ್ರಮಿಸಿ ತಾವರೆಕೆರೆ ತಲುಪಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕ: 9902506757

Leave a Reply

Your email address will not be published. Required fields are marked *

Back To Top