ವರುಣನ ಆರ್ಭಟಕ್ಕೆ ಕಿತ್ತುಹೋದ ರಸ್ತೆ

ಮುಂಡರಗಿ: ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಹಾರೋಗೇರಿ- ಕೆಲೂರ ಗ್ರಾಮಗಳದ ಮಧ್ಯದ, ಎರೆಹಳ್ಳದ ಮೇಲಿನ ರಸ್ತೆ ಕಿತ್ತುಹೋಗಿದೆ. ಮಳೆಯಿಂದಾಗಿ ಕಪ್ಪತಗುಡ್ಡದಿಂದ ಹರಿದು ಬರುವ ನೀರು ಎರೆಹಳ್ಳದ ಮೂಲಕ ಕೆಲೂರ ಕೆರೆ ಸೇರುತ್ತದೆ. ಹಾರೋಗೇರಿ-ಕೆಲೂರ ರಸ್ತೆ ಮಧ್ಯೆ ಇರುವ ಎರೆಹಳ್ಳಕ್ಕೆ ಸಿಮೆಂಟ್ ಪೈಪ್ ಹಾಕಿ ಮೇಲ್ಭಾಗದಲ್ಲಿ ಮಣ್ಣಿನ ರಸ್ತೆ ಮಾಡಲಾಗಿದೆ. ರಭಸದ ಮಳೆಗೆ ಸಿಮೆಂಟ್ ಪೈಪ್ ಮೇಲಿನ ರಸ್ತೆಯ ಅರ್ಧಭಾಗ ಹಾನಿಯಾಗಿದೆ. ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಭಾನುವಾರ ಮತ್ತು ಸೋಮವಾರ ಬಸ್ ಸಂಚಾರ, ಖಾಸಗಿ ವಾಹನಗಳು ಸಹ ಈ ಭಾಗದಲ್ಲಿ ಸಂಚರಿಸಿಲ್ಲ. ಹಾರೋಗೇರಿ ಭಾಗದಿಂದ ಕೆಲೂರ, ಮುರುಡಿ ಗ್ರಾಮದ ಮೂಲಕ ಶಿರಹಟ್ಟಿಗೆ ತೆರಳುವವರು ಹಾಗೂ ಕೆಲೂರ ಭಾಗದಿಂದ ಹಾರೋಗೇರಿ, ಮುಂಡರಗಿ, ಡಂಬಳ, ಗದಗ ಭಾಗಕ್ಕೆ ಸಂಚರಿಸುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಎರೆಹಳ್ಳಕ್ಕೆ ಸಿಮೆಂಟ್ ಪೈಪ್ ಹಾಕಿ ಮೇಲ್ಭಾಗದಲ್ಲಿ ಮಣ್ಣಿನ ರಸ್ತೆ ಮಾಡಿದ್ದರಿಂದ ಮಳೆ ಬಂದಾಗ ರಸ್ತೆಯು ಕಿತ್ತು ಹೋಗುತ್ತದೆ. ಇದರಿಂದಾಗಿ ಈ ಭಾಗದ ಮೂಲಕ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಎರೆಹಳ್ಳಕ್ಕೆ ಕಿರು ಸೇತುವೆ ನಿರ್ವಿುಸಿ ಶಾಶ್ವತ ಪರಿಹಾರ ಒದಗಿಸಬೇಕು.
| ಮಳ್ಳಪ್ಪ ಬೂದಿಹಾಳ, ಕೆಲೂರ ಗ್ರಾಮಸ್ಥ

ಗರಿಗೆದರಿದ ಕೃಷಿ ಚಟುವಟಿಕೆ

ಗಜೇಂದ್ರಗಡ: ಭಾನುವಾರ ಸುರಿದ ಮಳೆಯಿಂದಾಗಿ ತಾಲೂಕಿನ ರೈತರಲ್ಲಿ ಸಂತಸ ಮೂಡಿಸಿದ್ದು ಬಿತ್ತನೆ ಕಾರ್ಯ ಆರಂಭಿಸಲಾಗಿದೆ. ಜಿಗೇರಿ, ನಾಗರಸಕೊಪ್ಪ, ಬೆಣಸಮಟ್ಟಿ, ನಾಗೇಂದ್ರಗಡದ ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ತಾಲೂಕಿನ ವಿವಿಧ ಭಾಗದ ಸಣ್ಣ ಕೆರೆಗಳು ತುಂಬುವ ಹಂತ ತಲುಪಿವೆ. ಅಲ್ಲದೆ, ಚೆಕ್​ಡ್ಯಾಮ್ ಬೆಟ್ಟದ ತಪ್ಪಲು ಹಾಗೂ ತಗ್ಗು ಪ್ರದೇಶಗಳಲ್ಲಿನ ಕೃಷಿ ಹೊಂಡಗಳು ತುಂಬಿ ನಳನಳಿಸುತ್ತಿವೆ.

