ವರುಣನ ಆರ್ಭಟಕ್ಕೆ ನಲುಗಿದ ಕೋಲಾರ

ಕೋಲಾರ: ಜಿಲ್ಲೆಯ ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ಸೋಮವಾರ ಒಂದೇ ದಿನ ಸುರಿದ ಭಾರೀ ಮಳೆಗೆ 1832 ಹೆಕ್ಟೇರ್ ಪ್ರದೇಶದಲ್ಲಿ ಮಾವು, ಇನ್ನಿತರ ಬೆಳೆಗಳು ಹಾನಿಗೀಡಾಗಿದ್ದು, ರೈತರಿಗೆ 7.50 ಕೋಟಿ ರೂ. ನಷ್ಟ ಉಂಟಾಗಿದೆ.

ಕಳೆದ ಎರಡು ದಿನಗಳಿಂದ ಬೀಳುತ್ತಿದ್ದ ಮಳೆಗೆ ಇಳೆ ತಂಪಾಯಿತು ಎಂದು ರೈತ ನಿಟ್ಟುಸಿರು ಬಿಡುವಷ್ಟರಲ್ಲಿ ರಾತ್ರೋರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆಗೆ ಬೆಳೆ ಮಣ್ಣುಪಾಲಾಗಿದೆ. ಕಳೆದ ವರ್ಷ ಉತ್ತಮ ಫಸಲಿದ್ದರೂ ಮಾವು ಬೆಲೆ ಕುಸಿದು ಕಂಗಾಲಾಗಿದ್ದ ರೈತ ಈ ಬಾರಿಯಾದರೂ ಬಂಪರ್ ಬೆಲೆಯ ನಿರೀಕ್ಷೆ ಇಟ್ಟುಕೊಂಡಿದ್ದ. ಆದರೆ ಗಾಳಿ ಸಹಿತ ಮಳೆ ರೈತನ ನಿರೀಕ್ಷೆಯನ್ನು ಕೊಚ್ಚಿಹಾಕಿದೆ.

ಸೋಮವಾರ ರಾತ್ರಿ ಬಿದ್ದ ಮಳೆಗೆ ಕೋಲಾರದ ಜನ್ನಘಟ್ಟ, ಸುಗಟೂರು, ಚಿಟ್ನಹಳ್ಳಿ, ಮಾದಮಂಗಲ, ಮುದುವಾಡಿ, ಮಲ್ಲಸಂದ್ರ, ಹುತ್ತೂರು, ವಕ್ಕಲೇರಿ ಸೇರಿದಂತೆ ಒಟ್ಟು 60 ಹೆಕ್ಟೇರ್ ಪ್ರದೇಶದಲ್ಲಿ ಮಾವು ಇನ್ನಿತರ ಬೆಳೆಗಳು ಹಾನಿಗೀಡಾಗಿವೆ.

ಶ್ರೀನಿವಾಸಪುರದಲ್ಲಿ ಮಾವು ಬೆಳೆಗೆ ಭಾರೀ ಹಾನಿಯಾಗಿದ್ದು, ಕಲ್ಲೂರು, ನಂಬಿಹಳ್ಳಿ, ಹೂಹಳ್ಳಿ, ದಳಸನೂರು, ಗೌಡಹಳ್ಳಿಯಲ್ಲಿ ತಲಾ 6 ಹೆಕ್ಟೇರ್, ಬಂಗವಾದಿ, ರೋಜರಪಲ್ಲಿ, ಮಾಸ್ತೇನಹಳ್ಳಿ, ಗಾಂಡ್ಲಹಳ್ಳಿ, ಯಲ್ದೂರು, ಅತ್ತಿಕುಂಟೆ, ಹೊಗಳಗೆರೆ, ಹರಳಕುಂಟೆ, ಹೊಸಹಳ್ಳಿ, ಮಲ್ಲಗಾನಹಳ್ಳಿ, ಆಚಂಪಲ್ಲಿ, ಮುತ್ತಕಪಲ್ಲಿ ಸೇರಿ 1772 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೆ, ಶೇ.95ಕ್ಕೂ ಅಧಿಕ ಪ್ರದೇಶದಲ್ಲಿ ಮಾವು ಬೆಳೆ ಹಾನಿಯಾಗಿದೆ.

ಇತರೆ ತಾಲೂಕುಗಳಲ್ಲೂ ಬಾಳೆ, ಕ್ಯಾಪ್ಸಿಕಂ, ಹೂವು, ಟೊಮ್ಯಾಟೊ, ಪಪ್ಪಾಯ ಇನ್ನಿತರ ಬೆಳೆಗಳು ಹಾನಿಗೀಡಾಗಿವೆ. ಶ್ರೀನಿವಾಸಪುರದ ಗೌಡಹಳ್ಳಿಯಲ್ಲಿ ಪಪ್ಪಾಯಿ, ಮಾವು, ಬಾಳೆ ತೋಟ ಹಾಗೂ ಸುಮಾರು 7 ಮನೆಗಳಿಗೆ ಹಾನಿಯಾಗಿದೆ.

