ವರುಣನ ಆರ್ಭಟಕ್ಕೆ ಪರದಾಡಿದ ಜನ

ವಿಜಯಪುರ: ಪಟ್ಟಣದಲ್ಲಿ ಗುರುವಾರ ಸಂಜೆ ಬಿದ್ದ ಭಾರಿ ಗಾಳಿ ಮಳೆಗೆ ಅನೇಕ ಮರಗಳು ಧರೆಗುರುಳಿದಿವೆ. ಸರ್ಕಾರಿ ಬಾಲಕರ ಪಾಠಶಾಲೆ ಮುಂಭಾಗದ ಅರಳಿಮರದ ಕೊಂಬೆ ಪಕ್ಕದಲ್ಲಿಯೇ ಇದ್ದ ಸಾರ್ವಜನಿಕ ತಂಗುದಾಣದ ಬಳಿ ಮುರಿದು ಬಿದ್ದುದರಿಂದ ಮಳೆ ಹಿನ್ನೆಲೆಯಲ್ಲಿ ಆಶ್ರಯ ಪಡೆದಿದ್ದ ಜನರನ್ನು ಕ್ಷಣಕಾಲ ಆತಂಕಕ್ಕೀಡು ಮಾಡಿತು.

ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಯಿತು. ರಸ್ತೆಯಲ್ಲಿ ಬಿದ್ದ ಮರದ ಕೊಂಬೆಗಳನ್ನು ಸಾರ್ವಜನಿಕರೇ ತೆರವುಗೊಳಿಸಿದರು. ಬಸವೇಶ್ವರ ಬಡಾವಣೆಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಬಳಿಯಿರುವ ಮರದ ಭಾರಿ ಗಾತ್ರದ ಕೊಂಬೆಯೊಂದು ಮುರಿದು ರಸ್ತೆಗೆ ಬಿದ್ದಿತು. ಬೆಂಗಳೂರು ಮುಖ್ಯರಸ್ತೆಯ ಆಸುಪಾಸಿನಲ್ಲಿರುವ ಮಾವಿನ ಮರಗಳಲ್ಲಿದ್ದ ಮಾವಿನ ಕಾಯಿಗಳು ಉದುರಿದ್ದು, ರಸ್ತೆಯಲ್ಲೆಲ್ಲಾ ಹರಡಿದ್ದವು.

ಚನ್ನರಾಯಪಟ್ಟಣ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೂರು ಮರಗಳು ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಪರಿಣಾಮವಾಗಿ ಸುಮಾರು ಒಂದೂವರೆ ಕಿಮೀ ವರೆಗೆ ವಾಹನಗಳು ನಿಲ್ಲುವಂತಾಯಿತು.

ಹೋಬಳಿಯ ವೆಂಕಟಗಿರಿಕೋಟೆಯಲ್ಲಿ ಚರಂಡಿ ನೀರು ಮನೆಗಳಿಗೂ ನುಗ್ಗಿ ಜನರು ಪರದಾಡಿದರು. ವೆಂಕಟೇನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬ ಮುರಿದು ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಹರಳೂರು-ನಾಗೇನಹಳ್ಳಿಯಲ್ಲಿ ಮನೆಯ ಶೀಟ್​ಗಳು ಹಾರಿಹೋಗಿವೆ.

Leave a Reply

Your email address will not be published. Required fields are marked *