ಇಟಗಿಯಲ್ಲಿ ಶಾಲೆಗೆ ನುಗ್ಗಿದ ಚರಂಡಿ ನೀರು: ಇಟಗಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಚರಂಡಿ ನೀರು ನುಗ್ಗಿದೆ. ಭಾರಿ ಮಳೆ ಬಂದಾಗಲೆಲ್ಲ ಚರಂಡಿ ನೀರು ಶಾಲೆಯ ಮೈದಾನಕ್ಕೆ ನುಗ್ಗುವುದು ಸಾಮಾನ್ಯ ಎನ್ನುವಂತಾಗಿದೆ. ದುರ್ನಾತದಿಂದಾಗಿ ಶಾಲೆಯ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಗ್ರಾ.ಪಂ ಜಾಣ ಕರುಡುತನ ಪ್ರದರ್ಶಿಸುವುದನ್ನು ಬಿಟ್ಟು, ಚರಂಡಿ ನೀರು ಬೇರೆಡೆ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಕೆರೆಗಳು ಬತ್ತಿದ್ದರಿಂದ ಕೃಷಿ ಹಾಗೂ ಜಾನುವಾರುಗಳಿಗೆ ನೀರಿಗೆ ತೊಂದರೆಯಾಗಿತ್ತು. ಈಗ ಉತ್ತಮ ಮಳೆಯಾಗಿದ್ದು ಕೆರೆಗಳಿಗೆ ನೀರು ಬಂದಿರುವುದು ಸಮಸ್ಯೆ ನಿವಾರಣೆಯಾದಂತಾಗಿದೆ. ಅಂತರ್ಜಲ ಮಟ್ಟ ವೃದ್ಧಿಯಾಗಿ ಕೊಳವೆ ಬಾವಿಗಳು ಮರುಜೀವ ಪಡೆದುಕೊಳ್ಳಲಿವೆ.
| ಸುಭಾನಸಾಬ ಅರಗಿದ್ದಿ, ರೈತ

ಗೂಡಿನಿಂದ ಹೊರಬಂದ ಮಳೆಹುಳು

ಗಜೇಂದ್ರಗಡ: ತಾಲೂಕಿನಲ್ಲಿ ವರ್ಷಧಾರೆಯ ಅಬ್ಬರ ಶುರುವಾಗುತ್ತಿದ್ದಂತೆಯೇ ಗೆದ್ದಲು ಹುಳುಗಳು ಗೂಡಿನಿಧಮನ ಆಚೆ ಬಂದು ರೆಕೆಕ ಬಿಚ್ಚಿ ಹಾರತೊಡಗಿವೆ. ಕಾಲಕಾಲೇಶ್ವರ ಗ್ರಾಮದಲ್ಲಿ ಭಾನುವಾರ ಮಳೆಯಾಗಿದ್ದರಿಂದ ಸೋಮವಾರ ಹೊರ ಬಂದ ಗೆದ್ದಲು ಹುಳುಗಳನ್ನು ತಿನ್ನಲು ಹಕ್ಕಿಗಳು, ನಾಯಿ, ಅಳಿಲುಗಳು ಕಾಯುತ್ತಿದ್ದ ದೃಶ್ಯ ಕಂಡುಬಂತು.

ಬೇಸಿಗೆ ಮುಗಿದು ಮಳೆ ಶುರುವಾಗುತ್ತಿದ್ದಂತೆಯೇ ರೆಕ್ಕೆ ಹೊಂದಿದ ಸಾವಿರಾರು ಸಂಖ್ಯೆಯ ಪುಟ್ಟ ಕೀಟಗಳು ಬೆಳಕಿಗೆ ಬರುತ್ತವೆ. ಮಳೆಹುಳು ಎಂದು ಕರೆಯಲ್ಪಡುವ ಇವುಗಳು ರೆಕ್ಕೆ ಮೂಡಿದ ಗೆದ್ದಲುಗಳು. ತಂಪಾದ ವಾತಾವರಣವಿದ್ದಾಗ ಮಾತ್ರ ಗೂಡಿನಿಂದ ಹೊರ ಬರುತ್ತವೆ. ಮರಮುಟ್ಟುಗಳ ಮೇಲೆ, ಒಣಗಿ ಬಿದ್ದ ದಿಮ್ಮಿಗಳ ಕೆಳಗೆ, ಭೂಮಿಯೊಳಗೆ ಇವು ಗೂಡು ಕಟ್ಟಿಕೊಳ್ಳುತ್ತವೆ. ಕೆಲವು ಜಾತಿಯ ಗೆದ್ದಲುಗಳು ಎತ್ತರವಾಗಿ ಹುತ್ತ ನಿರ್ವಿುಸುತ್ತವೆ.

