ವರ್ಷಾಂತ್ಯಕ್ಕೆ ಸಿಗಲಿದೆ ಹೆಚ್ಚುವರಿ ನೀರು

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಸಮಸ್ಯೆ ನವೆಂಬರ್-ಡಿಸೆಂಬರ್​ವರೆಗೆ ಬಗೆಹರಿಯುವ ಸಾಧ್ಯತೆ ಇದೆ. ಆ ಹೊತ್ತಿಗೆ ಎಲ್ಲ ಭಾಗಕ್ಕೆ 4-5 ದಿನಕ್ಕೊಮ್ಮೆ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅಮ್ಮಿನಬಾವಿಯಲ್ಲಿನ ಜಲ ಸಂಗ್ರಹಾಗಾರ ಮತ್ತು ಸವದತ್ತಿಯ ಮಲಪ್ರಭಾ ಜಲಾಶಯಕ್ಕೆ ಸೋಮವಾರ ಭೇಟಿ ನೀಡಿ, 26 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿ ಪರಿಶೀಲಿಸಿದ ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಮಲಪ್ರಭಾ ಜಲಾಶಯದಿಂದ ನಿತ್ಯ 170 ಎಂಎಲ್​ಡಿ (ದಶಲಕ್ಷ ಲೀ.) ನೀರು ಎತ್ತಲಾಗುತ್ತಿದೆ. 26 ಕೋಟಿ ರೂ.ಗಳಲ್ಲಿ ಹೆಚ್ಚುವರಿಯಾಗಿ 40 ಎಂಎಲ್​ಡಿ ನೀರು ಸಂಗ್ರಹಿಸಲು ಬೇಕಾದ ಉಪಕರಣಗಳನ್ನು ಅಳವಡಿಸಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

ಜಲಾಶಯದಿಂದ ಹೆಚ್ಚುವರಿ ನೀರು ಸಂಗ್ರಹದಿಂದಾಗಿ ಅವಳಿನಗರಕ್ಕೆ 3-4 ದಿನಗಳಿಗೊಮ್ಮೆ ನೀರು ಪೂರೈಸಬಹುದು. ಮೂಲ ಯೋಜನೆ ಪ್ರಕಾರ 2020ರ ಜನವರಿ-ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ತ್ವರಿತವಾಗಿ ಕಾಮಗಾರಿ ಮುಗಿಸಿ, ನವೆಂಬರ್-ಡಿಸೆಂಬರ್ ವೇಳೆಗೆ ಹೆಚ್ಚುವರಿ ನೀರು ಪೂರೈಸಲು ತಾವು ಸೂಚಿಸಿದ್ದಾಗಿ ತಿಳಿಸಿದರು. ಸದ್ಯ ಜಲಾಶಯದಿಂದ ಸಂಗ್ರಹಿಸುತ್ತಿರುವ 170ರಲ್ಲಿ ಹುಬ್ಬಳ್ಳಿಗೆ 100 ಎಂಎಲ್​ಡಿ, ಧಾರವಾಡಕ್ಕೆ 65 ಎಂಎಲ್​ಡಿ ಹಾಗೂ ಅಮ್ಮಿನಬಾವಿ ಸುತ್ತಲಿನ ಕೆಲ ಗ್ರಾಮಗಳಿಗೆ 5 ಎಂಎಲ್​ಡಿ ನೀರು ಪೂರೈಸಲಾಗುತ್ತಿದೆ.

24/7 ನೀರಿನ ಸಂಪರ್ಕ ನೀಡಲು ರಾಜ್ಯ ಸರ್ಕಾರ ಹೊಸತಾಗಿ ಟೆಂಡರ್ ಕರೆದಿದೆ. ಈಗಾಗಲೇ ಅವಳಿನಗರದಲ್ಲಿರುವ 1.60 ಲಕ್ಷ ನಳಗಳ ಸಂಪರ್ಕದಲ್ಲಿ 70 ಸಾವಿರ ನಳಗಳು ನಿರಂತರ ನೀರು ಪೂರೈಕೆ ವಾರ್ಡಿನಲ್ಲಿವೆ ಎಂದು ತಿಳಿಸಿದರು. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮೇಯರ್ ವೀರಣ್ಣ ಸವಡಿ, ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಪಾಲಿಕೆ ಆಯುಕ್ತ ಪ್ರಶಾಂತಕುಮಾರ ಮಿಶ್ರಾ, ಜಲಮಂಡಳಿ ಮುಖ್ಯ ಅಭಿಯಂತರ ರಾಜು ಡಿ.ಎಲ್. ಮತ್ತಿತರರಿದ್ದರು.

2 ಪಂಪಿಂಗ್ ಯಂತ್ರ ಸ್ಥಾಪನೆ: 26 ಕೋಟಿ ರೂ.ಗಳಲ್ಲಿ ಮಲಪ್ರಭಾ ಜಲಾಶಯದಲ್ಲಿ ಒಂದು ಪಂಪಿಂಗ್ ಮಷಿನ್, ಅಮ್ಮಿನಬಾವಿಯಲ್ಲಿ ಒಂದು ಪಂಪಿಂಗ್ ಯಂತ್ರ ಸ್ಥಾಪನೆ ಹಾಗೂ ನೀರು ಶುದ್ಧೀಕರಣ ಘಟಕ ನಿರ್ವಿುಸಲಾಗುತ್ತಿದೆ. ಈ ಕೆಲಸ ಪೂರ್ಣಗೊಂಡಲ್ಲಿ ಮಲಪ್ರಭಾ ಜಲಾಶಯದಿಂದ ಹೆಚ್ಚುವರಿಯಾಗಿ ನಿತ್ಯ 40 ಎಂಎಲ್​ಡಿ ನೀರು ಸಂಗ್ರಹಿಸಬಹುದಾಗಿದ್ದು, ಈ ನೀರಿನ ಬಹುತೇಕ ಪ್ರಮಾಣವನ್ನು ಹುಬ್ಬಳ್ಳಿಗೆ ಪೂರೈಸಲು ನಿರ್ಧರಿಸಲಾಗಿದೆ. ಇದರಿಂದ ನೀರಸಾಗರ ಜಲಾಶಯದ ಮೇಲಿನ ಅವಲಂಬನೆ ತಪ್ಪಿದಂತಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದರು.