ನಗರ ಜೀವನ ಅಸ್ತವ್ಯಸ್ಥ: ಭಾರೀ ಮಳೆಗೆ ಕೋಲಾರ ನಗರದಲ್ಲೂ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಒಂದರ ಮೇಲೊಂದರಂತೆ ಬಂದೆರಗುತ್ತಿದ್ದ ಸಿಲಿಡಿಗೆ ಜನತೆ ಮನೆಯಿಂದ ಹೊರಬರಲು ಭಯಪಟ್ಟರು. ನಗರದ ಪಿಡಬ್ಲ್ಯುಡಿ ಇಲಾಖೆ, ನಗರಸಭೆ ಆವರಣ, ಚಿಕ್ಕಬಳ್ಳಾಪುರ ರಸ್ತೆ, ಕೋರ್ಟ್ ಆವರಣದ ಕ್ಯಾಂಟೀನ್ ಮುಂಭಾಗ, ಕೋರ್ಟ್ ವೃತ್ತ, ಗೌರಿಪೇಟೆ, ಇಟಿಸಿಎಂ ವೃತ್ತ ಇನ್ನಿತರೆಡೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ರಾತ್ರಿಯೇ ತೆರವು ಕಾರ್ಯಾಚರಣೆ ನಡೆಸಲಾಯಿತು.

ವಾಹನ ಜಖಂ: ಕೋಲಾರ ನಗರದ ಟೌನ್​ಕ್ಲಬ್ ಆವರಣದಲ್ಲಿ ವಿದ್ಯುತ್​ಕಂಬ ಬಿದ್ದು ದ್ವಿಚಕ್ರ ವಾಹನವೊಂದು ಜಖಂಗೊಂಡಿದೆ. ನಗರಸಭೆ ಆವರಣದಲ್ಲಿ 3 ವಿದ್ಯುತ್ ಕಂಬ ಸೇರಿ 15ಕ್ಕೂ ಹೆಚ್ಚು ಕಂಬಗಳು ಹಾನಿಗೀಡಾಗಿದ್ದು, ಮರಗಳ ತೆರವು, ವಿದ್ಯುತ್ ಸಂಪರ್ಕ ಸರಿಪಡಿಸಲು ಬೆಸ್ಕಾಂ ಸಿಬ್ಬಂದಿ ರಾತ್ರಿಯಿಡೀ ಪರದಾಡಿದರೂ ಸಾಧ್ಯವಾಗದೆ 12 ಗಂಟೆಗೂ ಹೆಚ್ಚು ಸಮಯ ಹಿಡಿದಿದ್ದರಿಂದ ಜನ ಕತ್ತಲಲ್ಲಿರುವಂತಾಗಿತ್ತು.

ಮನೆಗಳಿಗೆ ನುಗ್ಗಿದ ನೀರು: ತಗ್ಗು ಪ್ರದೇಶಗಳಾದ ಗಾಂಧಿನಗರ, ರಹಮತ್ ನಗರ, ಮಿಲ್ಲತ್ ನಗರದ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದರಿಂದ ತೊಂದರೆಯಾಯಿತು. ನಿವಾಸಿಗಳು ಮನೆಯೊಳಗಿದ್ದ ಕೊಚ್ಚೆ ನೀರನ್ನು ತೆರವುಗೊಳಿಸುವ ಕಾರ್ಯಕ್ಕೆ ನಿದ್ರಾಭಂಗ ಅನುಭವಿಸುವಂತಾಯಿತು.

ಶೇ.74ರಷ್ಟು ಅಧಿಕ ಮಳೆ: ಜಿಲ್ಲೆಯಲ್ಲಿ ಜ.1ರಿಂದ ಏ.23ರವರೆಗೆ ದಾಖಲಾಗಿರುವ ಮಳೆ ಪ್ರಮಾಣವು ಸಾಮಾನ್ಯ ಸರಾಸರಿಗಿಂತ ಶೇ. 74ರಷ್ಟು ಅಧಿಕವಾಗಿದೆ. ಕಳೆದ ಸಾಲಿನಲ್ಲಿ ಈ ವೇಳೆ ಸಾಮಾನ್ಯ ಸರಾಸರಿಗಿಂತ ಶೇ.45ರಷ್ಟು ಅಧಿಕ ಮಳೆ ಅಂದರೆ 47 ಮಿಮೀ ವಾಡಿಕೆ ಮಳೆಗೆ 69 ಮಿಮೀ ಮಳೆ ದಾಖಲಾಗಿತ್ತು. ಏ.22ರಂದು ಬಂಗಾರಪೇಟೆಯಲ್ಲಿ 13.83 ಮಿಮೀ, ಕೋಲಾರದಲ್ಲಿ 18.28 ಮಿಮೀ, ಮಾಲೂರಿನಲ್ಲಿ 13 ಮಿಮೀ, ಮುಳಬಾಗಿಲಿನಲ್ಲಿ 3.4 ಮಿಮೀ, ಶ್ರೀನಿವಾಸಪುರದಲ್ಲಿ 10 ಮಿಮೀ ಸೇರಿ ಸರಾಸರಿ 12 ಮಿಮೀ ಮಳೆಯಾಗಿದೆ.

 

Leave a Reply

Your email address will not be published. Required fields are marked *