ಜಲಾಭಿಷೇಕ, ರುದ್ರಪಠಣ ಸಂಪನ್ನ

ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ವರುಣನ ಕೃಪೆಗಾಗಿ ಹನ್ನೊಂದು ದಿನಗಳ ಕಾಲ ಜರುಗಿದ ಶ್ರೀ ಸೋಮೇಶ್ವರ ಜಲಾಭಿಷೇಕ, ರುದ್ರ ಪಠಣ, ವಿಶೇಷ ಪೂಜಾ ಕೈಂಕರ್ಯ ಸೋಮವಾರ ಸಂಪನಗೊಂಡಿತು.

ಸೋಮವಾರ ಪೂಜಾ ಕಾರ್ಯಕ್ರಮ ಸಂಪನ್ನಗೊಳಿಸಿದ ಸಂದರ್ಭದಲ್ಲಿ ಉದ್ಯಾಪನ, ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ಹಾಗೂ 11 ದಂಪತಿಗಳಿಂದ ಬಿಲ್ವಾರ್ಚನೆ, ಕಲ್ಯಾಣಿ ಪೂಜೆ ಮಾಡಲಾಯಿತು.

ದೇವಸ್ಥಾನ ಭಕ್ತರ ಟ್ರಸ್ಟ್​ನ ಪ್ರಮುಖರಾದ ಸೋಮಣ್ಣ ಮುಳಗುಂದ, ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ಬಸವರಾಜ ಮೆಣಸಿನಕಾಯಿ, ಶಿವಯೋಗಿ ಅಂಕಲಕೋಟಿ, ಸೋಮಣ್ಣ ಅಣ್ಣಿಗೇರಿ, ಶಿವಣ್ಣ ವಡಕಣ್ಣವರ, ಶಿವಾನಂದ ಮೆಕ್ಕಿ, ಗಂಗಾಧರಯ್ಯ ಪುರಾಣಿಮಠ ಸೇರಿ ಅನೇಕರಿದ್ದರು. ಅರ್ಚಕ ಸಮೀರ್ ಪೂಜಾರ ನಿರ್ವಸಿದರು.

ಮನೆಗಳಿಗೆ ನುಗ್ಗಿದ ನೀರು

ನರಗುಂದ: ಪಟ್ಟಣ ಸೇರಿ ತಾಲೂಕಿನಾದ್ಯಂತ ಸೋಮವಾರ ನಾಲ್ಕು ಗಂಟೆ ಕಾಲ ಸುರಿದ ಭಾರಿ ಮಳೆಗೆ ನರಗುಂದ ಪಟ್ಟಣದ ದಂಡಾಪೂರ ಬಡಾವಣೆಯ ಮನೆಗಳು, ಆಸ್ಪತ್ರೆ, ಕಾಲೇಜಿಗೆ ನೀರು ನುಗ್ಗಿದ್ದು, ಜಮೀನಲ್ಲಿರುವ ಒಡ್ಡುಗಳು ಒಡೆದು ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ತಾಲೂಕಿನಾದ್ಯಂತ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಎರಡು ಗಂಟೆಗೆ ಏಕಾಏಕಿ ಮಳೆ ಸುರಿದ ಪರಿಣಾಮ ನರಗುಂದ ಪಟ್ಟಣದ ಗುಡ್ಡದ ಬದಿಯಲ್ಲಿರುವ ಸರ್ಕಾರಿ ಐಟಿಐ ಕಾಲೇಜಿಗೆ ನೀರು ನುಗ್ಗಿದೆ. ಜೆಸಿಬಿ ಮೂಲಕ ಕಾಲೇಜ್ ಪಕ್ಕದ ಚರಂಡಿ ಸ್ವಚ್ಛಗೊಳಿಸಿದ ಪರಿಣಾಮ ನೀರು ಸರಾಗವಾಗಿ ಹರಿಯಿತು.

ದಂಡಾಪೂರ ಬಡಾವಣೆಯ ರೇಣುಕಾ ಚಿತ್ರ ಮಂದಿರದ ಬಳಿಯ ತಗ್ಗು ಪ್ರದೇಶದ ಲಕ್ಷ್ಮವ್ವ ದುಂಡಿ, ಗುಡದಪ್ಪ ಅವಟಿ, ಮಲ್ಲಪ್ಪ ಹನಸಿ ಎಂಬುವರ ಮನೆಗೆ ನೀರು ನುಗ್ಗಿ ಅವ್ಯವಸ್ಥೆ ಉಂಟಾಗಿತ್ತು. ಪಶು ಆಸ್ಪತ್ರೆ ಕಚೇರಿಗೂ ಅಪಾರ ಪ್ರಮಾಣದ ನೀರು ನುಗ್ಗಿತ್ತು.

