ವರ್ಷಕ್ಕೆರಡು ಬಾರಿ ರಕ್ತ ನೀಡಿ ಕೊರತೆ ನೀಗಿಸಿ

ಕೋಲಾರ: ಹದಿನೆಂಟು ವರ್ಷ ಮೇಲ್ಪಟ್ಟ ಆರೋಗ್ಯವಂತರು ವರ್ಷಕ್ಕೆ ಕನಿಷ್ಠ ಎರಡು ಸಲ ರಕ್ತದಾನ ಮಾಡಿದರೆ ಜಿಲ್ಲೆಯ ರಕ್ತದ ಕೊರತೆ ನೀಗಿಸಬಹುದು ಎಂದು ಡಿಎಚ್​ಒ ಡಾ.ಎಸ್.ಎನ್.ವಿಜಯಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆಯಿಂದ ಚನ್ನೇಗೌಡ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಸಮಾರಂಭದಲ್ಲಿ ರಕ್ತದಾನಿಗಳನ್ನು ಸನ್ಮಾನಿಸಿ ಮಾತನಾಡಿ, ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಅಂದರೆ ವಾರ್ಷಿಕ 16,000 ಯೂನಿಟ್ ರಕ್ತ ಅವಶ್ಯಕತೆಯಿದ್ದರೂ ಸಂಗ್ರಹ ಕಡಿಮೆ ಇರುವುದರಿಂದ ರಕ್ತದಾನಕ್ಕೆ ಮುಂದೆ ಬಂದರೆ ಬೇಡಿಕೆ ಸರಿದೂಗಿಸಬಹುದು. ಈ ನಿಟ್ಟಿನಲ್ಲಿ ಯುವ ಸಮುದಾಯ ಮುಂದೆ ಬರಬೇಕು ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ..ಜಗದೀಶ್ ಮಾತನಾಡಿ, ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಹೆಚ್ಚಿದೆ. ದೇಶದಲ್ಲಿ ಶೇ. 70 ಮಹಿಳೆಯರ ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆಯಿದೆ. ಗರ್ಭಿಣಿಯರು ಹೆರಿಗೆ ಸಂದರ್ಭದಲ್ಲಿ ರಕ್ತಹೀನತೆ ಕೊರತೆ ಅನುಭವಿಸುವುದರಿಂದ ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.

ಜಿಲ್ಲೆಗೆ ವಾರ್ಷಿಕ 16,000 ಯೂನಿಟ್ ರಕ್ತದ ಅವಶ್ಯಕತೆ ಬರಬಹುದು. ಕಳೆದ ಆರು ವರ್ಷಗಳಲ್ಲಿ ವಾರ್ಷಿಕ 10,900 ಯೂನಿಟ್​ಗಿಂತ ಹೆಚ್ಚು ಸಂಗ್ರಹವಾಗಿಲ್ಲ. ಹೀಗಾಗಿ ರಕ್ತದ ಕೊರತೆ ನೀಗಿಸಲು ಸ್ವಯಂ ಪ್ರೇರಿತ ರಕ್ತದಾನ ಪೋ›ತ್ಸಾಹಿಸಬೇಕು ಎಂದರು.

ಸನ್ಮಾನ: ಹೆಚ್ಚು ಬಾರಿ ರಕ್ತದಾನ ಮಾಡಿದ ರಘುವಂಶಿ, ಟಿ.ಎಂ.ಶಂಕರ್, ಲೋಕೇಶ್, ಬಿ.ಉಮೇಶ್, ರಾಜೇಶ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪವನ್ ನರ್ಸಿಂಗ್ ಕಾಲೇಜಿನ ಅರ್ಚಿತಾ(ಪ್ರ), ಎಸ್ಸೆನ್ನಾರ್ ಪ್ಯಾರಾಮೆಡಿಕಲ್ ವಿಭಾಗದ ಗಾಯತ್ರಿ (ದ್ವಿ), ಚನ್ನೇಗೌಡ ನರ್ಸಿಂಗ್ ಕಾಲೇಜಿನ ಮಂಜಿ ಮನೋಜ್ (ತೃ) ಬಹುಮಾನ ವಿತರಿಸಲಾಯಿತು.

ಜಿಲ್ಲಾ ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಬಿ. ಉಮೇಶ್, ಕಾಲೇಜು ಪ್ರಾಂಶುಪಾಲೆ ಭಾರತಿ, ಕೋಲಾರ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ರೇವತಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಹೇಮಲತಾ, ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಾಜರಿದ್ದರು.

ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಆರೋಗ್ಯವೂ ಉತ್ತಮವಾಗಿರುತ್ತದೆ. ಅವಶ್ಯವುಳ್ಳವರಿಗೆ ರಕ್ತ ನೀಡುವುದು ನಮ್ಮ ಜವಾಬ್ದಾರಿ. ಇದರಿಂದ ಸಮಾಜಕ್ಕೂ ಒಳ್ಳೆಯದಾಗುತ್ತದೆ.

| ರಘುವಂಶಿ, ರಕ್ತದಾನಿ, ಕೋಲಾರ

Leave a Reply

Your email address will not be published. Required fields are marked *