ವರುಣನ ಅಬ್ಬರಕ್ಕೆ ಧರೆಗುರುಳಿದ ಬಾಳೆ

ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಮಳೆ ಒಂದೆಡೆ ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸಿದರೆ ಗಾಳಿಯ ರಭಸಕ್ಕೆ ಅಪಾರ ಹಾನಿ ಸಂಭವಿಸಿದೆ.

ಕೊಪ್ಪಳ ರಸ್ತೆಯಲ್ಲಿರುವ ಶಿವಪುತ್ರಪ್ಪ ಹುಬ್ಬಳ್ಳಿ ಅವರ ಬಾಳೆ ತೋಟದಲ್ಲಿ ಸುಮಾರು 150ಕ್ಕೂ ಹೆಚ್ಚು ಗಿಡಗಳು ಗಾಳಿ-ಮಳೆಗೆ ನೆಲಕ್ಕುರುಳಿವೆ.

ಗುರುವಾರ ಮಧ್ಯಾಹ್ನ ಮತ್ತು ರಾತ್ರಿ ಸುರಿದ ಮಳೆಗೆ ಕೆಲವೆಡೆ ಹಳ್ಳಗಳಲ್ಲಿ ನೀರು ಹರಿದಿದ್ದು, ಕನಕರಾಯನಗುಡ್ಡದ ಮುಂದಿರುವ ಹಿರೇಹಳ್ಳದಲ್ಲಿ ಚೆಕ್ ಡ್ಯಾಮ್ ತುಂಬಿದೆ. ಇನ್ನು ಅನೇಕ ಕಡೆ ಜಮೀನುಗಳ ಬದುವಿನಲ್ಲಿ ಮಳೆ ನೀರು ನಿಂತಿವೆ.

ಪಟ್ಟಣದ ಬಸವೇಶ್ವರ ನಗರದಲ್ಲಿ ಜೋರಾಗಿ ಗಾಳಿ ಬಿಸಿದ ಪರಿಣಾಮ ವಿದ್ಯುತ್ ಕಂಬ ಮುರಿದಿದೆ. ನದಿ ನೀರು ಸರಬರಾಜು ಘಟಕದ, ಸುಣ್ಣಗಾರ ಓಣಿ, ಸಿಂಡಿಕೇಟ್ ಬ್ಯಾಂಕ್ ಹಿಂದೆ, ಹುಡ್ಕೋ ಕಾಲನಿ, ಅನ್ನದಾನೀಶ್ವರ ನಗರದಲ್ಲಿ ಹಾನಿ ಸಂಭವಿಸಿದೆ. ಜಾಗೃತ್ ವೃತ್ತದಲ್ಲಿ ಬೃಹತ್ ಬೇವಿನ ಮರವು ವಿದ್ಯುತ್ ಕಂಬದ ತಂತಿ ಮೇಲೆ ಬಿದ್ದ ಪರಿಣಾಮ ತಂತಿ ಹರಿದು ಬಿದ್ದಿದೆ. ಸುಣ್ಣಗಾರ ಓಣಿಯಲ್ಲಿ ಬೃಹತ್ ಮರ ವಿದ್ಯುತ್ ಲೈನ್ ಮೇಲೆ ಬಿದ್ದ ತಕ್ಷಣ ವಿದ್ಯುತ್ ಕಂಬ ತಕ್ಷಣ ಮುರಿದಿದೆ. ಶುಕ್ರವಾರ ಹೆಸ್ಕಾಂ ಸಿಬ್ಬಂದಿ ಹೊಸ ಕಂಬ ಅಳವಡಿಸಿ ವಿದ್ಯುತ್ ಲೈನ್ ಹಾಕಿದ್ದಾರೆ.

ತಾಲೂಕಿನ ಮೇವುಂಡಿ ಗ್ರಾಮದ ಕೊಟ್ರಪ್ಪ ಬ್ಯಾಳಿ ಅವರ ಮನೆಯ ಛಾವಣಿ ಕುಸಿದು ಬಿದ್ದಿದೆ. ವೀರೇಶ ಸಿದ್ನೇಕೊಪ್ಪ ಅವರು 9 ತಗಡಿನಿಂದ ಹಾಕಿದ್ದ ಶೆಡ್ ಗಾಳಿಗೆ ಹಾರಿ ಹೋಗಿದ್ದು, ಶೆಡ್​ನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಸಿಮೆಂಟ್ ಚೀಲ ಹಾನಿಯಾಗಿವೆ.