ಒಡೆದು ಹೋದ ಒಡ್ಡುಗಳು:ಚಿಕ್ಕನರಗುಂದ ಭಾಗದ ಕೆಲವು ಜಮೀನುಗಳಲ್ಲಿನ ಒಡ್ಡುಗಳು ಒಡೆದು ಹೋಗಿವೆ. ಜನತಾ ಪ್ಲಾಟ್, ವಿನಾಯಕನಗರ, ಸರಸ್ವತಿನಗರ, ಸೇರಿ ವಿವಿಧ ಪ್ರದೇಶಗಳಲ್ಲಿ ರಸ್ತೆಯ ಮೇಲೆ ಹೆಚ್ಚಿನ ಪ್ರಮಾಣದ ನೀರು ಹರಿಯಿತು. ಪರಿಣಾಮ ವಾಹನ ಸವಾರರು ಕೆಲಕಾಲ ತೊಂದರೆ ಪಟ್ಟರು. ಸಂಜೆ 6-40 ರಿಂದ ಮತ್ತೇ ಬೃಹತ್ ಪ್ರಮಾಣದ ಮಳೆ ಸುರಿಯಲು ಪ್ರಾರಂಭವಾಯಿತು.

ಜಲಾವೃತ ಪ್ರದೇಶಕ್ಕೆ ತಹಸೀಲ್ದಾರ್ ಭೇಟಿ

ಶಿರಹಟ್ಟಿ: ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಜಲ್ಲಿಗೇರಿ ತಾಂಡಾದಲ್ಲಿ ಜಲಾವೃತಗೊಂಡ ಪ್ರದೇಶವನ್ನು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಸೋಮವಾರ ಪರಿಶೀಲಿಸಿದರು.

ಪ್ರತಿ ವರ್ಷವೂ ಮಳೆಯಾದಾಗ ಹೊಲಗಳಿಂದ ಹಾಗೂ ರಸ್ತೆಯಿಂದ ಹರಿದು ಬರುವ ತಾಂಡಾದಲ್ಲಿ ಶೇಖರಣೆಯಾಗಿ ಕೆರೆಯಂತಾಗುತ್ತದೆ. ಮನೆಗಳು ಜಲಾವೃತಗೊಂಡು ತೊಂದರೆ ಉಂಟಾಗುತ್ತದೆ ಎಂದು ಸ್ಥಳೀಯರಾದ ವೀರಣ್ಣ ಚವ್ಹಾಣ ಇತರರು ಅಳಲು ತೋಡಿಕೊಂಡರು.

ಮನೆಗೆ ನುಗ್ಗಿದ ನೀರನ್ನು ಹೊರಗೆ ಹಾಕುವುದೇ ಪ್ರಮುಖ ಕೆಲಸವಾಗುತ್ತದೆ. ಜಾನುವಾರುಗಳಿಗೆ ಸಂಗ್ರಹಿಸಿಟ್ಟ ಮೇವು, ಹೊಟ್ಟು ಸಹ ನೀರು ಪಾಲಾಗುತ್ತದೆ. ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಗೋಣೆಣ್ಣವರ ಮಾತನಾಡಿ, ‘ಸದ್ಯ ವರವಿ, ಜಲ್ಲಿಗೇರಿ ಸಂಪರ್ಕ ರಸ್ತೆಯನ್ನು ಅಗೆದು ನೀರು ಹರಿದು ಹೋಗಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ, ರೈತರ ಜಮೀನುಗಳಿಗೆ ಧಕ್ಕೆ ಭಾರದಂತೆ ಗ್ರಾಮ ನಕ್ಷೆ ಪ್ರಕಾರ ಯೋಗ್ಯ ಸ್ಥಳದಲ್ಲಿ ನೀರು ಹರಿದು ಹೋಗಲು ಅಡ್ಡಚರಂಡಿ ನಿರ್ವಿುಸಲಾಗುತ್ತದೆ. ಈ ಕುರಿತು ಮೇಲಧಿಕಾರಿಗಳೊಮದಿಗೆ ರ್ಚಚಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಜಿಪಂ ಎಇ ನಾಗರತ್ನಾ, ಕಂದಾಯ ನಿರೀಕ್ಷಕ ಎಂ.ಬಿ. ಮುಗದುಮ್ ಗ್ರಾಮ ಲೆಕ್ಕಿಗ ಚಂದ್ರು ನಾಯಕ, ಪಿಡಿಒ ಕಪ್ಪಲಿ ಹಾಗೂ ಭೂಮಾಪನ ಇಲಾಖೆ ಸಹಾಯಕ ಇದ್ದರು.

Leave a Reply

Your email address will not be published. Required fields are marked *