ಮಲಪ್ರಭಾ ನೀರು ಜುಲೈವರೆಗೆ ಮಾತ್ರ!: ಮಲಪ್ರಭಾ ಜಲಾಶಯದಲ್ಲಿ ಸದ್ಯ ಸಂಗ್ರಹ ಇರುವ ನೀರು ಜುಲೈ ಅಂತ್ಯದವರೆಗೆ ಮಾತ್ರ ಸಾಕಾಗುತ್ತಿದ್ದು, ಶೀಘ್ರ ಮಳೆ ಸುರಿಯದಿದ್ದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಕುಂದಗೋಳ, ಧಾರವಾಡ, ನವಲಗುಂದ, ಅಣ್ಣಿಗೇರಿ ತಾಲೂಕಿನ ಕೆಲ ಗ್ರಾಮಗಳು, ಸವದತ್ತಿ, ರಾಮದುರ್ಗ, ಬಾಗಲಕೋಟ, ರೋಣ, ನರಗುಂದದ ಬಹುತೇಕ ಗ್ರಾಮೀಣ ಪ್ರದೇಶ ಮಲಪ್ರಭಾ ನದಿ ನೀರನ್ನೇ ಅವಲಂಬಿಸಿವೆ. ಈ ಎಲ್ಲ ಭಾಗಕ್ಕೆ ಕೇವಲ ಕುಡಿಯುವ ನೀರಿಗಾಗಿ ನಿತ್ಯ 50 ಕ್ಯೂಸೆಕ್ಸ್ ಬೇಕಾಗುತ್ತದೆ.

ಮಲಪ್ರಭಾ ಜಲಾಶಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ 0.9 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. 3.38 ಟಿಎಂಸಿ ನೀರು ಡೆಡ್ ಸ್ಟೋರೇಜ್ ಎಂದು ಪರಿಗಣಿತವಾಗಿದ್ದು, ಇದರ ಬಳಕೆ ಅಪರೂಪ. ಸಕಾಲದಲ್ಲಿ ಮಳೆಯಾಗದಿದ್ದರೆ ಜಾಕ್​ವೆಲ್ ಕೆಳಗಿಳಿಸಿ, ಡೆಡ್​ಸ್ಟೋರೇಜ್​ನಲ್ಲಿರುವ ನೀರನ್ನೂ ಬಳಸುವ ಪ್ರಸಂಗ ಬರುತ್ತದೆ. ಅವಳಿನಗರವಲ್ಲದೇ ಧಾರವಾಡ ಜಿಲ್ಲೆಯ 34 ಹಳ್ಳಿಗಳಿಗೆ ಮಲಪ್ರಭಾ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ಇದರೊಂದಿಗೆ ಕಿಮ್್ಸ, ರೈಲ್ವೆ ಇಲಾಖೆ, ಹೈಕೋರ್ಟ್, ಕೈಗಾರಿಕೆಗಳಿಗೆ ನಿತ್ಯ 15 ಎಂಎಲ್​ಡಿ ನೀರು ಪೂರೈಸಲಾಗುತ್ತಿದೆ. ಜಿಲ್ಲೆಗೆ ಪ್ರತಿ ತಿಂಗಳಿಗೆ 0.2 ಟಿಎಂಸಿ ನೀರಿನ ಅಗತ್ಯವಿದ್ದು, ವರ್ಷಕ್ಕೆ 2 ಟಿಎಂಸಿ ನೀರು ಬೇಕಾಗುತ್ತದೆ. ಜಲಾಶಯದಿಂದ ವಿವಿಧೆಡೆ ಇರುವ ಕಾಲುವೆಗಳಿಗೆ ರೈತರು ಕೃಷಿ ಬಳಕೆಗಾಗಿ ಪಂಪ್​ಸೆಟ್ ಜೋಡಿಸಿದ್ದು, ಅಲ್ಲಿಯೂ ಸಾಕಷ್ಟು ನೀರು ಬಳಕೆಯಾಗುತ್ತದೆ. ಈಗಾಗಲೇ ಜಲಾಶಯದ ಹಿನ್ನೀರಿನ ಪ್ರದೇಶ ಒಣಗುತ್ತಿದ್ದು, ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಕುಡಿಯುವ ನೀರಿಗೆ ಹಾಹಾಕಾರ ಉದ್ಭವಿಸುವ ಆತಂಕ ಇದೆ. ಮಲಪ್ರಭಾ ನೀರಿನ ಮೇಲೆ ಅವಲಂಬಿತರಾಗಿರುವ ರೈತರ ಪರಿಸ್ಥಿತಿಯೂ ಕಠಿಣವಾಗಲಿದೆ.

Leave a Reply

Your email address will not be published. Required fields are marked *