ವರ್ಗಾವಣೆ ಆರಂಭವಾಗದಿದ್ದರೆ ತರಗತಿ ಬಹಿಷ್ಕಾರ

ಹುಬ್ಬಳ್ಳಿ: ವರ್ಗಾವಣೆ ಕಾಯ್ದೆಯಲ್ಲಿನ ಲೋಪದೋಷ ಸರಿಪಡಿಸಿ ತಿಂಗಳೊಳಗೆ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗದಿದ್ದರೆ ತರಗತಿ ಬಹಿಷ್ಕಾರ, ಗ್ರಾಮೀಣ ಶಿಕ್ಷಕರಿಗೆ ಮಾಸಿಕ ವಿಶೇಷ ಗ್ರಾಮೀಣ ಭತ್ಯೆ ಮಂಜೂರಾತಿ ಸೇರಿದಂತೆ 15 ಗೊತ್ತುವಳಿಗನ್ನು ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಗೀಕರಿಸಿದೆ.

ನೂತನವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯಮಟ್ಟದ ಸಂಘಕ್ಕೆ ವಿಧ್ಯುಕ್ತ ಚಾಲನೆ ಮತ್ತು ಚರ್ಚೆ ಕುರಿತು ಇಲ್ಲಿಯ ದೇಶಪಾಂಡೆ ನಗರದ ಡೈಮಂಡ್ ಕಾರ್ನರ್​ನಲ್ಲಿ ಗುರುವಾರ ಜರುಗಿದ ಸಮಾರಂಭದಲ್ಲಿ ಈ ಗೊತ್ತುವಳಿ ಅಂಗೀಕರಿಸಲಾಯಿತು.

ಕ್ಲಸ್ಟರ್​ಗೆ ಒಂದು ಸ್ಮಾರ್ಟ್ ಶಾಲೆ ಸ್ಥಾಪನೆ, ಗ್ರಾಮೀಣ ವಲಯದಲ್ಲಿ ಅತಿ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರ ಪಟ್ಟಿ ತಯಾರಿಸಿ ವರ್ಗಾವಣೆ, ಹಳೇ ಪಿಂಚಣಿ ಯೋಜನೆ ಮರು ಸ್ಥಾಪನೆ, ಶಿಕ್ಷಕರ ಆಯೋಗ ರಚನೆ, ಚುನಾವಣೆ ಕರ್ತವ್ಯದ ಗೌರವಧನ ಹಾಗೂ ಎಲ್ಲ ಹಂತದ ತರಬೇತಿ ಭತ್ಯೆಗಳನ್ನು ಮೂರುಪಟ್ಟು ಹೆಚ್ಚಿಸಬೇಕು ಎಂಬ ಗೊತ್ತುವಳಿಗಳನ್ನು ಅಂಗೀಕರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರವಾನಿಸಲು ನಿರ್ಧರಿಸಲಾಯಿತು.

ನಿಗದಿಪಡಿಸಿದ ಸಂಘದ ಬೈಲಾ ನಿಬಂಧನೆ ಪುಸ್ತಕ ಹಾಗೂ ಸಂಘದ ನೋಂದಣಿ ಕಾರ್ಯಕ್ಕೆ ಸಭೆಯ ಸಮ್ಮತಿ ಪಡೆಯಲಾಯಿತು. ಸಂಘದ ಪದಾಧಿಕಾರಿಗಳು ಮಾತನಾಡಿ, ಶಿಕ್ಷಕರ ಸಮಸ್ಯೆ ಹಾಗೂ ಪರಿಹಾರಕ್ಕೆ ಒಗ್ಗೂಡುವಿಕೆ ಕುರಿತು ರ್ಚಚಿಸಿದರು.

ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಗುರು ಪೋಳ, ಎಸ್.ಬಿ. ಪಾಟೀಲ, ಶಂಕರ ಗಟ್ಟಿ, ಗುರು ತಿಗಡಿ, ಹೇಮಂತ ಕುಂದರಗಿ, ಪವಾಡೆಪ್ಪ, ಶಿವಾನಂದ ನಾಗೂರ, ಮಹ್ಮದ ರಫಿ, ಎಂ.ಐ. ಮುನವಳ್ಳಿ, ನಾರಾಯಣ ಭಜಂತ್ರಿ, ಕಲ್ಪನಾ ಚಂದನಕರ, ರಾಜೇಶ್ವರಿ ಪ್ರಭಾಕರ, ಎಲ್.ಐ. ಲಕ್ಕಮ್ಮನವರ, ಉಸ್ಮಾನ್ ಮುಲ್ಲಾ, ಅಶೋಕ ಸಜ್ಜನ, ಗೋವಿಂದ ಜುಜಾರೆ ಹಾಗೂ ಬೆಳಗಾವಿ, ಮೈಸೂರು, ಬೆಂಗಳೂರು, ಕಲಬುರಗಿ ವಿಭಾಗಗಳ ಗ್ರಾಮೀಣ ಶಿಕ್ಷಕರ ಮುಖಂಡರು ಪಾಲ್ಗೊಂಡಿದ್ದರು.